ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿಮಾರ್ಣಕ್ಕಾಗಿ ಆ.5ರಂದು ಭೂಮಿಪೂಜೆ ನಡೆಯಲಿದೆ. ಭವ್ಯ ಮಂದಿರ ನಿರ್ಮಾಣದ ಶಂಕುಸ್ಥಾಪನೆಯು ಅದ್ಧೂರಿಯಾಗಿ ನೆರವೇರಲಿದೆ. ಇದಕ್ಕಾಗಿ ಅಯೋಧ್ಯೆಯನ್ನು ಅಭೂತಪೂರ್ವ ರೀತಿಯಲ್ಲಿ ಸಿಂಗರಿಸಲಾಗುತ್ತಿದೆ. ಇದರ ವಿಡಿಯೋ ಎಂದು ಹೇಳಲಾದ ಚಿತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

90 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ದೇವಾಲಯದ ಆವರಣದಲ್ಲಿ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಿರುವ, ಕೆಲಸಗಾರರು ಸಿಂಗಾರ ಮಾಡುತ್ತಾ ಕಾರ‍್ಯನಿರತರಾಗಿರುವ ದೃಶ್ಯವಿದೆ. ಇದನ್ನು ಪೋಸ್ಟ್‌ ಮಾಡಿ ಕೆಲವರು, ‘ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ‍್ಯಕ್ರಮಕ್ಕೆ ಮಾಡಿರುವ ಡೆಕೋರೇಶನ್‌’ ಎಂದು ಬರೆದುಕೊಂಡಿದ್ದಾರೆ.

Fact Check: ಕೊರೊನಾ ರೋಗಿಗಳ ಕಿಡ್ನಿ ಮಾರಾಟ ಮಾಡಲಾಗುತ್ತಿದೆಯಾ?

ಆದರೆ ನಿಜಕ್ಕೂ ಇದು ಅಯೋಧ್ಯೆಯ ವಿಡಿಯೋವೇ ಎಂದು ಪರಿಶೀಲಿಸಿದಾಗ ಇದು ರಾಮಮಂದಿರ ಹಾಗೂ ಸುತ್ತಲಿನ ವಿಡಿಯೋ ಅಲ್ಲ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ವಿಡಿಯೋದಲ್ಲಿರುವ ದೇವಸ್ಥಾನ ಹೈದರಾಬಾದಿನ ರಂಗನಾಥ ಸ್ವಾಮಿ ದೇವಾಲಯ ಎಂದು ತಿಳಿದುಬಂದಿದೆ.

2020 ರ ಜನವರಿಯಲ್ಲಿ ನಡೆದ ಏಕಾದಶಿ ಪೂಜೆಗೆ ರಂಗನಾಥ ದೇವಾಲಯವನ್ನು ಈ ರೀತಿ ಸಿಂಗರಿಸಲಾಗಿತ್ತು. ಈ ದೇವಾಲಯದ ಪೂಜಾರಿಯೊಬ್ಬರನ್ನು ಬೂಮ್‌ ಸಂಪರ್ಕಿಸಿದಾಗಲೂ ಅವರೂ ಇದೇ ಉತ್ತರ ನೀಡಿದ್ದಾರೆ. ಅಲ್ಲದೆ ಯುಟ್ಯೂಬ್‌ನಲ್ಲಿಯೂ ಜನವರಿ 5, 2020ರಂದು ಅಪ್‌ಲೋಡ್‌ ಆಗಿರುವ ಈ ವಿಡಿಯೋ ಲಭ್ಯವಿದೆ. ಹಾಗಾಗಿ ಇದು ರಾಮಮಂದಿರದ ಆವರಣ ಅಲ್ಲ, ರಾಮಮಂದಿರ ಭೂಮಿ ಪೂಜೆಗೂ ಇದಕ್ಕೂ ಸಂಬಂಧ ಇಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್