Rs100 Notes Fact Check: ಹಳೇ ₹100 ಅಮಾನ್ಯ? ಸೋಷಿಯಲ್ ಮೀಡಿಯಾ ಪೋಸ್ಟ್: ಎಷ್ಟು ಸತ್ಯ?ಎಷ್ಟು ಸುಳ್ಳು?
*100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಮಾನ್ಯ!
*ಸಾಮಾಜಿಕ ಜಾಲತಾಣಗಳಲ್ಲಿ ಜನವರಿ 2021ರ ಸುದ್ದಿ ವೈರಲ್
*ಸೋಷಿಯಲ್ ಮೀಡಿಯಾ ಪೋಸ್ಟ್: ಎಷ್ಟು ಸತ್ಯ?ಎಷ್ಟು ಸುಳ್ಳು?
Fact Check: ಕೇಂದ್ರ ಸರ್ಕಾರ 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು (Old Notes) ರದ್ದುಗೊಳಿಸಿ ನ.8ರ 2021ಕ್ಕೆ 5 ವರ್ಷ ಪೂರ್ಣಗೊಂಡಿದೆ. ಕಪ್ಪು ಹಣ (Black Money) ತಡೆಗಟ್ಟುವ ಮತ್ತು ಡಿಜಿಟಲ್ ಪೇಮೆಂಟ್ (Digital Payment) ಹೆಚ್ಚಳಗೊಳಿಸುವ ಉದ್ದೇಶದಿಂದ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸರ್ಕಾರ ಆದೇಶಿಸಿತ್ತು. ಇದಾದ ಬಳಿಕ ಸರ್ಕಾರ 100, 200, 500 ಸೇರಿದಂತೆ ಹಲವು ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಆದರೆ ಚಲಾವಣೆಯಲ್ಲಿರುವ ನೋಟುಗಳ ಬಗ್ಗೆ ಜನರಲ್ಲಿ ಹಲವು ಗೊಂದಲಗಳಿವೆ. ಈ ಬಗ್ಗೆ ಇನ್ನೂ ಹಲವು ಸುದ್ದಿಗಳು ಓಡಾಡುತ್ತಿವೆ.
ಇದಕ್ಕೆ ನಿದರ್ಶನವೆಂಬಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ(Social Media) ಸುದ್ದಿಯೊಂದು ಸದ್ದು ಮಾಡುತ್ತಿದೆ. ಇನ್ನು ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿದೆ ಎಂಬ ಸುದ್ದು ಹರಿದಾಡುತ್ತಿದೆ. ಜತೆಗೆ 2022ರ ವರೆಗೆ ಮಾತ್ರ ರೂ.100 ಹಳೆಯ ನೋಟು ವಿನಿಮಯ ಮಾಡಿಕೊಳ್ಳುವ ಅವಕಾಶ ಎಂದು ಹಲವರು ಫೇಸ್‌ಬುಕ್ ಸೇರಿದಂತೆ ಇತರ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಈ ಸುದ್ದಿ ಹಳೆಯದಾಗಿದ್ದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. 2021 ಜನವರಿಯಲ್ಲಿ ಹಲವು ಮಾಧ್ಯಮಗಳು ಭಾರತೀಯ ರಿಸರ್ವ್ ಬ್ಯಾಂಕಿನ(ಆರ್‌ಬಿಐ)ನ ಸಹಾಯಕ ಮಹಾಪ್ರಬಂಧಕ (ಎಜಿಎಂ) ಬಿ.ಎಂ.ಮಹೇಶ್ ಅವರ ಹೇಳಿಕೆಯ ಸುದ್ದಿಯನ್ನು ಬಿತ್ತರಿಸಿದ್ದವು. ಆಗ ಕೂಡ ಈ ಸುದ್ದಿಗಳು ಜನರಲ್ಲಿ ಗೊಂದಲ ಮೂಡಿಸಿದ್ದವು. 100 ರುಪಾಯಿ ಹಳೆಯ ನೋಟುಗಳನ್ನು ರದ್ದುಗೊಳಿಸಿದ ಬಗ್ಗೆ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಆರ್‌ಬಿಐ (RBI) ಈ ರೀತಿಯ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿತ್ತು. ಆದರೆ ಈ ಸುದ್ದಿ ಮತ್ತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಲವರು ಇದನ್ನು ಹಂಚಿಕೊಂಡಿದ್ದಾರೆ. ಇದು ದಾರಿತಪ್ಪಿಸುವ ಪೋಸ್ಟ್ ಆಗಿದ್ದು ಈ ರೀತಿ ಯಾವುದೇ ಪ್ರಸ್ತಾಪ ಇಲ್ಲ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ (Fact Check) ತಿಳಿದುಬಂದಿದೆ.
Claim:
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿವಿಧ ಪೋಸ್ಟ್‌ಗಳಲ್ಲಿ ಈ ರೀತಿ ಕ್ಯಾಪ್ಶನ್ ನೀಡಲಾಗಿದೆ:
ಹಳೇ ₹100 ಅಮಾನ್ಯ, ಹಳೆಯ ನೋಟು ಹಿಂಪಡೆಯಲು ಆರ್‌ಬಿಐ ನಿರ್ಧಾರ, 2022ರ ಮಾರ್ಚ ಒಳಗೆ ವಿನಿಮಯಕ್ಕೆ ಅವಕಾಶ ಇತ್ಯಾದಿ. ಈ ರೀತಿಯ ಹಲವು ಪೋಸ್ಟ್‌ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು.
