Narendra Modi Fact Chek: ಪ್ರಧಾನಿ ನಿಜವಾಗ್ಲೂ IAS ಅಧಿಕಾರಿ ಆರತಿ ಡೋಗ್ರಾ ಕಾಲು ಮುಟ್ಟಿ ನಮಸ್ಕರಿಸಿದ್ರಾ?
*ದಿವ್ಯಾಂಗ ಮಹಿಳೆಯ ಕಾಲು ಮುಟ್ಟಿ ನಮಸ್ಕರಿಸಿದ ಪ್ರಧಾನಿ
*ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
*ಪ್ರಧಾನಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದ್ದು ಯಾರಿಗೆ?
Fact Check: ಡಿ.13ರಂದು ಕಾಶಿ ವಿಶ್ವನಾಥ ಕಾರಿಡಾರ್( Kashi Vishwanath Corridor project) ಉದ್ಘಾಟನೆಗೆ ಪ್ರಧಾನಿ ಮೋದಿ ವಾರಾಣಸಿ (Varanasi)ಗೆ ಆಗಮಿಸಿದ್ದರು. ಈ ಭೇಟಿ ವೇಳೆ ತಮ್ಮನ್ನು ಭೇಟಿ ಮಾಡಲು ಬಂದಿದ್ದ ದಿವ್ಯಾಂಗ ಮಹಿಳೆಯೋರ್ವರ ಕಾಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೂರ್ಣವಾಗಿ ಬಗ್ಗಿ ನಮಸ್ಕರಿಸಿದ್ದರು. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಲ್ಲದೇ ಪ್ರಧಾನಿಯವರ ಈ ನಡೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಆದರೆ ಉದ್ಘಾಟನೆ ಬಳಿಕ ಮೋದಿ (PM Narendra Modi) ಅವರನ್ನು ಭೇಟಿ ಮಾಡಲು ಬಂದ ದಿವ್ಯಾಂಗ ಮಹಿಳೆ ಯಾರು ಎಂಬ ಗೊಂದಲ ಹಲವರಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡ ಪೋಸ್ಟ್‌ಗಳಲ್ಲಿ ನರೇಂದ್ರ ಮೋದಿ, ಕಾಲು ಮುಟ್ಟಿ ನಮಸ್ಕರಿಸಿದ್ದ ದಿವ್ಯಾಂಗ ಮಹಿಳೆ ಭಾರತೀಯ ಆಡಳಿತ ಸೇವೆಗಳ ಅಧಿಕಾರಿ (IAS Officer) ಆರತಿ ಡೋಗ್ರಾ (Arti Dogra) ಎಂದು ಹಲವರು ಉಲ್ಲೇಖಿಸಿದ್ದಾರೆ. ಜತೆಗೆ ಅವರನ್ನು ಕಾಶಿ ಕಾರಿಡಾರ್ ಅಭಿವೃದ್ಧಿಯಲ್ಲಿ ಶ್ರಮ ಪಟ್ಟ ವ್ಯಕ್ತಿ ಎಂದು ಕೂಡ ಹೇಳಲಾಗಿದೆ.
ಆದರೆ ವಾರಾಣಸಿಯಲ್ಲಿ ಪ್ರಧಾನಿ, ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಅಲ್ಲ ಎಂಬದು ಸಾಬೀತಾಗಿದೆ. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದು ಶಿಖಾ ರಸ್ತೋಗಿ( Shikha Rastogi) ಎಂಬ ವಿಕಲ ಚೇತನ ಮಹಿಳೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.
Claim
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೊಸ್ಟ್ ಈ ರೀತಿ ಇದೆ:
"ಉತ್ತರ ಪ್ರದೇಶದ IAS ಅಧಿಕಾರಿಣಿ ಆರ್ತಿ ಡೋಗ್ರಾ ...ದಿವ್ಯ ಕಾಶಿ ಭವ್ಯ ಕಾಶಿಗೆ ಶ್ರಮ ಪಟ್ಟ ವ್ಯಕ್ತಿ. ಅವರಿಗಾಗಿ ನಮ್ಮ ಪ್ರಧಾನಿ ಎಷ್ಟು ಬಾಗಿ ವಂದನೆ ಸಲ್ಲಿಸುತ್ತಿದ್ದಾರೆ ನೋಡಿ....ನಾವು ಕಲಿಯಬೇಕಲ್ಲವೇ ಈ ಸಂಸ್ಕಾರಗಳನ್ನು...." .
