ಚಲಿಸುವ ಮೆಟ್ರೋ ರೈಲಿನಲ್ಲಿ ನಾರಿಯರ ಫ್ಯಾಷನ್ ಶೋ.. ವೀಡಿಯೋ ವೈರಲ್
ಇತ್ತೀಚೆಗೆ ಮಟ್ರೋ ರೈಲುಗಳು ಪ್ರಯಾಣದ ಕಾರಣಕ್ಕಿಂತ ಹೆಚ್ಚು ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಸೋಶಿಯಲ್ ಮೀಡಿಯಾ ಸ್ಟಾರ್ಗಳು ಮೆಟ್ರೋ ರೈಲುಗಳನ್ನು ಸದಾ ಸುದ್ದಿಯಲ್ಲಿರುವಂತೆ ಮಾಡುತ್ತಿದ್ದಾರೆ
ನಾಗಪುರ: ಇತ್ತೀಚೆಗೆ ಮಟ್ರೋ ರೈಲುಗಳು ಪ್ರಯಾಣದ ಕಾರಣಕ್ಕಿಂತ ಹೆಚ್ಚು ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಸೋಶಿಯಲ್ ಮೀಡಿಯಾ ಸ್ಟಾರ್ಗಳು ಮೆಟ್ರೋ ರೈಲುಗಳನ್ನು ಸದಾ ಸುದ್ದಿಯಲ್ಲಿರುವಂತೆ ಮಾಡುತ್ತಿದ್ದಾರೆ. ಮೆಟ್ರೋ ರೈಲಿನ ಒಳಗೆ ಡಾನ್ಸ್ ಮಾಡುವ ಬ್ಯಾಕ್ ಪ್ಲಿಪ್ ಮಾಡುವುದು ಸೇರಿದಂತೆ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚೆಯನ್ನು ಹುಟ್ಟು ಹಾಕಿದ್ದವು. ಅದೇ ರೀತಿ ಈಗ ಚಲಿಸುತ್ತಿರುವ ಮೆಟ್ರೋ ರೈಲಿನ ಒಳಾಂಗಣದ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗಪುರದ ಮೆಟ್ರೋ ರೈಲಿನ ವೀಡಿಯೋ ಇದಾಗಿದ್ದು, ಚಲಿಸುವ ರೈಲೊಳಗೆ ನಾರಿಯರು ಬಿಂದಾಸ್ ಆಗಿ ಕ್ಯಾಟ್ವಾಕ್ ಮಾಡಿ ನೋಡುಗರ ಮನ ಗೆದ್ದಿದ್ದಾರೆ. ಫ್ಯಾಷನ್ಗೆ ಮಿತಿ ಎಂಬುದಿಲ್ಲ, ಈಗಿನ ಕಾಲದಲ್ಲಂತೂ ಮಹಾನಗರಗಳಲ್ಲಿ ಏನು ಮಾಡಿದ್ರೂ ಫ್ಯಾಷನ್ ಎಂಬಂತಾಗಿದೆ. ಅದೇ ರೀತಿ ಇಲ್ಲಿ ಮೆಟ್ರೋ ರೈಲಿನ ಒಳಗೆ ಮಾಡೆಲ್ಗಳು ಫ್ಯಾಷನ್ ಶೋ ಮಾಡಿದ್ದು, ಒಬ್ಬೊಬ್ಬರೇ ಮಾಡೆಲ್ಗಳು ಮೆಟ್ರೋ ರೈಲಿನ ಮಧ್ಯೆ ಇರುವ ಜಾಗದಲ್ಲಿ ಒಬ್ಬೊಬ್ಬರೇ ಬರುತ್ತಿದ್ದರೆ ಮೆಟ್ರೋದಲ್ಲಿದ್ದ ಪ್ರಯಾಣಿಕರು ಈ ಶೋವನ್ನು ಅಚ್ಚರಿಯಿಂದ ನೋಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಮೆಟ್ರೋದಲ್ಲಿ ಸೀಟ್ ಫ್ರ್ಯಾಂಕ್: ಈ ವಿಡಿಯೋ ನೋಡಿದ್ರೆ ನಗದಿರಲು ಸಾಧ್ಯವಿಲ್ಲ ನೋಡಿ
ನಾಗಪುರದ ಮೆಟ್ರೋ ರೈಲಿನಲ್ಲಿ ಈ ಫ್ಯಾಷನ್ ಲೋಕದ ಹೊಸ ಸಾಹಸ ನಡೆದಿದೆ. ಇಲ್ಲಿ ಡಿಸೈನರ್ ಉಡುಪು ಧರಿಸಿ ಬಂದ ಮಾಡೆಲ್ಗಳು ಬಿಂದಾಸ್ ಆಗಿ ಚಲಿಸುವ ರೈಲಿನಲ್ಲಿ ಕ್ಯಾಟ್ವಾಕ್ ಮಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, 2 ವರ್ಷದಿಂದ 50 ವರ್ಷದವರೆಗಿನ ಮಾಡೆಲ್ಗಳು ಈ ಶೋದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. 'ಸೆಲೆಬ್ರೇಷನ್ ಆನ್ ವ್ಹೀಲ್' ಸ್ಕೀಮ್ನಡಿ ಈ ಫ್ಯಾಷನ್ ಶೋ ನಡೆದಿದೆ ಎಂದು ವರದಿ ಆಗಿದೆ.
ಈ ಫ್ಯಾಷನ್ ಶೋದಲ್ಲಿ ಮಹಿಳೆಯರು ವಿವಿಧ ಬಣ್ಣದ ಅಧ್ಬುತವಾದ ಧಿರಿಸು ಧರಿಸಿ ಹೆಜ್ಜೆ ಹಾಕುವುದನ್ನು ಕಾಣಬಹುದಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳ ಉದಯೋನ್ಮುಖ ಡಿಸೈನರ್ಗಳು ವಿನ್ಯಾಸಗೊಳಿಸಿದ ಧಿರಿಸು ಇವುಗಳಾಗಿದ್ದು, 'ಸೆಲೆಬ್ರೇಶನ್ ಆನ್ ವೀಲ್'ನ ವಿಶಿಷ್ಟ ಯೋಜನೆಯಡಿ, ಸಣ್ಣ ಮಟ್ಟಿನ ಶುಲ್ಕದೊಂದಿಗೆ ಈ ರೀತಿ ಕಾರ್ಯಕ್ರಮ ಆಯೋಜಿಸಲು ನಾಗ್ಪುರ ಮೆಟ್ರೋ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಈ ಫ್ಯಾಷನ್ ಶೋವನ್ನು ಮೆಟ್ರೋ ಪ್ರಯಾಣಿಕರು ಕೂಡ ಖುಷಿಯಿಂದಲೇ ಸ್ವಾಗತಿಸಿದ್ದು, ಮಾಡೆಲ್ಗಳು ಕ್ಯಾಟ್ವಾಕ್ ಮಾಡುತ್ತಿದ್ದರೆ, ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ. ಅನೇಕರು ಮಾಡೆಲ್ಗಳು ಹಾಗೂ ವಿನ್ಯಾಸಕರರ ಈ ವಿಭಿನ್ನ ಕ್ರಮವನ್ನು ಶ್ಲಾಘಿಸಿದ್ದಾರೆ.