Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?
ಲಾಕ್‌ಡೌನ್ ನಡುವೆ ಮಾಜಿ ಸಚಿವ ರೇವಣ್ಣ ಮಾಂಸದಂಗಡಿಯಲ್ಲಿರುವ ಫೋಟೋ ವೈರಲ್ ಆಗಿದೆ. ಏನಿದರ ಸತ್ಯಾಸತ್ಯತೆ? ಇಲ್ಲಿದೆ ವಿವರ
ಹಾಸನ(ಏ.04): ಕೆಲ ದಿನಗಳ ಹಿಂದಷ್ಟೇ ದೀಪ ಬೆಳಗಿ ಎಂಬ ಅಭಿಯಾನಕ್ಕೆ ಪಿಎಂ ಮೋದಿ ಕರೆ ನೀಡಿದ್ದು, ಈ ವೇಳೆ ಮಾಜಿ ಸಚಿವ ಎಚ್. ಡಿ ರೇವಣ್ಣ ಹೊರಗೋದ್ರೆ ಪೊಲೀಸರ ಒದೆ ಬೀಳುತ್ತೆ ಎಂದು ಉತ್ತರಿಸಿದ್ದರು. ಅವರ ಈ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಳಿಕ ಬಿಜೆಪಿ ಅವರ ಮನೆಗೇ ಮೇಣದ ಬತ್ತಿ ಕಳುಹಿಸಿಕೊಟ್ಟಿತ್ತು. ಆದರೀಗ ಹೊರಗೋದ್ರೆ ಲಾಠಿ ಏಟು ತಿನ್ಬೇಕು ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿರುವ ಫೋಟೋ ಒಂದು ಸೋಶಿಯ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಲಾಕ್‌ಡೌನ್ ಸಂದರ್ಭದಲ್ಲಿ ರೇವಣ್ಣ ಮಾಂಸ ಖರೀದಿಸಲು ಹೋಗಿದ್ದಾರಾ?
'ಮೋಂಬತ್ತಿ ಬತ್ತಿ ತರೋಕೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಒದೆ ಬೀಳುತ್ತೆ'
ಹೌದು ಏಪ್ರಿಲ್ 5 ರಂದು ರಾತ್ರಿ ಒಂಭತ್ತು ಗಂಟೆಯಿಂದ ಒಂಭತ್ತು ನಿಮಿಷದವರೆಗೆ ದೀಪ ಬೆಳಗುವಂತೆ ಪ್ರಧಾನಿ ಮೋದಿ ದೇಶ ವಾಸಿಗರಿಗೆ ಕರೆ ನೀಡಿದ್ದರು. ಈ ಮೂಲಕ ಕೊರೋನಾವನ್ನು ಒಗ್ಗಟ್ಟಿನಿಂದ ಎದುರಿಸುವ ಸಂದೇಶ ಸಾರುವಂತೆ ಮನವಿ ಮಾಡಿದ್ದರು. ಬಾಲ್ಕನಿ, ಮನೆ ಎದುರು ಟಾರ್ಚ್, ಕ್ಯಾಂಡಲ್, ದೀಪ, ಅಥವಾ ಹಣತೆ ಹಚ್ಚುವಂತೆ ಹೇಳಿದ್ದರು. ಹೀಗಿರುವಾಗ ಎಚ್. ಡಿ. ರೇವಣ್ಣ ಕ್ಯಾಂಡಲ್ ತರಲು ಹೊರ ಹೋದರೆ ಪೊಲೀಸರು ಒದೆ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದರು. ಅವರ ಈ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರು ಅವರ ಮನೆ ಬಾಗಿಲಗೇ ಕ್ಯಾಂಡಲ್ ಕಳುಹಿಸಿ ಕೊಟ್ಟಿದ್ದರು.
ಹೊರಗಡೆ ಅಂಗಡಿಗೆ ಹೋದ್ರೆ ಒದೆ ಬೀಳುತ್ತೆ ಎಂದ ರೇವಣ್ಣ ಇದ್ದಲ್ಲಿಗೇ ಮೊಂಬತ್ತಿ
ಆದರೀಗ ಈ ಮಾತಿನ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಮಾಂಸದ ಅಂಗಡಿಯಲ್ಲಿರುವ ಫೋಟೋ ಒಂದು ವೈರಲ್ ಆಗುತ್ತಿದ್ದು, ಕ್ಯಾಂಡಲ್ ತರಲು ಲಾಕ್‌ಡೌನ್ ನೆಪ ಕೊಟ್ಟವರು ಈಗ ಮಾಂಸ ಖರೀದಿಸುವಾಗ ಲಾಕ್‌ಡೌನ್ ಇಲ್ಲವೇ ಎಂಬ ಸಂದೇಶವೂ ಭಾರೀ ವೈರಲ್ ಆಗಿದೆ. ಆದರೆ ನಿಜಕ್ಕೂ ರೇವಣ್ಣ ಲಾಕ್‌ಡೌನ್ ಸಂದರ್ಭದಲ್ಲಿ ಮಾಂಸ ಖರೀದಿಸಲು ಹೋಗಿದ್ದರಾ ಎಂದು ಪರಿಶೀಲಿಸಿದಾಗ ಬೇರೆಯೇ ವಿಚಾರ ಬೆಳಕಿಗೆ ಬಂದಿದೆ.
ಹೌದು ವೈರಲ್ ಅಗುತ್ತಿರುವ ಫೋಟೋ ಕಳೆದ ವರ್ಷದ ಹೊಸತಡ್ಕು ವೇಳೆ ತೆಗೆದಿದ್ದು ಎನ್ನಲಾಗಿದೆ. ಹಳೆಯ ಫೋಟೋ ಈಗ ವೈರಲ್ ಆಗಿದ್ದು, ಲಾಕ್‌ಡೌನ್ ನಡುವೆ ತೆಗೆದ ಫೋಟೋ ಎಂದು ತಪ್ಪು ಸಂದೇಶ ರವಾನೆಯಾಗುತ್ತಿದೆ.