ನಾವೆಲ್ಲಾ ಮುಖದ ಸಮಸ್ಯೆಗಳಿಗೆ ಹಲವು ರೀತಿಯ ಮೇಕಪ್ ಮತ್ತು ತ್ವಚೆ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ತುಪ್ಪವು ಚರ್ಮಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?. 

ಬಹುತೇಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಉತ್ಪನ್ನಗಳನ್ನು ಬಳಸಿಕೊಂಡು ಕಲೆಗಳು, ಡ್ರೈ ಸ್ಕಿನ್ , ಮೊಡವೆಗಳು, ಪಿಗ್ಮೆಂಟೇಶನ್‌ನಂತಹ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿಯಂತೂ ನಾವೆಲ್ಲರೂ ನಮ್ಮ ದಿನವನ್ನು ಮುಖಕ್ಕೆ ರಾಸಾಯನಿಕ ಕ್ರೀಂಗಳನ್ನು ಅಪ್ಲೈ ಮಾಡುವ ಮೂಲಕ ಪ್ರಾರಂಭಿಸುತ್ತೇವೆ. ಅಷ್ಟೇ ಏಕೆ ರಾತ್ರಿ ಮಲಗುವ ಮುನ್ನವೂ ಸಹ, ರಾತ್ರಿ ತ್ವಚೆಯ ಆರೈಕೆ (Night Skin Care Routine)ಯ ಹೆಸರಿನಲ್ಲಿಯೂ ನಾವು ರಾಸಾಯನಿಕಗಳನ್ನು ಹಚ್ಚುತ್ತೇವೆ. ಆದರೆ ನಮ್ಮ ಚರ್ಮ ಅದೆಂಥಹ ಉತ್ಪನ್ನಗಳಾದರೂ ತನ್ನ ಸ್ವಭಾವ ತೋರಿಸಿಯೇ ಬಿಡುತ್ತದೆ. ನೀವು ಕೂಡ ಇಂತಹ ಉತ್ಪನ್ನಗಳಿಗೆ ಹಣ ಖರ್ಚು ಮಾಡಿ ಸುಸ್ತಾಗಿದ್ದರೆ ಈ ಲೇಖನವು ನಿಮಗೆ ಪ್ರಯೋಜನಕಾರಿಯಾಗಿದೆ.

ಈ ಲೇಖನದಲ್ಲಿ ಜನಪ್ರಿಯ ಹಿಂದಿ ಯೂಟ್ಯೂಬ್ ಚಾನಲ್‌ವೊಂದರ ಪಾಡ್‌ಕ್ಯಾಸ್ಟ್‌ನಲ್ಲಿ ಅತಿಥಿಯಾಗಿ ಬಂದಿದ್ದ ಚರ್ಮರೋಗ ತಜ್ಞೆ ರಶ್ಮಿ ಶೆಟ್ಟಿ ಹೇಳಿದ ಒಂದು ಉತ್ತಮ, ಬಜೆಟ್ ಫ್ರೆಂಡ್ಲಿ ಮತ್ತು ಪರಿಣಾಮಕಾರಿ ಮನೆಮದ್ದಿನ ಬಗ್ಗೆ ತಿಳಿಯೋಣ. ಅಂದಹಾಗೆ ಮನೆಮದ್ದುಗಳು ಮತ್ತು ಆಯುರ್ವೇದವನ್ನು ಸಪೋರ್ಟ್ ಮಾಡುವ ಚರ್ಮರೋಗ ತಜ್ಞರು ತೀರಾ ಅಪರೂಪ. ಆದರೆ ರಶ್ಮಿ ಶೆಟ್ಟಿ ಅವರು ತುಪ್ಪದ ಒಂದು ಉತ್ತಮ ವಿಧಾನವನ್ನು ಹೇಳಿದ್ದಾರೆ . ಈ ವಿಧಾನ ಮತ್ತು ಅದಕ್ಕೆ ಸಂಬಂಧಿಸಿದ ದಿನಚರಿಯ ಬಗ್ಗೆ ಈಗ ತಿಳಿದುಕೊಳ್ಳೋಣ.

