ಆಂಧ್ರಪ್ರದೇಶದ ಕರ್ನೂಲಿನ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಅಬ್ದುಲ್‌ ಹಫೀಜ್‌ ನರ್ಸ್‌ ಒಬ್ಬರಲ್ಲಿ ಧರ್ಮಗುರುವಿನ ಪಾದ ತೊಳೆಯಲು ಹೇಳಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ದೆಹಲಿಯ ಮರ್ಕಜ್‌ ಧಾರ್ಮಿಕ ಸಮಾವೇಶಕ್ಕೆ ತೆರಳಿದವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‌ ಆಗಿದ್ದರೆ ಇಷ್ಟೆಲ್ಲಾ ಸಮಸ್ಯೆಯೇ ಆಗುತ್ತಿರಲಿಲ್ಲ ಎಂದು ಸಹೋದ್ಯೋಗಿ ಬಳಿ ಈ ನರ್ಸ್‌ ಹೇಳಿಕೊಂಡಿದ್ದ ಕಾರಣಕ್ಕಾಗಿ ಶಾಸಕ ಹಫೀಜ್‌ ನರ್ಸ್‌ಗೆ ಧರ್ಮಗುರುವಿನ ಪಾದ ತೊಳೆಯಲು ಹೇಳಿದ್ದಾರೆ’ ಎಂದು ಬರೆದು ನೆಟ್ಟಿಗರು ಫೋಟೋವನ್ನು ಪೋಸ್ಟ್‌ ಮಾಡುತ್ತಿದ್ದಾರೆ.

 

ಆದರೆ ಫೋಟೋ ಹಿಂದಿನ ವಾಸ್ತವಾಂಶವನ್ನು ಲೈವ್‌ ಬಯಲಿಗೆಳೆದು ವೈರಲ್‌ ಸುದ್ದಿ ಸುಳ್ಳು ಎಂದು ಖಚಿತಪಡಿಸಿದೆ. ಹಫೀಜ್‌ ಖಾನ್‌ ಅವರ ಫೇಸ್‌ಬುಕ್‌ನಲ್ಲಿ ಇದೇ ಫೋಟೋ ಪತ್ತೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾನ್‌, ‘ಚಿತ್ರದಲ್ಲಿರುವ ಧರ್ಮಗುರುವಿನ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾರ್ಚ್ ತಿಂಗಳಲ್ಲಿ ರಾಯಲಸೀಮ ವಿವಿಯ ಕ್ವಾರಂಟೈನ್‌ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಗಾಲುಗಳಿಗೆ ಗಂಭೀರ ಗಾಯಗಳಾಗಿತ್ತು. ನರ್ಸ್‌ ಒಬ್ಬರು ಅವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದರು’ ಎಂದಿದ್ದಾರೆ.

Fact Check: ಎಚ್‌ಸಿಕ್ಯೂ ಮಾತ್ರೆ ನೀಡಿದ್ದಕ್ಕೆ ಸ್ವಿಸ್‌ ಗೌರವ?

ವಿಡಿಯೋದಲ್ಲಿರುವ ನರ್ಸ್‌ ಕೂಡ ಸ್ವತಃ ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿ, ‘ಸೈಯದ್‌ ಯಹ್ಯಾ ಎಂಬ ರೋಗಿಯ ಕಾಲಿಗೆ ಗೇಟ್‌ ಬಿದ್ದು ರಕ್ತಸ್ರಾವವಾಗುತ್ತಿತ್ತು. ನಾನು ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಹಫೀಜ್‌ ಸ್ಥಳಕ್ಕೆ ಆಗಮಿಸಿದ್ದರು’ ಎಂದಿದ್ದಾರೆ.

- ವೈರಲ್ ಚೆಕ್