ನವದೆಹಲಿ (ಸೆ. 12): 18 ನೇ ಶತಮಾನದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜೀವನಾಧಾರಿತ ಸಿನಿಮಾ ಬಹಿಷ್ಕಾರಕ್ಕೆ ಕರೆ ನೀಡಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲಿ ‘ಟಿಪ್ಪುಸುಲ್ತಾನ್‌ ಜೀವನಾಧಾರಿತ ಸಿನಿಮಾ ಆಗುತ್ತಿದೆ. ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಈ ಸಿನಿಮಾದಲ್ಲಿ ಟಿಪ್ಪುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಂಗನಾಗೆ ಹೊಸ ಸ್ಟುಡಿಯೋ ಕಟ್ಟೋಕೆ 200 ಕೋಟಿ ಕೊಟ್ರಾ ಅಂಬಾನಿ ದಂಪತಿ?

ಈ ಚಿತ್ರದ ನಿರ್ಮಾಪಕರಾಗಿ ಹಣ ಹೂಡಿಕೆ ಮಾಡುತ್ತಿರುವವರೂ ಶಾರುಕ್‌ ಅವರೇ. ಟ್ರೇಲರ್‌ ಸದ್ಯ ಬಿಡುಗಡೆಯಾಗಿದ್ದು, ಯುದ್ಧದ ವೇಷಧಾರಿ ರಾಜನ ಪೋಷಾಕಿನಲ್ಲಿ ಅವರನ್ನು ತೋರಿಸಲಾಗಿದೆ. ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌ನನ್ನು ಸಿನಿಮಾ ಮೂಲಕ ವೈಭವೀಕರಿಸುವುದು ಅಕ್ಷಮ್ಯ’ ಎಂದು ಹೇಳಲಾಗುತ್ತಿದೆ. ಟಿಪ್ಪುಸುಲ್ತಾನ್‌ ಚಿತ್ರದ ಟ್ರೇಲರ್‌ನ ಸ್ಕ್ರೀನ್‌ಶಾಟ್‌ ಪೋಸ್ಟ್‌ ಮಾಡಿ ಕೆಲ ನೆಟ್ಟಿಗರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಹಿಷ್ಕಾರ ಹಾಕಬೇಕು ಎಂದೂ ಹೇಳಲಾಗುತ್ತಿದೆ.

 

ಆದರೆ ನಿಜಕ್ಕೂ ಟಿಪ್ಪು ಸುಲ್ತಾನ್‌ ಜೀವನಾಧಾರಿತ ಸಿನಿಮಾ ಆಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಟಿಪ್ಪು ಹೆಸರಿನ ಸಿನಿಮಾವೂ ಇಲ್ಲ, ಅದರ ಟ್ರೇಲರ್‌ ಕೂಡ ಬಿಡುಗಡೆಯಾಗಿಲ್ಲ. ಮೇಲಾಗಿ ಶಾರುಕ್‌ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದೂ ನಿಜವಲ್ಲ ಎಂದು ತಿಳಿದುಬಂದಿದೆ. ಶಾರುಕ್‌ ಅಭಿಮಾನಿಯೊಬ್ಬರು ಈ ರೀತಿಯ ಪೋಸ್ಟರ್‌ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದನ್ನೇ ನಂಬಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ 2018ರಿಂದಲೂ ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

- ವೈರಲ್ ಚೆಕ್