ನವದೆಹಲಿ (ಡಿ. 25): ‘ಪ್ರಧಾನಿ ನರೇಂದ್ರ ಮೋದಿಗೆ ಸಂಸಾರವಿಲ್ಲ ಏನಿಲ್ಲ, ಅವರು ಯಾರಿಗಾಗಿ ಭ್ರಷ್ಟಾಚಾರ ಮಾಡಿ ಹಣ ಸಂಪಾದನೆ ಮಾಡುತ್ತಾರೆ ಎಂದು ಬಿಜೆಪಿಯವರು ಕೇಳುತ್ತಾರಲ್ಲವೇ? ಹಾಗಿದ್ದರೆ ಇಲ್ಲಿ ನೋಡಿ. ಮೋದಿಯವರ ಕುಟುಂಬಕ್ಕೆ ಸಂಬಂಧಿಸಿದ ಸಂಗತಿಗಳು ಇಲ್ಲಿವೆ.

Fact Check : ಅದಾನಿ ಪತ್ನಿಗೆ ತಲೆಬಾಗಿದ್ರಾ ಮೋದಿ

ಮೋದಿಯ ಅಣ್ಣ ಸೋಮಭಾಯಿ ಮೋದಿ ಗುಜರಾತ್‌ನ ನೇಮಕಾತಿ ಮಂಡಳಿಯ ಚೇರ್ಮನ್‌. ಮೋದಿಯ ತಮ್ಮ ಪಂಕಜ್‌ ಮೋದಿ ನೇಮಕಾತಿ ಮಂಡಳಿಯ ಉಪಾಧ್ಯಕ್ಷ. ಇನ್ನೊಬ್ಬ ತಮ್ಮ ಪ್ರಹ್ಲಾದ ಮೋದಿ ಗುಜರಾತಿನಾದ್ಯಂತ ಕಾರು ಶೋರೂಂಗಳನ್ನು ಹೊಂದಿದ್ದಾರೆ. ಪ್ರಧಾನಿಯ ಕಸಿನ್‌ಗಳೆಲ್ಲ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ’ ಎಂಬ ಸಂದೇಶವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಕಾಂಗ್ರೆಸ್‌ ಪಕ್ಷದ ಸೋಷಿಯಲ್‌ ಮೀಡಿಯಾ ಘಟಕದ ರಾಷ್ಟ್ರೀಯ ಸಂಯೋಜಕ ವಿನಯ್‌ ಕುಮಾರ್‌ ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

 

ಆದರೆ, ಇದು ನಿಜವೇ ಎಂದು‌ ಪರಿಶೀಲಿಸಿದಾಗ ಸೋಮಭಾಯಿ ಆರೋಗ್ಯ ಇಲಾಖೆಯ ನಿವೃತ್ತ ಇನ್‌ಸ್ಪೆಕ್ಟರ್‌ ಆಗಿದ್ದು, ವಾಡ್‌ನಗರದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೊಬ್ಬ ಅಣ್ಣ ಅಮೃತ್‌ಭಾಯಿ ಮೋದಿ ಕಾರ್ಖಾನೆಯೊಂದರ ನಿವೃತ್ತ ಕಾರ್ಮಿಕನಾಗಿದ್ದು, ಅಹ್ಮದಾಬಾದಿನಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಾರೆ. ಪ್ರಹ್ಲಾದ್‌ ಮೋದಿ ರೇಶನ್‌ ಅಂಗಡಿ ನಡೆಸುತ್ತಿದ್ದಾರೆ. ಪಂಕಜ್‌ ಮೋದಿ ಗುಜರಾತಿನ ಮಾಹಿತಿ ಇಲಾಖೆಯಲ್ಲಿ ನೌಕರ. ಹೀಗಾಗಿ ವೈರಲ್‌ ಆಗಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.

- ವೈರಲ್ ಚೆಕ್