ಮುಖದ ಮೇಲೆ ಡಾರ್ಕ್ ಸರ್ಕಲ್ ಆದ್ರೆ ಮೊಡವೆ ಕಾಣಿಸಿಕೊಂಡ್ರೆ ಮಹಿಳೆಯರ ಟೆನ್ಷನ್ ಹೆಚ್ಚಾಗುತ್ತೆ. ಈ ಸಮಸ್ಯೆಗೆ ಮನೆಯಲ್ಲೇ ಮದ್ದಿದೆ. ಅಕ್ಕಿ ನೀರಿನ ಐಸ್ ಕ್ಯೂಬ್ ತಯಾರಿ, ಬಳಕೆ, ಪ್ರಯೋಜನದ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬ್ಯೂಟಿ ಪ್ರಾಡಕ್ಟ್ (Beauty product) ಗಳನ್ನು ನಾವು ಮನೆಗೆ ತರ್ತೇವೆ. ಕೆಲವೊಂದು ಕೆಮಿಕಲ್ ನಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸೋ ಬದಲು ಹಾಳು ಮಾಡುತ್ತೆ. ಹಣ ಖರ್ಚು ಮಾಡಿ ಚರ್ಮದ ಸೌಂದರ್ಯ (skin beauty) ಹಾಳು ಮಾಡುವ ಬದಲು ನಮ್ಮ ಅಡುಗೆ ಮನೆಯಲ್ಲೇ ಇರುವ ಪದಾರ್ಥ ಬಳಸಿ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಬಹುದು. ಯಾವುದಕ್ಕೂ ಪ್ರಯೋಜನ ಇಲ್ಲ ಅಂತ ನಿತ್ಯ ನಾವು ಎಸೆಯುವ ಪದಾರ್ಥಗಳೇ ನಮ್ಮ ಚರ್ಮದ ಕಾಂತಿ ಹೆಚ್ಚಿಸುತ್ವೆ. ನಮ್ಮ ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ತೆಗೆಯುತ್ವೆ. ಈ ಪಟ್ಟಿಗೆ ಅಕ್ಕಿ ನೀರು ಕೂಡ ಸೇರುತ್ತೆ.
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳೋಕೆ ಅಕ್ಕಿ ನಮಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತೆ. ಅಕ್ಕಿ ಹಾಗೂ ಅಕ್ಕಿ ನೀರನ್ನು ಅನೇಕಾನೇಕ ವರ್ಷಗಳಿಂದ ಸೌಂದರ್ಯವರ್ಧಕವಾಗಿ ಬಳಕೆ ಮಾಡಲಾಗುತ್ತಿದೆ. ಅಕ್ಕಿ, ಚರ್ಮದ ಆರೈಕೆ ಮಾಡೋದ್ರಲ್ಲಿ ಮುಂದಿದೆ. ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್, ಅಕ್ಕಿ ನೀರಿನಿಂದ ಫೇಸ್ ಟೋನರ್ ತಯಾರಿಸೋದು ಅನೇಕರಿಗೆ ಗೊತ್ತು. ನಾವಿಂದು ರೈಸ್ ವಾಟರ್ ಐಸ್ ಕ್ಯೂಬ್ ಹೇಗೆ ತಯಾರಿಸೋದು, ಅದನ್ನು ಹೇಗೆ ಬಳಕೆ ಮಾಡ್ಬೇಕು ಹಾಗೆ ಅದ್ರಿಂದ ಲಾಭ ಏನು ಅನ್ನೋದನ್ನು ನಿಮಗೆ ಹೇಳ್ತೇವೆ.
ಅಕ್ಕಿ ನೀರಿನ ಐಸ್ ಕ್ಯೂಬ್ (Rice Water Ice Cube) ತಯಾರಿಸೋದು ಹೇಗೆ? : ಅಕ್ಕಿ ನೀರಿನ ಐಸ್ ಕ್ಯೂಬನ್ನು ನೀವು ಎರಡು ರೀತಿಯಲ್ಲಿ ತಯಾರಿಸಬಹುದು. ಮೊದಲನೇಯದು, ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಗೆ ಅಕ್ಕಿ ಹಾಕಿ, ನೀರನ್ನು ಹಾಕಿ ಅಕ್ಕಿಯನ್ನು ಬೇಯಿಸಿ. ಅನ್ನ ಆಗ್ತಿದ್ದಂತೆ ಅನ್ನದಲ್ಲಿರುವ ಹಾಲಿನ ಬಣ್ಣದ ನೀರನ್ನು ( ತೆಳಿ) ತೆಗೆದು ಅದನ್ನು ಐಸ್ ಕ್ಯೂಬ್ ಗೆ ಹಾಕಿ ಫ್ರೀಜ್ ಮಾಡಿ.