ನೇರವಾಗಿ ನಿಮ್ಮ ಮುಖಕ್ಕೆ ಹಚ್ಚಿ
ನಿಮ್ಮ ತ್ವಚೆಗೆ ರಾಸಾಯನಿಕ ಉತ್ಪನ್ನಗಳ ಬದಲು ಮನೆಯಲ್ಲಿ ತಯಾರಿಸಿದ ಕೆಲವು ಪದಾರ್ಥಗಳನ್ನು ಬಳಸಲು ಬಯಸಿದರೆ, ತುಪ್ಪವು ಅತ್ಯುತ್ತಮ ಆಯ್ಕೆಯಾಗಿದೆ. ಬೇಕಾದರೆ ನೀವು ನೇರವಾಗಿ ನಿಮ್ಮ ಮುಖಕ್ಕೆ ತುಪ್ಪವನ್ನು ಹಚ್ಚಬಹುದು. ಇದನ್ನು 10 ರಿಂದ 15 ನಿಮಿಷಗಳ ಕಾಲ ಹಚ್ಚಿ ನಂತರ ನಿಮ್ಮ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ಡಾ. ರಶ್ಮಿ ಅವರ ಪ್ರಕಾರ, ತುಪ್ಪವನ್ನು ಹಚ್ಚುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಮುಖದ ಹೊಳಪನ್ನು ಕಾಯ್ದುಕೊಳ್ಳುತ್ತದೆ. ನೀವು ಇದನ್ನು ಪ್ರತಿದಿನ ನೇರವಾಗಿ ಹಚ್ಚಬಹುದು ಅಥವಾ ಸರಿಯಾದ ದಿನಚರಿಯನ್ನು ಸಹ ಅನುಸರಿಸಬಹುದು. ಹಾಗಾದರೆ ಈ ದಿನಚರಿಯ ಬಗ್ಗೆ ತಿಳಿದುಕೊಳ್ಳೋಣ.

ಮೈಬಣ್ಣ ಕಪ್ಪಾಗಬಹುದು
ವ್ಯಕ್ತಿಯ ವಯಸ್ಸು ಹೆಚ್ಚಾದಂತೆ, ಮುಖದ ಮೇಲೆ ಸತ್ತ ಚರ್ಮದ ಕೋಶಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ ಎಂದು ಡಾ. ರಶ್ಮಿ ಹೇಳುತ್ತಾರೆ. ಈ ಸತ್ತ ಜೀವಕೋಶಗಳನ್ನು ತೆಗೆದುಹಾಕದಿದ್ದರೆ, ಅವು ವ್ಯಕ್ತಿಯ ಮೈಬಣ್ಣವನ್ನು ಕಪ್ಪಾಗಿಸಬಹುದು. ಇಂತಹ ಸಮಯದಲ್ಲಿ ನೀವು ಮೊಸರು ಮತ್ತು ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಬಹುದು. ಈ ಸಮಯದಲ್ಲಿ ನೀವು ಅತಿಯಾದ ಒತ್ತಡವನ್ನು ಹಾಕಬೇಕಿಲ್ಲ. ಇದು ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳ ಪದರವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ತುಪ್ಪದ ಜೊತೆಗೆ ಬಳಸಬಹುದಾದ ಪದಾರ್ಥಗಳಿವು
ಈ ಹಂತದಲ್ಲಿ, ನೀವು ಮೇಲೆ ತಿಳಿಸಿದ ತುಪ್ಪದ ಪರಿಹಾರವನ್ನು ಬಳಸಬಹುದು. ಇದಕ್ಕಾಗಿ, ತುಪ್ಪವನ್ನು ಮುಖದ ಮೇಲೆ ಲಘುವಾಗಿ ಉಜ್ಜಿ. ಸುಮಾರು 10 ನಿಮಿಷಗಳ ಕಾಲ ಮುಖದ ಮೇಲೆ ಬಿಡಿ. ಇದರ ನಂತರ, ನೀವು ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಬಹುದು. ತುಪ್ಪದ ಜೊತೆಗೆ, ನೀವು ತೆಂಗಿನ ಎಣ್ಣೆ , ಮೊಸರು ಮತ್ತು ಜೇನುತುಪ್ಪದಂತಹ ಪದಾರ್ಥಗಳನ್ನು ಸಹ ಬಳಸಬಹುದು . ಈ ರೀತಿಯಾಗಿ ತ್ವಚೆಯನ್ನು ಹೈಡ್ರೀಕರಿಸಬಹುದು.

ಬೇಸಿಗೆಯಲ್ಲಿ ಹೀಗೆ ಮಾಡಿ
ಈ ಎರಡು ಹಂತಗಳಲ್ಲಿ, ನಿಮ್ಮ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಆದರೆ ಬೇಸಿಗೆಯಲ್ಲಿ ನೀವು ಸನ್‌ಸ್ಕ್ರೀನ್ ಅನ್ನು ಹಚ್ಚಬೇಕು. ಇದು ಚರ್ಮವನ್ನು ಸುಡುವ ಸೂರ್ಯನಿಂದ ರಕ್ಷಿಸಬಹುದು. ಅಲ್ಲದೆ, ಟ್ಯಾನಿಂಗ್ ಸಮಸ್ಯೆ ಕಡಿಮೆಯಾಗುತ್ತದೆ. ಈ ರೀತಿಯಾಗಿ ನಿಮ್ಮ ಚರ್ಮದ ಆರೈಕೆ ದಿನಚರಿ ಪೂರ್ಣಗೊಳ್ಳುತ್ತದೆ.