ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಹಲವು ರಾಜ್ಯಗಳ ಸಾವಿರಾರು ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸೇರಿದಂತೆ ಹಲವರು ರೈತ ಚಳವಳಿಯಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ.

Fact Check : ಶಹೀನ್ ಭಾಗ್ ದಾದಿ ಈಗ ಪಂಜಾಬ್ ರೈತಳಾಗಿ ಪ್ರತಿಭಟನೆಯಲ್ಲಿ ಭಾಗಿ?

ಇದಕ್ಕೆ ಇಂಬು ನೀಡುವಂತೆ ಗುಂಪೊಂದು ಖಲಿಸ್ತಾನ ಪರ, ಪಾಕಿಸ್ತಾನದ ಪರ ಮತ್ತು ಪ್ರಧಾನಿ ಮೋದಿ ವಿರುದ್ಧವಾಗಿ ಘೋಷಣೆ ಕೂಗುವ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ಇದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯ ವಿಡಿಯೋ ಎಂದು ಹೇಳಲಾಗುತ್ತಿದೆ. ‘ಪ್ರಧಾನಿ ಮೋದಿ ವಿರುದ್ಧದ ಘೋಷಣೆ ಕೂಗುವುದರಲ್ಲಿ ಅರ್ಥವಿದೆ. ಆದರೆ ಖಲಿಸ್ತಾನ ಮತ್ತು ಪಾಕಿಸ್ತಾನದ ಪರ ಘೋಷಣೆ ಇಲ್ಲೇಕೆ? ಇದು ರೈತ ಚಳವಳಿಯೇ ಅಥವಾ ಖಲಿಸ್ತಾನ ಉಗ್ರರ ಚಳವಳಿಯೇ’ ಎಂದು ಒಕ್ಕಣೆ ಬರೆದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಆದರೆ ಈ ಸುದ್ದಿ ನಿಜವೇ ಎಂದು  ಪರಿಶೀಲಿಸಿದಾಗ ವೈರಲ್‌ ವಿಡಿಯೋಗೂ ದೆಹಲಿಯ ರೈತ ಚಳವಳಿಗೂ ಸಂಬಂಧವೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ವಿಡಿಯೋವನ್ನು 2019 ಜೂನ್‌ 30ರಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದು ಪತ್ತೆಯಾಗಿದೆ.

 

ಅದರಲ್ಲಿ 2019ರಲ್ಲಿ ಬ್ರಿಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಕಪ್‌ ಟೂರ್ನಿ ವೇಳೆ ಸಿಖ್ಖರು ಖಲಿಸ್ತಾನ ಪರ ಘೋಷಣೆ ಕೂಗಿದರು ಎಂದು ಹೇಳಲಾಗಿದೆ. ಆಗ ಹಲವಾರು ಮಾಧ್ಯಮಗಳೂ ಅದನ್ನು ವರದಿ ಮಾಡಿದ್ದವು. ಹಾಗಾಗಿ ರೈತ ಚಳುವಳಿ ವೇಳೆ ಖಲಿಸ್ತಾನ ಪರ ಘೋಷಣೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು.

- ವೈರಲ್ ಚೆಕ್