ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಮೈತುಂಬಾ ಕಿಲೋಗಟ್ಟಲೆ ಚಿನ್ನ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿಐಪಿ ಪಾಸ್ ಪಡೆಯದೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದು, ವಿಡಿಯೋ ವೈರಲ್ ಆಗಿದೆ.
ಹಾಸನ (ನ.04): ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದೇಗುಲಕ್ಕೆ ಗಣ್ಯರು ಹಾಗೂ ಲಕ್ಷಾಂತರ ಭಕ್ತರ ದಂಡೇ ಹರಿದುಬರುತ್ತಿದೆ. ಈ ನಡುವೆ, ಹಾಸನಾಂಬೆೆಯ ಸನ್ನಿಧಿಯಲ್ಲಿ ವ್ಯಕ್ತಿಯೊಬ್ಬರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಮೈ-ಕೈ ತುಂಬಾ ಕಿಲೋಗಟ್ಟಲೆ ಚಿನ್ನದ ಆಭರಣಗಳನ್ನು ಧರಿಸಿ ದೇವಿಯ ದರ್ಶನಕ್ಕೆ ಆಗಮಿಸಿದ್ದ ಈ 'ಗೋಲ್ಡ್ ಮ್ಯಾನ್' (Gold Man) ಅನ್ನು ಕಂಡು ಭಕ್ತರು ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಟ್ಟು ನೋಡಿದ್ದಾರೆ!
ದೇವಾಲಯದ ಆವರಣದಲ್ಲಿ ಎಲ್ಲೆಲ್ಲೂ ಚಿನ್ನದ ಹೊಳಪು ಚೆಲ್ಲುತ್ತಿದ್ದ ಈ ವ್ಯಕ್ತಿಯನ್ನು ನೋಡಲು ಭಕ್ತರು ಮುಗಿಬಿದ್ದ ಪ್ರಸಂಗ ನಡೆಯಿತು.
ಮೈಮೇಲೆ ಕೆ.ಜಿ.ಗಟ್ಟಲೆ ಬಂಗಾರ – ಎಲ್ಲರ ಚಿತ್ತ ಇವರತ್ತಲೇ!:
ಕತ್ತಿನಲ್ಲಿ ಬೃಹತ್ ಗಾತ್ರದ ಚಿನ್ನದ ಸರಗಳು, ಎರಡೂ ಕೈಗಳ ತುಂಬಾ ದಪ್ಪನೆಯ ಚಿನ್ನದ ಬಳೆ-ಬ್ರೇಸ್ಲೆಟ್ಗಳು ಹಾಗೂ ಕೈಬೆರಳುಗಳ ತುಂಬೆಲ್ಲಾ ದೊಡ್ಡ ದೊಡ್ಡ ಚಿನ್ನದ ಉಂಗುರಗಳನ್ನು ಧರಿಸಿದ್ದ ಈ ವ್ಯಕ್ತಿ ದೇಗುಲದ ಆವರಣ ಪ್ರವೇಶಿಸುತ್ತಿದ್ದಂತೆ ಜನರೆಲ್ಲಾ ಅಚ್ಚರಿಯಿಂದ ನೋಡಲಾರಂಭಿಸಿದರು. ಸದ್ಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯೇ ಗಗನಕ್ಕೇರಿರುವ ಈ ಕಾಲದಲ್ಲಿ, ಇಷ್ಟೊಂದು ಪ್ರಮಾಣದ ಚಿನ್ನವನ್ನು ಧರಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ದೃಶ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ವಿಐಪಿ ಹಮ್ಮು-ಬಿಮ್ಮು ಇಲ್ಲದೆ ಸರತಿ ಸಾಲಲ್ಲೇ ದರ್ಶನ:
ಮೈತುಂಬಾ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಧರಿಸಿದ್ದರೂ, ಯಾವುದೇ ವಿಶೇಷ ಸವಲತ್ತು ಅಥವಾ ವಿಐಪಿ ಪಾಸ್ ಪಡೆಯದೆ, ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಈ ಗೋಲ್ಡ್ ಮ್ಯಾನ್ ಹಾಸನಾಂಬೆೆಯ ದರ್ಶನ ಪಡೆದು ಪುನೀತರಾಗಿದ್ದು ವಿಶೇಷವಾಗಿತ್ತು. ಅವರ ಈ ಸರಳತೆಗೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನರು:
ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ಆ 'ಚಿನ್ನದ ವ್ಯಕ್ತಿ'ಯನ್ನು ಕಂಡ ಸಾರ್ವಜನಿಕರು ಮತ್ತು ಯುವಕರು ಅವರೊಂದಿಗೆ ಫೋಟೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನಗುಮುಖದಿಂದಲೇ ಎಲ್ಲರೊಂದಿಗೆ ಪೋಸ್ ಕೊಟ್ಟ ಗೋಲ್ಡ್ ಮ್ಯಾನ್ ಅವರ ಫೋಟೋ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.






