ಸೀರೆಗೆ ಮನಸೋಲದ ನಾರಿಯಿಲ್ಲ.ಭಾರತೀಯ ಮಹಿಳೆಯ ಅಚ್ಚುಮೆಚ್ಚಿನ ಉಡುಗೆ ಸೀರೆ,ಭಾರತದ ಅತ್ಯಂತ ದುಬಾರಿ ಧಿರಿಸೂ ಹೌದು.ಸೀರೆಯಲ್ಲಿ ಅದೆಷ್ಟು ವೈವಿಧ್ಯತೆ ಇದೆ.ಬಣ್ಣ,ವಿನ್ಯಾಸದಲ್ಲಿ ಮಾತ್ರವಲ್ಲ,ಬಟ್ಟೆಯಲ್ಲಿ ಕೂಡ. ಕಾಟನ್,ಕೈಮಗ್ಗದ ಸೀರೆಗಳು ನಿತ್ಯ ಬಳಕೆಗೆ ಯೋಗ್ಯವಾಗಿದ್ರೆ, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ರೇಷ್ಮೆ ಸೀರೆಯಿದ್ರೇನೆ ಮೆರುಗು. ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸೀರೆಗಳು ವಾರ್ಡ್‌ರೋಪ್‌ನಿಂದ ಹೊರಬರೋದು ಏನಾದ್ರೂ ವಿಶೇಷ ಕಾರ್ಯಕ್ರಮಗಳಿದ್ದಾಗ ಮಾತ್ರ. ಕೆಲವೊಮ್ಮೆ ಎಂದೋ ಮಡಚಿ ಬ್ಯಾಗ್‌ನೊಳಗಿಟ್ಟ ಸೀರೆ ತೆಗೆದು ನೋಡಿದ್ರೆ ಅಲ್ಲಲ್ಲಿ ತೂತು ಬಿದ್ದಿರೋದು ಇಲ್ಲವೆ ಬೂಸ್ಟ್‌ ಹಿಡಿದಿರೋದು ಅಥವಾ ಉಟ್ಟುಕೊಂಡ ಸ್ವಲ್ಪ ಹೊತ್ತಿನಲ್ಲೇ ಹರಿದು ಹೋಗೋದೂ ಇದೆ. ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಸೀರೆ ಹೀಗೆ ಹಾಳಾದ್ರೆ ಹೊಟ್ಟೆಯುರಿಯದೇ ಇರುತ್ತಾ? ಈ ರೀತಿ ಸೀರೆ ಕೆಟ್ಟ ಮೇಲೆ ಸಂಕಟ ಪಡೋ ಬದಲು ಅದನ್ನು ಜತನದಿಂದ ಕಾಪಾಡಿದ್ರೆ ನಿಮ್ಮ ಮಕ್ಕಳು, ಮೊಮ್ಮಕ್ಕಳು ಕೂಡ ಅದನ್ನು ಉಡ್ಬಹುದು. ಹಾಗಾದ್ರೆ ನಿಮ್ಮ ಸೀರೆಗಳು ಬಹುಕಾಲ ಬಾಳಿಕೆ ಬರ್ಬೇಕಂದ್ರೆ ಏನ್‌ ಮಾಡ್ಬೇಕು?