ಇನ್ನೊಂದು ವಿಧಾನದಲ್ಲಿ ನೀವು ಅಕ್ಕಿಯನ್ನು ಬೇಯಿಸಬೇಕಾಗಿಲ್ಲ. ಅಕ್ಕಿಯನ್ನು ಮೂರ್ನಾಲ್ಕು ಬಾರಿ ನೀರು ಹಾಕಿ ಕ್ಲೀನ್ ಮಾಡಿ. ನಂತ್ರ ಮತ್ತೊಂದು ಬಾರಿ ನೀರು ಹಾಕಿ, ಸ್ವಲ್ಪ ಸಮಯ ನೆನೆಸಿಡಿ. ನಂತ್ರ ನೀರನ್ನು ಸೋಸಿ, ಅದನ್ನು ಐಸ್ ಕ್ಯೂಬ್ ಗೆ ಹಾಕಿ, ಫ್ರೀಜರ್ ನಲ್ಲಿ ಇಡಿ. ನಾಲ್ಕು ಗಂಟೆ ನಂತ್ರ ಐಸ್ ಕ್ಯೂಬ್ ಸಿದ್ಧವಾಗುತ್ತದೆ.
ಅಕ್ಕಿ ನೀರಿನ ಐಸ್ ಕ್ಯೂಬ್ ಬಳಸುವ ವಿಧಾನ : ಅಕ್ಕಿ ನೀರಿನ ಐಸ್ ಕ್ಯೂಬನ್ನು ನೀವು ಪ್ರತಿ ದಿನ ಬಳಸಬಹುದು. ಕ್ಯೂಬನ್ನು ನಿಧಾನವಾಗಿ ನಿಮ್ಮ ಮುಖಕ್ಕೆ ರಬ್ ಮಾಡ್ಬೇಕು.
ಅಕ್ಕಿ ನೀರಿನ ಐಸ್ ಕ್ಯೂಬ್ ಪ್ರಯೋಜನಗಳು : ಅಕ್ಕಿ ನೀರು ಚರ್ಮವನ್ನು ಬಿಸಿಲಿನ ಬೇಗೆಯಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ಕಣ್ಣು ಹಾಗೆ ಮುಖದ ಭಾಗ ಊದಿಕೊಂಡಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ದೊಡ್ಡ ರಂಧ್ರಗಳಿದ್ದರೆ ಅವು ಚಿಕ್ಕದಾಗುತ್ತವೆ. ಚರ್ಮದ ಜಿಗುಟುತನ ಕಡಿಮೆಯಾಗುತ್ತದೆ. ಮೊಡವೆ, ಕಪ್ಪು ಕಲೆಗಳು ಮತ್ತು ಡಾರ್ಕ್ ಸರ್ಕಲ್ ಸಹ ಕಡಿಮೆಯಾಗುತ್ತವೆ. ಅಕ್ಕಿ ನೀರು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಮುಖಕ್ಕೆ ಹೊಳಪು ನೀಡುತ್ತದೆ. ಅಕ್ಕಿ ನೀರು, ಅಮೈನೋ ಆಮ್ಲಗಳ ಜೊತೆಗೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಅಕ್ಕಿ ನೀರಿನಲ್ಲಿ ಇನೋಸಿಟಾಲ್ ಎಂಬ ಕಾರ್ಬೋಹೈಡ್ರೇಟ್ ಕೂಡ ಇದೆ. ಇದು ಚರ್ಮ ಮತ್ತು ಕೂದಲಿಗೆ ಒಳ್ಳೆಯದು. ನೀವು ಒಮ್ಮೆ ಮಾಡಿದ ಅಕ್ಕಿ ನೀರಿನ ಐಸ್ ಕ್ಯೂಬನ್ನು ನಾಲ್ಕರಿಂದ ಐದು ದಿನ ಬಳಸಬಹುದು.
