ಹುಟ್ಟಹಬ್ಬದ ದಿನ ಅಭಿಮಾನಿಗಳು, ಆಪ್ತರು ಸಂದೇಶ ರವಾನಿಸಿದ್ದರು. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಮಿಸ್ ಬ್ಯೂಟಿ ಆಯೋಜಕ ಸಂಸ್ಥೆ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದೆ. ಎಲ್ಲರ ನೆಚ್ಚಿನ ಮಿಸ್ ಅರ್ಥ್ ವಿಜೇತ ನಿಧನರಾಗಿದ್ದಾರೆ ಎಂದಿದೆ.
ಇಂಡೋನೇಷಿಯಾ (ಆ.16) ಮಿಸ್ ಅರ್ಥ ಕಿರೀಟ ಗೆದ್ದ ಸುಂದರಿ. 26ನೇ ವರ್ಷದ ಹುಟ್ಟಹಬ್ಬಕ್ಕೆ ರಾತ್ರಿಯಿಂದಲೇ ಶುಭಾಶಯಗಳು ಹರಿದು ಬರಲು ಆರಂಭಿಸಿದೆ. ಸೋಶಿಯಲ್ ಮೀಡಿಯಾ, ಫೋನ್ ಸೇರಿದಂತೆ ಎಲ್ಲೆಡೆಗಳಿಂದ ಸಂದೇಶಗಳು ಹರಿದು ಬಂದಿದೆ. ಆದರೆ ಪ್ರತಿಕ್ರಿಯೆ ಮಾತ್ರ ಇರಲಿಲ್ಲ. ಬೆಳಗಾಗುತ್ತಿದ್ದಂತೆ ಅಭಿಮಾನಿಗಳು, ಆಪ್ತರು, ಸೌಂದರ್ಯ ಲೋಕದ ಹಲವರು ಆಘಾತಗೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಅರ್ಥ್ ಕಿರೀಟ ಗೆಲ್ಲುವ ಮೂಲಕ ವಿಶ್ವದ ಗಮನಸೆಳೆದಿದ್ದ ಕೇವಲ 26 ಹರೆಯದ ಇಂಡೋನೇಷಿಯಾದ ಪುತ್ರಿ ಆ್ಯಂಡ್ರಿಯಾನ್ ಜುಫಿಚಾ ನಿಧನರಾಗಿದ್ದಾರೆ ಅನ್ನೋ ಸುದ್ದಿ ಬಹಿರಂಗವಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಹಲವರು ಕಣ್ಣೀರಿಟ್ಟಿದ್ದಾರೆ.
ಹುಟ್ಟುಹಬ್ಬ ದಿನವೇ ಸಾವಿನ ಸುದ್ದಿ
ಪುತ್ರಿ ಆ್ಯಂಡ್ರಿಯಾನ್ ಜುಫಿಚಾ 26ನೇ ವರ್ಷದ ಹುಟ್ಟಹಬ್ಬದ ದಿನವೇ ಅವರ ಸಾವಿನ ಸುದ್ದಿ ಹೊರಬಂದಿದೆ. ಇಂಡೋನೇಷಿಯಾ ಅರ್ಥ್ ಬ್ಯೂಟಿ ಸಂಸ್ಥೆ ಹಾಗೂ ಜುಫಿಚಾ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ. ಸಾವಿಗೆ ಕಾರಣ ಬಹಿರಂಗವಾಗಿಲ್ಲ. ಆ್ಯಂಡ್ರಿಯಾನ್ ಅಕಾಲಿಕ ಮರಣದ ಕುರಿತು ಭಾವುಕ ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಠಾತ್ ಸಾವಿಗೆ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಸಂಸ್ಥೆ ಅಥವಾ ಕುಟುಂಬಸ್ಥರು ಸಾವಿನ ಕಾರಣ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಆ್ಯಂಡ್ರಿಯಾನಿ ಜುಫಿಚಾ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವ ಜುಫಿಚಾ, 2025ರಲ್ಲಿ ಮಿಸ್ ಇಂಡೋನೇಷಿಯಾ ಅರ್ಥ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇಂಡೋನೇಷಿಯಾದ ಹಲವು ಜಾಹೀರಾತು, ಪ್ರಮೋಶನ್ , ಬ್ರ್ಯಾಂಡ್‌ಗಳಲ್ಲಿ ಜುಫಿಚಾ ಕಾಣಿಸಿಕೊಂಡಿದ್ದಾರೆ. ಪರಿಸರ ಜಾಗೃತಿ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳಲ್ಲೂ ಜುಫಿಚಾ ತೊಡಗಿಸಿಕೊಂಡಿದ್ದರು. ಹವಾಮಾನ ಬದಲಾವಣೆ ಹಾಗೂ ಕಾಡುಗಳ ರಕ್ಷಣೆ ವಿಚಾರದಲ್ಲ ಇಂಡೋನೇಷಿಯಾ ಸರ್ಕಾರ ಜೊತೆ ಕೈಜೋಡಿಸಿ ಅಭಿಯಾನ ನಡೆಸಿದ್ದರು.
ಪುತ್ರಿ ಆ್ಯಂಡ್ರಿಯಾನಿ ಜುಫಿಚಾ ನಿಧನ ಸುದ್ದಿ ಖಚಿತವಾಗುತ್ತಿದ್ದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಫ್ಯಾಷನ್ ಡಿಸೈನರ್, ಬ್ಯೂಟಿ ಸಂಸ್ಥೆಗಳು, ಇಂಡೋನೇಷಿಯಾ ಅರ್ಥ್ ಬ್ಯೂಟಿ ಸಂಸ್ಥೆ ಆಯೋಜಕರು ಭಾವುಕರಾಗಿದ್ದಾರೆ. ಕೇವಲ 26ನೇ ವಯಸ್ಸಿನಲ್ಲಿ ಅಕಾಲಿಕ ಮರಣಹೊಂದಿದ ಸುಂದರಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಠಾತ್ ಸಾವಿಗೆ ಕಾರಣವೇನು ಅನ್ನೋ ಚರ್ಚೆಗಳು ಶುರುವಾಗಿದೆ. ಇದರ ನಡುವೆ ಕುಟುಂಬ ವಿಶೇಷ ಮನವಿ ಮಾಡಿಕೊಂಡಿದ್ದು, ನೋವಿನ ಸಂದರ್ಭದಲ್ಲಿ ಖಾಸಗಿತನ ಗೌರವಿಸುವಂತೆ ಮನವಿ ಮಾಡಿದೆ.

