ಮುಂಬೈ ಮೂಲದ ಮಾಡೆಲ್ ದೀಪಕ್ ಗುಪ್ತಾ ಅವರ ಯಶೋಗಾಥೆ ಇದು. ಲೂಯಿ ವಿಟಾನ್ ಮಾಡೆಲ್ ಆಗಲು ಸಾಧ್ಯವಿಲ್ಲ ಎಂದು ಟೀಕಿಸಿದವರ ಬಾಯಿ ಮುಚ್ಚಿಸಿ, ಇಂದು ಅದೇ ಬ್ರಾಂಡ್‌ಗೆ ಮಾಡೆಲ್ ಆಗಿದ್ದಾರೆ. ಅವರ ಈ ಪ್ರೇರಣಾದಾಯಕ ಪ್ರಯಾಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ: ಮಾಡೆಲ್ ಆಗೋದು ಸಣ್ಣ ಕೆಲಸವೇನಲ್ಲ, ಇಷ್ಟೇ ಇಂಚು ಎತ್ತರ ದೇಹ ಹೀಗೆಯೇ ಇರಬೇಕು ಭಾವ ಭಂಗಿ ಹೀಗೆ ಹಲವು ಮಾನದಂಡಗಳನ್ನು ಹೊಂದಿರುವ ಮಾಡೆಲ್ ಕೆಲಸಕ್ಕೆ ಆಯ್ಕೆಯಾಗುವುದರ ಹಿಂದೆ ಹಲವು ಶ್ರಮಗಳಿರುತ್ತವೆ. ತಿರಸ್ಕಾರಗಳಿರುತ್ತವೆ. ನೀವು ಈ ಕೆಲಸಕ್ಕೆ ಲಾಯಕ್ಕೆ ಅಲ್ಲ ಎಂಬ ಬೈಗುಳಗಳು ಇರುತ್ತವೆ. ಆದರೆ ಈ ಹುಡುಗನೋರ್ವ ಅದೆಲ್ಲಾವನ್ನು ಮೀರಿ ಎತ್ತರಕ್ಕೆ ಬೆಳೆದಿದ್ದು, ಈಗ ಪ್ರಖ್ಯಾತ ಲೂಯಿ ವಿಟಾನ್ ಬ್ರಾಂಡ್‌ಗೆ ಮಾಡೆಲ್ ಆಗಿದ್ದು, ತಮ್ಮ ಈ ಹೂವು ಮುಳ್ಳಿನ ಹಾದಿಯನ್ನು ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ.
ಅಂದಹಾಗೆ ಹಲವು ತಿರಸ್ಕಾರಗಳನ್ನು ಎದುರಿಸಿಯೂ ಛಲ ಬಿಡದೇ ಮಾಡೆಲ್ ಲೋಕದಲ್ಲಿ ಗಮನಾರ್ಹ ಹೆಸರು ಮಾಡಿದ ಈ ಮಾಡೆಲ್ ಹೆಸರು ದೀಪಕ್ ಗುಪ್ತಾ, ಮುಂಬೈ ಮೂಲದ ದೀಪಕ್ ಗುಪ್ತಾ ಅವರು ಈಗ ಪ್ರಸಿದ್ಧ ಮಾಡೆಲ್ ಆಗಿದ್ದರೂ, ಒಂದು ಕಾಲದಲ್ಲಿ ಅವರಿಗೆ ನೀವು ಲೂಯಿವಿಟಾನ್ ಬ್ರಾಂಡ್‌ಗೆ ಮಾಡೆಲ್ ಆಗಲು ಸಾಧ್ಯವೇ ಇಲ್ಲ ಎಂದು ಅವಮಾನಿಸಿದ್ದರು.
