ನವದೆಹಲಿ(ಜು.10): ಅಜಾನುಬಾಹು ಗಾತ್ರದ ಅಸ್ಥಿಪಂಜರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಮಹಾಭಾರತದ ಪ್ರಮುಖ ಪಾತ್ರವಾದ ಭೀಮನ ಪುತ್ರ ಘಟೋತ್ಕಜನ ಅಸ್ಥಿ ಎಂದು ಹೇಳಲಾಗುತ್ತಿದೆ. ಭಾರೀ ಗಾತ್ರದ ಅಸ್ಥಿಯೊಂದನ್ನು ಪೋಸ್ಟ್‌ ಮಾಡಿ, ‘ಮಹಾಭಾರತ ಒಂದು ಕಲ್ಪನಾಧಾರಿತ ಕತೆ ಎಂದು ಕರೆಯುವವರ ಗಮನಕ್ಕೆ; ಮಹಾಭಾರತದ ಯುದ್ಧ ನಡೆದ ಸ್ಥಳವಾದ ಕುರುಕ್ಷೇತ್ರದಲ್ಲಿ ಉತ್ಕನನ ಮಾಡುವ ಭೀಮನ ಮಗ ಘಟೋತ್ಕಜನ ಅಸ್ಥಿ ಪತ್ತೆಯಾಗಿದೆ. ಅದು ಸುಮಾರು 80 ಅಡಿ ಉದ್ದವಿದೆ’ ಎಂದು ಹೇಳಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಮಹಾಭಾರತ ಕಾಲದ ಅಸ್ಥಿ ಪತ್ತೆಯಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳಸುದ್ದಿ, ಕಳೆದ 9 ವರ್ಷಗಳಿಂದಲೂ ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದು ಅಮೆರಿಕದ ಗ್ರಾಫಿಕ್‌ ಡಿಸೈನರ್‌ ಕೈಚಳಕದಲ್ಲಿ ಮೂಡಿ ಬಂದ ಚಿತ್ರ ಎಂದು ತಿಳಿದುಬಂದಿದೆ.

Fact Check: ಬಳಕೆದಾರರೇ ಗಮನಿಸಿ, ರಾತ್ರಿ 11.30 ರಿಂದ ವಾಟ್ಸ್‌ಆ್ಯಪ್‌ ಆಫ್‌!

ಆಗಸ್ಟ್‌ 14, 2011ರಂದು ಆಸ್ಪ್ರೇಲಿಯಾದಲ್ಲಿ ನಡೆದ ‘ಡಿಸೈನ್‌ ಕ್ರೌಡ್‌’ ಎಂಬ ಸ್ಪರ್ಧೆಗಾಗಿ ಈ ಚಿತ್ರವನ್ನು ರಚಿಸಲಾಗಿತ್ತು. ಈ ಚಿತ್ರ ಒಟ್ಟು 5 ಅಂಕಗಳಲ್ಲಿ 3 ಅಂಕಗಳನ್ನು ಪಡೆದಿತ್ತು. ಅದರ ಹೊರತಾಗಿ ಈ ಫೋಟೋಗೂ ಮಹಾಭಾರತದ ಭೀಮನ ಪುತ್ರ ಘಟೋತ್ಕಜನಿಗೂ ಯಾವುದೇ ಸಂಬಂಧ ಇಲ್ಲ.