Fact Check:
21 ಜನವರಿ 2021 ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ(ಆರ್‌ಬಿಐ)ನ ಸಹಾಯಕ ಮಹಾಪ್ರಬಂಧಕ (ಎಜಿಎಂ) ಬಿ.ಎಂ.ಮಹೇಶ್ (B Mahesh) ಮಾತನಾಡಿದ್ದರು. "100 ಮುಖಬೆಲೆಯ ಸ್ವಚ್ಛವಾದ ಹೊಸ ಸೀರಿಸ್‌ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ಸೀರಿಸ್‌ನ ಎಲ್ಲ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ" ಎಂದು ತಿಳಿಸಿದ್ದರು. ಇದಾದ ಬಳಿಕ ರೂ.100 ನೋಟು ರದ್ದಾಗುವ ಬಗ್ಗೆ ಸುದ್ದಿ ಹರಡಿತ್ತು.
ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನವರಿ 25 2021 ರಂದು ಟ್ವೀಟ್ ಮೂಲಕ ಆರ್‌ಬಿಐ ಸ್ಪಷ್ಟನೆ ನೀಡಿತ್ತು. "100 ರುಪಾಯಿ, 10 ರುಪಾಯಿ ಹಾಗೂ 5 ರುಪಾಯಿ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಯಾವುದೇ ಪ್ರಸ್ತಾಪ ಇಲ್ಲ.ಹಿಂಪಡೆಯಲಾಗುತ್ತದೆ ಎಂಬ ವರದಿಗಳು ಸುಳ್ಳು" ಎಂದು ಆರ್‌ಬಿಐ ಹೇಳಿತ್ತು.
ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆ ಪಿಬಿಐ (PBI) ಕೂಡ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು 24 ಜನವರಿ 2021 ರಂದು ಈ ಸುದ್ದಿ ಸುಳ್ಳು ಎಂದು ತಿಳಿಸಿತ್ತು.
ಇನ್ನು ಈ ಬಗ್ಗೆ 22 ಜನವರಿ 2021 ರಂದು ಕನ್ನಡಪ್ರಭ (Kannada Prabha) "ಹಳೇ .100 ನೋಟು ಮಾರ್ಚ್ ವೇಳೆ ಸ್ಥಗಿತ: ಆರ್‌ಬಿಐ ಎಜಿಎಂ" ಎಂದು ವರದಿ ಮಾಡಿತ್ತು. ಇದು ನೋಟು ಅಮಾನ್ಯೀಕರಣ ಅಲ್ಲ, ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಆ ವರದಿಯನ್ನು ನೀವು ಇಲ್ಲಿ ಗಮನಿಸಬಹುದು.
ಹಳೆಯ ನೋಟುಗಳಂತೆ ಕಾಣುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ 100ರ ಮುಖಬೆಲೆಯ ಹಳೆಯ ಸೀರಿಸ್‌ನ ನೋಟುಗಳನ್ನು ಹಂತಹಂತವಾಗಿ ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್ (2021) ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿ.ಎಂ.ಮಹೇಶ್ ತಿಳಿಸಿದ್ದರು.
2022ನೇ ವರ್ಷ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ "ಹಳೆಯ ನೋಟು ಹಿಂಪಡೆಯಲು ಮಾರ್ಚ್ ಒಳಗೆ ವಿನಿಮಯಕ್ಕೆ ಅವಕಾಶ" ಎಂಬ ಸುದ್ದಿ ಸದ್ದು ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಇನ್ನೂ ಹಳೆಯ ರೂ. 100 ರೂ ನೋಟುಗಳು ಬಳಕೆಯಾಗುತ್ತಿವೆ. ಹಾಗಾಗಿ ಇದು ಹಲವರಲ್ಲಿ ಗೊಂದಲ ಸೃಷ್ಟಿಸಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರಯವುದು ದಾರಿ ತಪ್ಪಿಸುವ ಸುದ್ದಿಯಾಗಿದ್ದು ರೂ.100 ಹಳೆಯ ನೋಟು ಅಮಾನ್ಯೀಕರಣಗೊಂಡಿಲ್ಲ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:
1) Narendra Modi Fact Chek: ಪ್ರಧಾನಿ ನಿಜವಾಗ್ಲೂ IAS ಅಧಿಕಾರಿ ಆರತಿ ಡೋಗ್ರಾ ಕಾಲು ಮುಟ್ಟಿ ನಮಸ್ಕರಿಸಿದ್ರಾ?
2) IAF Chopper Crash Fact Check: ವಾಯುಸೇನೆ ಹೆಲಿಕಾಪ್ಟರ್ ಪತನದ ಸ್ಯಾಟ್‌ಲೈಟ್ ದೃಶ್ಯಾವಳಿ ವೈರಲ್?
3) Fact Check: ಭಾರತದ ಕೋವಿಡ್ ಲಸಿಕೆ ದಾಖಲೆ: ಕೇಂದ್ರ ಸರ್ಕಾರದಿಂದ 3 ತಿಂಗಳ Free Recharge?