ನವದೆಹಲಿ (ಡಿ. 21): ಖ್ಯಾತ ಉದ್ಯಮಿ ಗೌತಮ್‌ ಅದಾನಿ ಅವರ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ತಲೆಬಾಗಿ ನಮಸ್ಕರಿಸುತ್ತಿದ್ದಾರೆಂದು ಹೇಳಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅದಾನಿ ಪತ್ನಿ ಪ್ರೀತಿ ಅದಾನಿಗೆ ಮೋದಿ ಹೇಗೆ ಶಿರಬಾಗಿ ನಮಸ್ಕರಿಸುತ್ತಿದ್ದಾರೆ ನೋಡಿ ಎಂಬ ಕ್ಯಾಪ್ಷನ್‌ಗಳ ಜೊತೆ ಈ ಫೋಟೋ ಫೇಸ್‌ಬುಕ್‌, ಟ್ವೀಟರ್‌ ಹಾಗೂ ಇನ್ನಿತರ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಮೋದಿ ಸರ್ಕಾರದಿಂದ ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ದೊಡ್ಡ ಉಪಕಾರವಾಗುತ್ತಿದೆ ಎಂದು ವಾಗ್ದಾಳಿ ನಡೆಸುವ ನೆಟ್ಟಿಗರ ಒಂದು ವಲಯ ಈ ಫೋಟೋವನ್ನು ಮುಂದಿಟ್ಟುಕೊಂಡು ನಾನಾ ಕಮೆಂಟ್‌ಗಳನ್ನು ಮಾಡುತ್ತಿದೆ.

Fact Check : ಭಾರತೀಯ ರೈಲ್ವೇ ಅದಾನಿಗೆ ಮಾರಿದ ಮೋದಿ: ಪ್ರಿಯಾಂಕ ಸುಳ್ಳು ಬಯಲು!

ಆದರೆ, ಮೋದಿಯವರು ಅದಾನಿ ಪತ್ನಿಗೆ ಹೀಗೆ ನಮಸ್ಕರಿಸಿದ್ದು ನಿಜವೇ ಎಂದು ಪರಿಶೀಲಿಸಿದಾಗ ಈ ಮಹಿಳೆ ಅದಾನಿ ಪತ್ನಿಯೇ ಅಲ್ಲ, ಬದಲಿಗೆ ಈಕೆ ರಾಷ್ಟ್ರಪತಿ ಭವನದ ನಿವೃತ್ತ ಫೋಟೋಗ್ರಾಫರ್‌ ಸಮೀರ್‌ ಮಂಡಲ್‌ ಅವರ ಪತ್ನಿ ದೀಪಿಕಾ ಮಂಡಲ್‌ ಎಂದು ತಿಳಿದುಬಂದಿದೆ.

ವಾಸ್ತವವಾಗಿ ಈ ಫೋಟೋ ಈಗಿನದೂ ಅಲ್ಲ. ಪ್ರಣಬ್‌ ಮುಖರ್ಜಿ ರಾಷ್ಟ್ರಪತಿಯಾಗಿದ್ದಾಗ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ದೀಪಿಕಾ ಬಂದಿದ್ದರು. ಆಗ ಅವರನ್ನು ಮಾತನಾಡಿಸುವಾಗ ಮೋದಿ ಹೀಗೆ ನಮಸ್ಕರಿಸಿದ್ದರು. ಆಕೆ ಎರಡು ವರ್ಷಗಳ ಹಿಂದೆಯೇ ಈ ಫೋಟೋವನ್ನು ಇಂಟರ್ನೆಟ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಹೀಗಾಗಿ ಅದಾನಿ ಪತ್ನಿ ಹೆಸರಿನಲ್ಲಿ ಹರಿದಾಡುತ್ತಿರುವ ಫೋಟೋ ನಿಜವಲ್ಲ.