ಲೆಗ್ಗಿಂಗ್ಸ್‌ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ವರ್ಕ್‌ ಇರೋ ಸೀರೆಗಳನ್ನು ಪ್ರತ್ಯೇಕವಾಗಿಡಿ
ಎಂಬ್ರಾಯಿಡರಿ, ಸ್ಟೋನ್‌ ವರ್ಕ್‌ ಇರೋ ಸೀರೆಗಳನ್ನು ಒಟ್ಟಿಗಿಡೋ ಬದಲು ಒಂದೊಂದನ್ನೇ ಪ್ರತ್ಯೇಕ ಬಾಕ್ಸ್‌ ಅಥವಾ ಬಟ್ಟೆಯ ಚೀಲದಲ್ಲಿ ಹಾಕಿಡೋದು ಒಳ್ಳೆಯದು. ಈಗಂತೂ ಮಾರುಕಟ್ಟೆಯಲ್ಲಿ ನಾನಾ ವಿಧದ ಸೀರೆ ಸಂಗ್ರಹಿಸಿಡೋ ಬಾಕ್ಸ್‌ ಹಾಗೂ ಬ್ಯಾಗ್‌ಗಳು ಸಿಗುತ್ತವೆ. ಇಂಥ ಬ್ಯಾಗ್‌ ಅಥವಾ ಬಾಕ್ಸ್‌ನಲ್ಲಿ ಸೀರೆ ಹಾಕಿಟ್ರೆ ಯಾವುದೇ ಡ್ಯಾಮೇಜ್‌ ಆಗೋದಿಲ್ಲ. ಕಾಟನ್‌ ಬಟ್ಟೆಯಲ್ಲಿ ಸೀರೆ ಸುತ್ತಿಡೋದು ಕೂಡ ಸುರಕ್ಷಿತ. ಎಂಬ್ರಾಯಿಡರಿ ಅಥವಾ ಹೆವಿ ವರ್ಕ್ಸ್‌ಯಿರೋ ಸೀರೆಗಳನ್ನು ಒಟ್ಟಿಗಿಟ್ರೆ ಹಾನಿಯಾಗೋ ಸಾಧ್ಯತೆ ಹೆಚ್ಚಿರುತ್ತೆ. ಅಲ್ಲದೆ,ಈ ಸೀರೆಗಳನ್ನು ಹ್ಯಾಂಗರ್‌ನಲ್ಲಿಡೋದು ಕೂಡ ಅಷ್ಟು ಸೇಫಲ್ಲ. ಏಕೆಂದ್ರೆ ವಾರ್ಡ್‌ರೋಪ್‌ನಲ್ಲಿ ಬೇರೆ ಬಟ್ಟೆಗಳನ್ನು ಕೂಡ ಹ್ಯಾಂಗ್‌ ಮಾಡಿರೋದ್ರಿಂದ ಅವುಗಳನ್ನು ತೆಗೆಯೋ ಇಲ್ಲವೆ ಇಡೋ ಸಮಯದಲ್ಲಿ ಸೀರೆಯಲ್ಲಿನ ಸ್ಟೋನ್‌ ಅಥವಾ ಇತರ ವರ್ಕ್‌ಗಳಿಗೆ ಹಾನಿಯಾಗ್ಬಹುದು. ಇನ್ನು ಇಂಥ ಸೀರೆಗಳನ್ನು ಮಡಚಿಡೋವಾಗ ವರ್ಕ್ಸ್‌ಯಿರೋ ಭಾಗ ಒಳಗಿರುವಂತೆ ಮಡಚಿಡೋದು ಒಳ್ಳೆಯದು.

ಕಲೆಗಳನ್ನು ಸಮರ್ಪಕವಾಗಿ ತೆಗೆಯಿರಿ
ಸೀರೆ ಮೇಲೆ ಏನಾದ್ರೂ ಬಿದ್ದು ಕಲೆ ಮೂಡಿದ್ರೆ ನೀವು ಉದಾಸೀನ ಮಾಡದೆ ತಕ್ಷಣ ಅದನ್ನು ತೆಗೆಯಲು ಪ್ರಯತ್ನಿಸಬೇಕು. ಒದ್ದೆ ಬಟ್ಟೆಯಲ್ಲಿ ಒರೆಸಿದ್ರೆ ಕೆಲವು ಕಲೆಗಳು ಹೋಗುತ್ತವೆ. ಒಂದು ವೇಳೆ ಹೋಗದಿದ್ರೆ ಸ್ವಲ್ಪ ಬಿಳಿ ವಿನೆಗರ್‌, ಲಿಂಬೆಹಣ್ಣಿನ ರಸ ಅಥವಾ ಸೋಪ್‌ ಬಳಸಿ ಕಲೆ ತೆಗೆಯಲು ಪ್ರಯತ್ನಿಸಿ. ಆದ್ರೆ ಒದ್ದೆ ಬಟ್ಟೆಯಲ್ಲಿ ಒರೆಸಿ ಅಥವಾ ಆ ಭಾಗವನ್ನು ನೀರಿನಲ್ಲಿ ತೊಳೆದ ಬಳಿಕ ಸೀರೆಯನ್ನು ಬಿಸಿಲಿನಲ್ಲಿ ಒಣಗಿಸ್ಬೇಕು. ಒದ್ದೆಯಿರೋವಾಗಲೇ ಮಡಚಿದ್ರ ಸೀರೆ ಹಾಳಾಗೋದು ಗ್ಯಾರಂಟಿ. ಇನ್ನು ಕೆಲವು ಕಲೆಗಳು ಡ್ರೈ ವಾಷ್‌ ಮಾಡಿದ್ರೆ ಮಾತ್ರ ಹೋಗುತ್ತವೆ.

ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಯಾಕೆ ಗೊತ್ತಾ?

