ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದ ಶ್ರೀಲಂಕಾದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೊ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರನನ್ನು ಬಂಧಿಸಲಾಗಿದ್ದು, ಫೆರ್ನಾಂಡೊ ಅವರ ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಕೊಲಂಬೊ: ಕುಡಿಯುವ ನೀರಿನ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಶ್ರೀಲಂಕಾದ 62 ವರ್ಷದ ಕೋಚ್ ಸುಮಿತ್ ಫೆರ್ನಾಂಡೊ ನಿಧನರಾಗಿದ್ದಾರೆ. ಶ್ರೀಲಂಕಾ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಯುವ ಕ್ರಿಕೆಟಿಗರಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಸುಮಿತ್ ಫೆರ್ನಾಂಡೊ ಮೈದಾನದಲ್ಲಿಯೇ ದುರಂತ ಸಾವು ಕಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಆಗಸ್ಟ್ 8ರಂದು ಅಕಾಡೆಮಿಯೊಂದರಲ್ಲಿ ಆಟಗಾರರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ನೀರಿನ ವಿಚಾರದಲ್ಲಿ ಮಾತಿನ ಘರ್ಷಣೆ ನಡೆದಿದೆ. ಈ ವೇಳೆ ಸುಮಿತ್ ಮಧ್ಯಪ್ರವೇಶಿಸಿದ್ದಾರೆ. ಆದರೆ ಗಲಾಟೆಯಲ್ಲಿ ಅವರಿಗೆ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಎರಡು ದಿನಗಳ ಬಳಿಕ ಅಂದರೆ ಆಗಸ್ಟ್ 10ರ ಮಂಗಳವಾರ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಕೊಲಂಬೊ ಮ್ಯಾಜಿಸ್ಟೇಟ್ ಕೋರ್ಟ್ ಆಗಸ್ಟ್ 11ರಂದು ಅಪ್ರಾಪ್ತ ಆಗಿರುವುದರಿಂದ ಆತನನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.
ಪೊಲೀಸರ ಪ್ರಕಾರ, ವಾಗ್ವಾದದ ವೇಳೆ ಫರ್ನಾಂಡೋ ಆಟಗಾರನೊಬ್ಬನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆಗ 17 ವರ್ಷದ ಆ ಆಟಗಾರ ಆತನಿಗೆ ಹೊಡೆದಿದ್ದಾನೆ ಎಂದು ವರದಿಯಾಗಿದೆ. ನಂತರ ತೀವ್ರವಾಗಿ ಗಾಯಗೊಂಡ ಫರ್ನಾಂಡೋ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾವಿನ ತನಿಖೆ ಆರಂಭಿಸಿರುವ ಪೊಲೀಸರು
ಆದಾಗ್ಯೂ, ಅವರ ಸಾವಿಗೆ ಸಂಬಂಧಿಸಿದ ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ. ಫರ್ನಾಂಡೋ ಅವರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇತ್ತೆಂದು ವೈದ್ಯಕೀಯ ದಾಖಲೆಗಳು ಸೂಚಿಸಿವೆ; ಹೀಗಾಗಿ, ಅವರ ಸಾವಿಗೆ ಆರೋಪಿತ ಹಲ್ಲೆ ಕಾರಣವೋ ಅಥವಾ ಆಂತರಿಕ ವೈದ್ಯಕೀಯ ಸಮಸ್ಯೆಯೋ ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನ್ಯಾಯಾಂಗ ವೈದ್ಯಾಧಿಕಾರಿಯು ನಿರ್ದಿಷ್ಟ ತೀರ್ಮಾನಕ್ಕೆ ಬರದೇ 'ಮುಕ್ತ ತೀರ್ಪು' (open verdict) ನೀಡಿದ್ದಾರೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಶದ ಮಾದರಿಗಳನ್ನು ಸರ್ಕಾರಿ ವಿಶ್ಲೇಷಕರಿಗೆ ಕಳುಹಿಸಲಾಗಿದೆ.


