ಭಾರತ ಸಂವಿಧಾನ 18 ವರ್ಷ ಮೇಲ್ಪಟ್ಟಅರ್ಹರಿಗೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಿದ್ದರೂ ಯಾವುದೇ ಚುನಾವಣೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಮತ ಚಲಾವಣೆ ಆಗುತ್ತಿಲ್ಲ. ಆದ್ದರಿಂದ 2024ರ ಚುನಾವಣೆಯಲ್ಲಿ ಮತ ಹಾಕದವರಿಗೆ ದಂಡ ವಿಧಿಸಿಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಪತ್ರಿಕೆಯೊಂದರ ವರದಿಯ ತುಣುಕನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಅದರಲ್ಲಿ ಮತ ಚಲಾಯಿಸದ ಪ್ರತಿ ಮತದಾರರ ಬ್ಯಾಂಕ್‌ ಖಾತೆಯಿಂದ 350 ರು. ಕಡಿತಗೊಳಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣಾ ಆಯೋಗ ಮತ ಹಾಕದವರನ್ನು ಪತ್ತೆ ಹಚ್ಚಿ ಆಧಾರ್‌ ಕಾರ್ಡ್‌ ಸಹಾಯದಿಂದ ಅವರ ಖಾತೆಯಲ್ಲಿ ಹಣವನ್ನು ಕಡಿತಗೊಳಿಸಲಿದೆ ಎಂದು ಹೇಳಲಾಗಿದೆ.

 

ಆದರೆ ನಿಜಕ್ಕೂ ಚುನಾವಣಾ ಆಯೋಗ ಇಂಥದ್ದೊಂದು ತೀರ್ಮಾನ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿಯೇ ‘ಚುನಾವಣಾ ಆಯೋಗ ಈವರೆಗೆ ಇಂಥ ನಿರ್ಧಾರ ತೆಗೆದುಕೊಂಡಿಲ್ಲ. ಇದು ಸುಳ್ಳು ಸುದ್ದಿ’ ಎಂದು ಖಚಿತಪಡಿಸಿದೆ.

Fact Check : ಭಾರತದಲ್ಲಿ ಕೊರೊನಾ ಲಸಿಕೆ ಇಲ್ಲಿ ಸಿಗುತ್ತದೆ?

ಅಲ್ಲದೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇಂಥದ್ದೇ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು. ಆಗ ಚುನಾವಣಾ ಅಧಿಕಾರಿಯೊಬ್ಬರು ಇದು ‘ಸುಳ್ಳು ಸುದ್ದಿ, ಮತದಾನ ಪ್ರತಿಯೊಬ್ಬರ ಹಕ್ಕು’ ಎಂದು ಸ್ಪಷ್ಟನೆ ನೀಡಿದ್ದರು.

- ವೈರಲ್ ಚೆಕ್