ಬಿಸಿಲಿನಲ್ಲಿ ಒಣಗಿಸಿ
ಹಳ್ಳಿ ಕಡೆ ವರ್ಷಕ್ಕೊಮ್ಮೆಯಾದ್ರೂ ಎಲ್ಲರೇಷ್ಮೆ ಸೀರೆಗಳನ್ನು ಹೊರಗೆ ತೆಗೆದು ಬಿಸಿಲಿಗೆ ಹಾಕಿ ಆ ಬಳಿಕ ಮಡಚಿ ಒಳಗಿಡೋ ಪದ್ಧತಿಯಿದೆ. ಹೀಗೆ ಮಾಡೋದ್ರಿಂದ ಸೀರೆಗಳಿಗೆ ಬೂಸ್ಟ್‌ ಹಿಡಿಯೋದಿಲ್ಲ ಹಾಗೂ ಬೇಗ ಹಾಳಾಗೋದಿಲ್ಲ ಎಂಬ ನಂಬಿಕೆಯಿದೆ. ರೇಷ್ಮೆ ಸೀರೆಗಳನ್ನು ವರ್ಷದಲ್ಲಿ ಒಮ್ಮೆಯಾದ್ರೂ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣಗಿಸಿ ಮಡಚಿಡೋದು ಉತ್ತಮ. ಸೀರೆ ತೊಟ್ಟು ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋಗಿ ಬಂದ ಬಳಿಕ ಅದನ್ನು ಬಿಡಿಸಿ ಮಡಚಿ ವಾರ್ಡ್‌ರೋಪ್‌ನೊಳಗಿಡೋ ಅಭ್ಯಾಸ ಕೆಲವರಿಗಿದೆ. ಹೀಗೆ ಮಾಡೋದ್ರಿಂದ ಬೆವರು ಅಥವಾ ನೀರು ತಾಗಿ ಒದ್ದೆಯಾಗಿರೋ ಸೀರೆ ಹಾಳಾಗೋದು ಪಕ್ಕಾ. ಹೀಗಾಗಿ ಉಟ್ಟ ಸೀರೆಯನ್ನು ಮಡಚಿ ಮತ್ತೆ ಸ್ವಸ್ಥಾನದಲ್ಲಿಡೋ ಮುನ್ನ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣ ಹಾಕೋದು ಉತ್ತಮ. 

ಇಸ್ತ್ರಿ ಮಾಡೋವಾಗ ಎಚ್ಚರ
ಸೀರೆಗಳಿಗೆ ಇಸ್ತ್ರಿ ಮಾಡೋವಾಗ ತುಂಬಾ ಹುಷಾರಾಗಿರ್ಬೇಕು. ಇಸ್ತ್ರಿ ಪೆಟ್ಟಿಗೆ ಸರಿಯಾದ ಸೆಟ್ಟಿಂಗ್‌ನಲ್ಲಿದೆಯಾ ಎಂಬುದನ್ನು ಪರಿಶೀಲಿಸಿ ಆದಷ್ಟು ಕಡಿಮೆ ಉಷ್ಣತೆಯಲ್ಲಿಟ್ಟು ಇಸ್ತ್ರಿ ಮಾಡ್ಬೇಕು. ಬಿಸಿಯಾದ ಇಸ್ತ್ರಿಪೆಟ್ಟಿಗೆಯನ್ನುನೇರವಾಗಿ ಸೀರೆ ಮೇಲಿಡೋ ಮುನ್ನ ಬೇರೆ ಬಟ್ಟೆ ಮೇಲೆ ಇಸ್ತ್ರಿ ಮಾಡಿ ಬಿಸಿ ಎಷ್ಟಿದೆ ಎಂದು ಅಂದಾಜಿಸೋದು ಉತ್ತಮ. 

ಬಿರು ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ಈ ಫ್ಯಾಷನ್ ಟಿಪ್ಸ್

ವಾಷ್‌ಗೂ ಮುನ್ನ ಯೋಚಿಸಿ
ಎಲ್ಲ ಸೀರೆಗಳನ್ನು ನಾರ್ಮಲ್‌ ವಾಷ್‌ ಮಾಡಲು ಸಾಧ್ಯವಿಲ್ಲ. ಕಾಟನ್‌ ಸೇರಿದಂತೆ ಕೆಲವು ಸೀರೆಗಳನ್ನು ಮಷಿನ್‌ ವಾಷ್‌ ಕೂಡ ಮಾಡ್ಬಹುದು. ಇನ್ನು ಕೆಲವು ಸೀರೆಗಳನ್ನು ಹ್ಯಾಂಡ್‌ ವಾಷ್‌ ಮಾಡ್ಬಹುದು. ಆದ್ರೆ ಬೆಲೆಬಾಳೋ ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡೋದು ಅಗತ್ಯ. 

ಮಡಿಕೆಗಳನ್ನು ಬದಲಾಯಿಸಿ
ರೇಷ್ಮೆ ಸೀರೆಗಳ ಮಡಿಕೆಗಳನ್ನು ಆಗಾಗ ಬದಲಾಯಿಸ್ಬೇಕು. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಡಿಕೆಗಳನ್ನು ಬದಲಾಯಿಸಿಡೋದು ಒಳ್ಳೆಯದು.