ನವದೆಹಲಿ (ಅ. 24): ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ತೆಲುಗು ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ‘

ದಿ ಹನ್ಸ್‌ ಇಂಡಿಯಾ’ ಸುದ್ದಿಸಂಸ್ಥೆ ‘ಅಮೆರಿಕ ತೆಲುಗು ಭಾಷೆಯನ್ನು ಅಧಿಕೃತ ಭಾಷೆಯೆಂದು ಪರಿಗಣಿಸಿ ಬ್ಯಾಲಟ್‌ ಬಾಕ್ಸ್‌ನಲ್ಲಿ ಸ್ಥಳ ನೀಡಿದೆ’ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಿದೆ. ಇದನ್ನು ಫೇಸ್‌ಬುಕ್‌ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್‌ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ತೆಲುಗು ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಒಂದಾದ ತೆಲುಗನ್ನು ಅಧಿಕೃತ ಭಾಷೆ ಎಂದು ಪರಿಗಣಿಸಿದೆ’ ಎಂದು ಕೆಲವರು ಒಕ್ಕಣೆ ಬರೆದುಕೊಂಡಿದ್ದಾರೆ.

Fact Check : ನೀಟ್ ಪರೀಕ್ಷೆಯ ಮೊದಲ ಐದೂ ಸ್ಥಾನಗಳು ಮುಸ್ಲಿಮರಿಗೆ?

ಆದರೆ ನಿಜಕ್ಕೂ ಅಮೆರಿಕ ತೆಲುಗು ಭಾಷೆಯನ್ನು ಅಧಿಕೃತ ಭಾಷೆ ಎಂದು ಪರಿಗಣಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಅಮೆರಿಕ ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾಷೆಯನ್ನೂ ಅಧಿಕೃತ ಭಾಷೆಯೆಂದು ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ. ಹಾಗೆಯೇ ತೆಲುಗು ಅಮೆರಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾಷೆಗಳಲ್ಲಿ ಒಂದು. ಅಲ್ಲದೆ ಅಲ್ಲಿನ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಕೆಲವು ರಾಜ್ಯಗಳಲ್ಲಿ ತೆಲುಗು ಸೇರಿದಂತೆ ಹಲವು ವಿದೇಶಿ ಭಾಷೆಗಳಲ್ಲಿ ಬ್ಯಾಲಟ್‌ ಪೇಪರ್‌ಗಳನ್ನು ಮುದ್ರಿಸಲಾಗುತ್ತದೆ.

ಈ ಹಿಂದೆ ಇಂಗ್ಲಿಷ್‌ ಭಾಷೆಯನ್ನು ಅಮೆರಿಕದ ಅಧಿಕೃತ ಭಾಷೆ ಎಂದು ಪರಿಗಣಿಸುವ ಸಂಬಂಧ ಹಲವು ಭಾರಿ ಚರ್ಚೆಯಾಗಿದೆ. ಆದಾಗ್ಯೂ ಯಾವುದೇ ಭಾಷೆಯನ್ನು ಅಧಿಕೃತ ಎಂದು ಇದುವರೆಗೆ ಘೋಷಿಸಿಲ್ಲ. ಅಮೆರಿಕದಲ್ಲಿ 350 ಭಾಷೆಗಳನ್ನು ಬಳಸಲಾಗುತ್ತಿದೆ. ಅದರಲ್ಲಿ ತೆಲುಗು ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಭಾಷೆ ಎಂದು ತಿಳಿದುಬಂದಿದೆ.

- ವೈರಲ್ ಚೆಕ್