ಭಾರತದಲ್ಲಿ ಕೊರೋನಾ ಮರಣಮೃದಂಗ ಬಾರಿಸುತ್ತಿದೆ. ಈ ನಡುವೆ ಕೊರೋನಾ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿರುವ ಆಸ್ಪತ್ರೆಗಳು ಕಿಡ್ನಿ ಕದಿಯುವ ದಂಧೆ ನಡೆಸುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಅಂಗಾಂಗವನ್ನು ಐಸ್‌ ಟ್ರೇನಲ್ಲಿ ಇಟ್ಟಿರುವ ಒಂದು ಫೋಟೋ ಮತ್ತು ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಇನ್ನೊಂದು ಪೋಟೋವನ್ನು ಪೋಸ್ಟ್‌ ಮಾಡಿ, ‘ಉತ್ತರ ಪ್ರದೇಶದ ಮುಜಾಫರಪುರದ ಗಾರ್ಗ್‌ ಆಸ್ಪತ್ರೆಯ ವೈದ್ಯರು ಕೊರೋನಾ ರೋಗಿಗಳ ಕಿಡ್ನಿ ಮಾರುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇಲ್ಲಿ ಮಾನವೀಯತೆಗೂ ಜಾಗವಿಲ್ಲ, ಈ ಸುದ್ದಿ ವೈದ್ಯ ವೃತ್ತಿಗೇ ಕಳಂಕ’ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಸಾವಿರಾರು ಸಂಖ್ಯೆಯಲ್ಲಿ ಇದನ್ನು ಶೇರ್‌ ಮಾಡುತ್ತಿದ್ದಾರೆ.

 

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಹಳೆಯ ಫೋಟೋವನ್ನು ಬಳಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ. ವೈರಲ್‌ ಫೋಟೋಗೂ ಕೊರೋನಾ ವೈರಸ್ಸಿಗೂ ಸಂಬಂಧವೇ ಇಲ್ಲ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ರೀತಿಯ ಫೋಟೋ 2018ರಲ್ಲಿ ಹಲವಾರು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ.

ಅದರಲ್ಲಿ ‘ರೋಗಿಗೆ ಮಾಹಿತಿ ನೀಡದೆ 60 ವರ್ಷದ ವ್ಯಕ್ತಿಯ ಕಿಡ್ನಿ ತೆಗೆದ ಆರೋಪದ ಮೇಲೆ ಮುಜಾಫರಪುರದ ಗಾರ್ಗ್‌ ಆಸ್ಪತ್ರೆಯ ಡಾ.ವಿಭು ಗಾರ್ಗ್‌ ಮತ್ತು ಮೂವರು ಸಿಬ್ಬಂದಿಯನ್ನು ಬಂಧಿಸಲಾಯಿತು’ ಎಂದಿದೆ. ಅಲ್ಲದೆ ಕುಟುಂಬಸ್ಥರು ಕದ್ದ ಕಿಡ್ನಿಯನ್ನು ತಾವು ಕಂಡಿರುವುದಾಗಿಯೂ ಹೇಳಿದ್ದರು ಎಂದಿದೆ. ಅದೇ ಸುದ್ದಿಯನ್ನು ಸದ್ಯ ಕೊರೋನಾಗೆ ಲಿಂಕ್‌ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್