Asianet Suvarna News Asianet Suvarna News

IAF Chopper Crash ‌Fact Check: ವಾಯುಸೇನೆ ಹೆಲಿಕಾಪ್ಟರ್ ಪತನದ ಸ್ಯಾಟ್‌ಲೈಟ್ ದೃಶ್ಯಾವಳಿ‌ ವೈರಲ್?

*ಹೆಲಿಕಾಪ್ಟರ್ ಅಪಘಾತದಲ್ಲಿ ಬಿಪಿನ್ ರಾವತ್ ಸೇರಿ 13 ಜನರ ದುರ್ಮರಣ 
*ಚಾಪರ್ ಪತನದ ಸ್ಯಾಟಲೈಟ್ ದೃಶ್ಯಾವಳಿ‌‌ ಎನ್ನುವ ವಿಡಿಯೋ ವೈರಲ್‌
*ವಿಡಿಯೋ ಕೇವಲ ಗ್ರಾಫಿಕ್ಸ್‌ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಬಯಲು

Graphical Representation of IAF Chopper crash shared as satellite footage is fake mnj
Author
Bengaluru, First Published Dec 18, 2021, 4:35 PM IST

Fact Check: ಇತ್ತೀಚೆಗೆ ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಹುತಾತ್ಮರಾಗಿದ್ದರು. ಈ ಪ್ರಕರಣ ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿತ್ತು. ಹೆಲಿಕಾಪ್ಟರ್ ಪತನದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿದ್ದವು. ಚಾಪರ್‌ ಪತನದ ಕೊನೆ ಕ್ಷಣದ ವಿಡಿಯೋ ಕೂಡ ವೈರಲ್‌ ಆಗಿತ್ತು. 

ಆದರೆ ಈಗ ತಮಿಳುನಾಡಿನಲ್ಲಾದ ವಾಯುಸೇನೆ ಹೆಲಿಕಾಪ್ಟರ್‌ ದುರಂತದ (IAF Chopper Crash) ಸ್ಯಾಟ್‌ಲೈಟ್‌ ಫೂಟೇಜ್ (Satellite Footage) ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 8 ಡಿಸೆಂಬರ್ 2021 ರಂದು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿಯನ್ನು ಬಲಿತೆಗೆದುಕೊಂಡ  ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಡಿಯೋ ಎಂದು ಹೇಳಲಾಗುತ್ತಿದೆ. 

ಆದರೆ ಇದರ ನೈಜತೆಯನ್ನು ಪರೀಕ್ಷೀಸಿದಾಗ ಇದು  ಖಾಸಗಿ ಸುದ್ದಿ ಮಾಧ್ಯಮವೊಂದು ಘಟನಾವಳಿಗಳನ್ನು ವಿವರಿಸಲು ತಯಾರಿಸಿದ ಗ್ರಾಫಿಕಲ್‌ ವಿಡಿಯೋ ಎಂದು ತಿಳಿದು ಬಂದಿದೆ. ಈ ವೈರಲ್ ಕ್ಲಿಪ್ ಅನ್ನು ವಾಸ್ತವವಾಗಿ ತಮಿಳು ಸುದ್ದಿ ಚಾನೆಲ್ ನ್ಯೂಸ್ 7 ತಮಿಳು  (News 7 Tamil Prime) ಪ್ರಸಾರ ಮಾಡಿದ್ದು ಅದರ ಬುಲೆಟಿನ್‌ನಿಂದ ತೆಗೆದುಕೊಂಡು ಇದನ್ನು ವೈರಲ್‌ ಮಾಡಲಾಗಿದೆ. ಚಾಪರ್‌ ದುರಂತದ ದೃಶ್ಯಗಳನ್ನು ಮರುಸೃಷ್ಟಿ ಮಾಡಿ ಸುದ್ದಿ ಮಾಧ್ಯಮದಲ್ಲಿ  ತೋರಿಸಲಾಗಿದೆ. ಕೂನೂರಿನಲ್ಲಿ ಸಂಭವಿಸಿದ ಅಪಘಾತದ ಕುರಿತು ವಿವರವಾದ ಬುಲೆಟಿನ್‌ನ ಭಾಗವಾಗಿರುವ ಕ್ಲಿಪ್, ವಾಯುನೆಲೆಗಳ ಹೆಸರನ್ನು ತೋರಿಸುತ್ತದೆ ಮತ್ತು ಚಾಪರ್‌ನಲ್ಲಿ ರಾವತ್ ಅವರ ಡಿಜಿಟಲಿ ರಚಿಸಿದ (Digitally Made) ದೃಶ್ಯಗಳನ್ನು ಸಹ ತೋರಿಸುತ್ತದೆ.

Claim:

ಕಿರು ಕ್ಲಿಪ್ ಅನ್ನು ಈ ಕೆಳಗಿನ ಪಠ್ಯದೊಂದಿಗೆ ಹಂಚಿಕೊಳ್ಳಲಾಗುತ್ತಿದೆ:

"ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತದ ಸ್ಯಾಟ್‌ಲೈಟ್ ವಿಡಿಯೋ. ಟೈಲ್ ರೋಟರ್ ಸ್ನ್ಯಾಪ್ (Tail Rotor) ಆಯಿತು ಮತ್ತು ಅದು ಇದ್ದಕ್ಕಿದ್ದಂತೆ ಹಿಮ್ಮುಖ ದಿಕ್ಕಿನಲ್ಲಿ ತಿರುಗಿತು ಮತ್ತು 2 ಸೆಕೆಂಡುಗಳಲ್ಲಿ ಅಪ್ಪಳಿಸಿತು. ಹೀಗಾಗಿ ಯಾವುದೇ ಪ್ರತಿಕ್ರಿಯೆಗೆ ಸಮಯವಿರಲಿಲ್ಲ" ಎಂದು ಬರೆಯಲಾಗಿದೆ. ಈ ರೀತಿ ಸಾಕಷ್ಟು ಫೋಟೊಗಳನ್ನು ಶೇರ್‌ ಮಾಡಲಾಗಿದೆ. 

