ಕೊರೋನಾ ವೈರಸ್‌ ನಿಗ್ರಹಕ್ಕೆ ಹಲವು ದೇಶಗಳು ಲಸಿಕೆ ಕಂಡುಹಿಡಿಯಲು ಶತಪ್ರಯತ್ನ ನಡೆಸುತ್ತಿವೆ. ಈ ನಡುವೆ ಭಾರತದಲ್ಲಿ ಕೊರೋನಾ ವೈರಸ್‌ ಲಸಿಕೆ ಬಿಡುಗಡೆಯಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

‘ಕೋವಿಡ್‌-19 ವೈರಸ್ಸಿನಿಂದ ತತ್ತರಿಸಿರುವ ಎಲ್ಲರಿಗೂ ಸಿಹಿ ಸುದ್ದಿ. ಭಾರತದಲ್ಲಿ ಕೊರೋನಾ ಲಸಿಕೆ ಬಿಡುಗಡೆಯಾಗಿದೆ. ಲಸಿಕೆ ಅಗತ್ಯವಿದ್ದವರು ಕೂಡಲೇ ಮೊಬೈಲ್‌ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬಹುದು. ಆ್ಯಪನ್ನು ಡೌನ್‌ಲೋಡ್‌ ಮಾಡಿ ನೋಂದಾಯಿಸಲು ಕೆಳಕಂಡ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ’ ಎಂದು ಹೇಳಲಾಗಿದೆ.

 

ಆದರೆ ನಿಜಕ್ಕೂ ಎಲ್ಲ ದೇಶಗಳಿಗಿಂತ ಮೊದಲು ಭಾರತದಲ್ಲಿ ಲಸಿಕೆ ಲಭ್ಯವಾಯಿತೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಲಸಿಕೆಗಳ 3ನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಭಾರತದಲ್ಲಿಯೂ ಕೋವ್ಯಾಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿಕ್‌-5 ಲಸಿಕೆಗಳ ಕೊನೆಯ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಆದರೆ ಯಾವ ಲಸಿಕೆಯೂ ಬಳಕೆಗೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

Fact Check : ಜೆಎನ್‌ಯುದಲ್ಲಿ ಮುಸ್ಲಿಮರಿಗೆ ಫ್ರೀ ಹಾಸ್ಟೆಲ್?

ಅಷ್ಟೇ ಅಲ್ಲದೆ ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಪಿಐಬಿ ಸಹ ಈ ಸುದ್ದಿ ಸುಳ್ಳೆಂದು ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಈವರೆಗೆ ಯಾವುದೇ ಕೋವಿಡ್‌ ಲಸಿಕೆ ಬಿಡುಗಡೆಯಾಗಿಲ್ಲ. ಹತ್ತಾರು ಸಂಸ್ಥೆಗಳು ಇನ್ನೂ ಲಸಿಕೆಯ ಪ್ರಯೋಗದಲ್ಲಿ ನಿರತವಾಗಿವೆಯೇ ವಿನಃ ಯಾವುದೂ ಬಳಕೆಗೆ ಲಭ್ಯವಿಲ್ಲ ಎಂದು ಹೇಳಿದೆ.

- ವೈರಲ್ ಚೆಕ್