ಆದರೆ ಅವರು ತಮ್ಮ ಸಾಧನೆಯ ಮೂಲಕವೇ ಈಗ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇಂದು ಅವರು ಕೇವಲ ಲೂಯಿವಿಟಾನ್‌ಗೆ ಮಾತ್ರವಲ್ಲ, ಹಲವು ಪ್ರಮುಖ ಫ್ಯಾಷನ್ ಬ್ರಾಂಡ್‌ಗಳಿಗೆ ಮಾಡೆಲ್ ಆಗಿದ್ದಾರೆ. ತಾನು ಹೇಗಿದ್ದೆ ಹೇಗಾದೆ ಎಂಬುದನ್ನು ತೋರಿಸುವ ಈ ವೀಡಿಯೋದಲ್ಲಿ ಅವರು ಫ್ಯಾಷನ್ ಲೋಕದಲ್ಲಿ ಆರಂಭದಲ್ಲಿ ತಿರಸ್ಕಾರಕ್ಕೊಳಗಾದಲ್ಲಿಂದ ಶುರುವಾಗಿ ಶ್ರಮದಿಂದ ಯಶಸ್ವಿಯಾಗಿ ಬೆಳೆದು ನಿಂತು ಫ್ಯಾಷನ್ ಲೋಕದ ಗ್ರೇಟ್ ಐಕಾನ್ ಆಗುವವರೆಗಿನ ತಮ್ಮ ಪ್ರಯಾಣವನ್ನು ರೆಕಾರ್ಡ್ ಮಾಡಿದ್ದಾರೆ. ಇವರ ಈ ಪ್ರೇರಣಾದಾಯಕವಾದ ಪ್ರಯಣವನ್ನು ಹೃತಿಕ್ ರೋಷನ್ ಹಾಗೂ ನರ್ಗಿಸ್ ಫಕ್ರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೆಚ್ಚಿದ್ದಾರೆ. 36 ಮಿಲಿಯನ್‌ಗೂ ಅಧಿಕ ಜನ ದೀಪಕ್ ಗುಪ್ತಾ ವೀಡಿಯೋವನ್ನು ಮೆಚ್ಚಿದ್ದಾರೆ.
ನೀವೆಂದೂ ಲೂಯಿವಿಟಾನ್ ಮಾಡೆಲ್ ಆಗಲು ಸಾಧ್ಯವಿಲ್ಲ ಎಂಬುವಲ್ಲಿಂದ ಆರಂಭಿಸಿ ಮಾಡೆಲ್ ಆಗಿ ರಾಂಪ್ ಮೇಲೆ ಹೆಜ್ಜೆ ಹಾಕುವಲ್ಲಿಯವರೆಗಿನ ಕ್ಷಣಗಳು ಈ ವೀಡಿಯೋದಲ್ಲಿವೆ. ಬಿಕಾಸ್ ವೈ ನಾಟ್ ಎಂದು ಬರೆದು ದೀಪಕ್ ಗುಪ್ತಾ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಕ್ ಗುಪ್ತಾಗೆ ಶುಭ ಹಾರೈಸಿದ್ದಾರೆ. ದೀಪಕ್ ಗುಪ್ತಾ ಇಂದು ಪ್ರಭಾವಿ ಮಾಡೆಲ್ ಆಗಿದ್ದು, ಲೂಯಿವಿಟಾ ಮಾತ್ರವಲ್ಲದೇ ಬರ್ಬೆರಿ ಹಾಗೂ ಅರ್ಮಾನಿ ಮುಂತಾದ ಖ್ಯಾತ ಬ್ರಾಂಡ್‌ಗಳಿಗೆ ಮಾಡೆಲ್ ಆಗಿ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಸಣ್ಣಪುಟ್ಟ ಅವಮಾನಗಳನ್ನು ಸಹಿಸಿಕೊಂಡು ದಿಟ್ಟ ಹೆಜ್ಜೆ ಇಟ್ಟರೇ ಯಶಸ್ಸು ಕೈತಪ್ಪಲ್ಲ ಎಂಬುದಕ್ಕೆ ದೀಪಕ್ ಗುಪ್ತಾ ಸಾಕ್ಷಿಯಾಗಿದ್ದು, ಹಲವರಿಗೆ ಪ್ರೇರಣೆಯಾಗಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