Graphical Representation of IAF Chopper crash shared as satellite footage is fake mnj

Fact Check:

ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ  ಅದು ತಮಿಳು ಸುದ್ದಿ ವಾಹಿನಿಯ 'ನ್ಯೂಸ್ 7' ನ ವಾಟರ್‌ಮಾರ್ಕ್ ಮತ್ತು ಲೋಗೋವನ್ನು ಹೊಂದಿದೆ ಎಂದು ಸ್ಪಷ್ಟವಾಗುತ್ತದೆ. ನ್ಯೂಸ್ 7 YouTube ಚಾನಲ್‌ನಲ್ಲಿ ಈ ವರದಿಯ ಕಿರು ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಅದೇ ದೃಶ್ಯಗಳನ್ನು ಹೊಂದಿರುವ ವಿವರವಾದ ವರದಿಯೂ ಲಭ್ಯವಿದೆ. ಈ ವೀಡಿಯೋ ಡಿಜಿಟಲ್ ಆಗಿ ರಚಿಸಿದ ದೃಶ್ಯಾವಳಿಗಳನ್ನು ಸಹ ಹೊಂದಿದ್ದು ಅದು ಹುತಾತ್ಮ ಜನರಲ್ ಅವರನ್ನು ಚಾಪರ್‌ನಲ್ಲಿ ಕುಳಿತಿರುವ ದೃಶ್ಯಾವಳಿಗಳನ್ನು ಸಹ ತೋರಿಸಿದೆ. ವಿವರವಾದ ಸುದ್ದಿಯುಳ್ಳ ವಿಡಿಯೋವನ್ನು 10 ಡಿಸೆಂಬರ್‌ 2021 ರಂದು ಹಂಚಿಕೊಳ್ಳಲಾಗಿದ್ದು ನೀವು ವಿಡಿಯೋವನ್ನು ಇಲ್ಲಿ ನೋಡಬಹುದು.

ಈ ಗ್ರಾಫೀಕಲ್‌ ವಿಡಿಯೋದ ಸಣ್ಣ ತುಣುಕನ್ನು ಸಹ ಪ್ರತ್ಯೇಕವಾಗಿ ಡಿಸೆಂಬರ್‌ 08 2021 ರಂದು ಅಪ್‌ಲೋಡ್ ಮಾಡಲಾಗಿತ್ತು. ವಿಡಿಯೋದ ಶೀರ್ಷಿಕೆಯನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ ಅದರಲ್ಲಿ 'ಗ್ರಾಫಿಕಲ್ ಡಿಸ್‌ಪ್ಲೇ' ಎಂದು ಬರೆದಿರುವುದು ಖಚಿತವಾಗಿದೆ. ಈ ವಿಡಿಯೋ ನೀವು ಇಲ್ಲಿ ನೋಡಬಹುದು. ಈ ದೃಶ್ಯವೇ ಈಗ ವೈರಲ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಲಿಕಾಪ್ಟರ್ ಅಪಘಾತಕ್ಕೀಡಾದ ರೀತಿಯಲ್ಲಿ ಚಿತ್ರಿಸುವ ಗ್ರಾಫಿಕ್ಸ್ ಹೊರತುಪಡಿಸಿ ವೀಡಿಯೊದಲ್ಲಿ ಬೇರೆ ಯಾವುದೇ ಅಂಶಗಳಿಲ್ಲ. ಆದರೆ  ತಮಿಳುನಾಡಿನ ಕೂನೂರಿನಲ್ಲಿ ಐಎಎಫ್ ಹೆಲಿಕಾಪ್ಟರ್ ಅಪಘಾತದ ಡಿಜಿಟಲ್ ಮರುಸೃಷ್ಟಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಯಾಟ್‌ಲೈಟ್ ದೃಶ್ಯಾವಳಿ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ ಚೆಕ್‌ನಲ್ಲಿ ಈ ರೀತಿ ಯಾವುದೇ ಸ್ಯಾಟ್‌ಲೈಟ್ ದೃಶ್ಯಾವಳಿಗಳಿಲ್ಲ ಎಂಬುದು ಸಾಬೀತಾಗಿದೆ.

Graphical Representation of IAF Chopper crash shared as satellite footage is fake mnj

ಇದನ್ನೂ ಓದಿ:

1) Kangana Ranaut Fact Check: ಬಿಎಸ್ಎಫ್ ಯೋಧರೊಂದಿಗೆ ವಿಜಯ್ ದಿವಸ್ ಆಚರಿಸಿದ್ರಾ ಬಾಲಿವುಡ್‌ ಬೆಡಗಿ?

2) Fact Check: ಕಪ್ಪು ಮೈಬಣ್ಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಮಾಡೆಲ್ ?

3) Fact Check: ಭಾರತದ ಕೋವಿಡ್ ಲಸಿಕೆ ದಾಖಲೆ: ಕೇಂದ್ರ ಸರ್ಕಾರದಿಂದ 3 ತಿಂಗಳ Free Recharge?

Follow Us:
Download App:
  • android
  • ios