ಈ ಸಂದೇಶವನ್ನು ಆಂಗ್ಲ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಹಲವು ಕಡೆ ಹಂಚಿಕೊಳ್ಳಲಾಗಿದೆ. ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು
Fact Check:
ಡಿ.13ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಪ್ರಧಾನಿ ಮೋದಿ ವಾರಾಣಸಿ ಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಎಂಬ ವಿಕಲ ಚೇತನ ಮಹಿಳೆ ಬಂದಿದ್ದರು.ಈ ವೇಳೆ ಅವರು ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದ ಮೋದಿಯವರೇ ಆಕೆಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ಬಗ್ಗೆ 2021 ಡಿಸೆಂಬರ್ 17 ರಂದು ಪ್ರಕಟವಾದ ನಮ್ಮ ವರದಿಯನ್ನು ಇಲ್ಲಿ ನೋಡಬಹುದು. 2021 ಡಿಸೆಂಬರ್ 15 ಬಿಜೆಪಿ ಮಹಿಳಾ ಮೋರ್ಚಾ ದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ (Vanathi Srinivasan) ಕೂಡ ಟ್ವಿಟ್ಟರ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನು ಐಎಎಸ್ ಆಧಿಕಾರಿ ಆರತಿ ಡೋಗ್ರಾ "ದಿವ್ಯ ಕಾಶಿ ಭವ್ಯ ಕಾಶಿಗೆ ಶ್ರಮಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಆದರೆ ಆರತಿ ಡೋಗ್ರಾ 2006ರ ಬ್ಯಾಚ್‌ನ IAS ಅಧಿಕಾರಿಯಾಗಿದ್ದಾರೆ. ಪ್ರಸ್ತುತ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ನೀವು ರಾಜಸ್ಥಾನದ ಅಧಿಕೃತ ವೆಬ್‌ಸೈಟ್ (ಇಲ್ಲಿ) ಗಮನಿಸಬಹುದು ಈ ಬಗ್ಗೆ ಸ್ವತ: ಆರತಿ ಡೋಗ್ರಾ ತಮ್ಮ ಟ್ವೀಟರ್ Bio ನಲ್ಲಿ ಕೂಡ ಬರೆದುಕೊಂಡಿದ್ದಾರೆ.
ಇನ್ನು ವಾರಾಣಸಿ ಇರುವುದು ಉತ್ತರಪ್ರದೇಶದಲ್ಲಿ ಹಾಗೂ ಪ್ರಸ್ತುತ ವಾರಾಣಸಿ ಜಿಲ್ಲಾಧಿಕಾರಿಯಾಗಿ ಶ್ರೀ ಕೌಶಲ್ ರಾಜ್ ಶರ್ಮಾ, ಐಎಎಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರಾಣಸಿ ವಿಭಾಗ ಆಯುಕ್ತರಾಗಿ ದೀಪಕ್ ಅಗರವಾಲ್ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಾರಾಣಸಿ ಅಧಿಕೃತ ವೆಬ್‌ಸೈಟ್‌ನಲ್ಲಿ (https://varanasi.nic.in/) ಮಾಹಿತಿ ನೀಡಲಾಗಿದೆ. ಕಾಶಿ ಕಾರಿಡಾರ್ ಅಭಿವೃದ್ಧಿ ಹಿಂದೆ ಕೆಲಸ ಮಾಡಿದ ಅಧಿಕಾರಿ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಂತೆ ನರೇಂದ್ರ ಮೋದಿ, ಐಎಸ್ ಅಧಿಕಾರಿ ಆರತಿ ಡೋಗ್ರಾ ಕಾಲು ಮುಟ್ಟಿ ನಮಸ್ಕರಿಸಿಲ್ಲ ಬದಲಾಗಿ ಪ್ರಧಾನಿಯವರನ್ನು ಭೇಟಿ ಮಾಡಲು ಬಂದಿದ್ದ ಶಿಖಾ ರಸ್ತೋಗಿ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ ಎಂದು Fact Checkನಲ್ಲಿ ಸಾಬೀತಾಗಿದೆ.