Fact Check : ರೈತ ಹೋರಾಟಕ್ಕೆ ಬೆಂಬಲಿಸಿದ್ದ ಪಾಪ್ ಸಿಂಗರ್ ರಿಹಾನಾ ಪಾಕ್ ಧ್ವಜ ಹಿಡಿದ್ರಾ.?
ರೈತ ಹೋರಾಟವನ್ನು ಬೆಂಬಲಿಸಿ ಸುದ್ದಿಯಾಗಿದ್ದ ಪಾಪ್ ಸಿಂಗರ್ ರಿಹಾನಾ ಪಾಕಿಸ್ತಾನದ ಧ್ವಜವನ್ನು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಇದು..?
ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಮೂರು ತಿಂಗಳಿನಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಈ ಪ್ರತಿಭಟನೆಗೆ ಅಮೆರಿಕದ ಪಾಪ್ ಸಿಂಗರ್ ರಿಹಾನಾ ಬೆಂಬಲ ಘೋಷಿಸಿ, ‘ನಾವೇಕೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಮಾತನಡಬಾರದು?’ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಬೆನ್ನಲ್ಲೇ ರಿಹಾನಾ ಪಾಕಿಸ್ತಾನದ ಧ್ವಜವನ್ನು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಟೇಡಿಯಂವೊಂದರಲ್ಲಿ ರಿಹಾನಾ ಪಾಕ್ ಧ್ವಜ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿ ರಿಹಾನಾ ಭಾರತ ವಿರೋಧಿ ಎಂಬ ರೀತಿಯಲ್ಲಿ ಹಲವರು ಒಕ್ಕಣೆ ಬರೆದುಕೊಂಡಿದ್ದಾರೆ.
ಒಂದು ಟ್ವೀಟ್, 18 ಕೋಟಿ ಮೌಲ್ಯ: ಬಯಲಾಯ್ತು ರೈತ ಹೋರಾಟ ಬೆಂಬಲದ ಅಸಲಿಯತ್ತು!
ಆದರೆ ನಿಜಕ್ಕೂ ರಿಹಾನಾ ಪಾಕಿಸ್ತಾನ ಧ್ವಜ ಹಿಡಿದಿದ್ದರೇ ಎಂದು ಪರಿಶೀಲಿಸಿದಾಗ ಬೇರೊಂದು ಧ್ವಜ ಹಿಡಿದ ಫೋಟೋವನ್ನು ಫೋಟೋಶಾಪ್ ಮೂಲಕ ತಿರುಚಿ ಈ ರೀತಿ ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಗೂಗಲ್ ರಿವಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್)ಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮೂಲ ಫೋಟೋ ಲಭ್ಯವಾಗಿದೆ.
ಅದರಲ್ಲಿ ರಿಹಾನಾ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಧ್ವಜವನ್ನು ಹಿಡಿದು ನಿಂತಿದ್ದಾರೆ. 2019ರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್ ವಿರುದ್ಧದ ಪುರುಷರ ಪಂದ್ಯಾವಳಿ ವೇಳೆ ವೀಕ್ಷಣೆಗೆ ಬಂದಿದ್ದ ರಿಹಾನಾ ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಮ್ ಧ್ವಜ ಹಿಡಿದಿದ್ದರು. ಅದನ್ನೇ ಸದ್ಯ ತಪ್ಪಾಗಿ ಅರ್ಥೈಸಲಾಗುತ್ತಿದೆ.
- ವೈರಲ್ ಚೆಕ್