Fact Check : ಹೊಸ ವರ್ಷದಂದು ಮಸೀದಿಗೆ ತೆರಳಿ ನಮಾಜ್ ಮಾಡಿದ್ರಾ ಕೇಜ್ರಿವಾಲ್.?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೀದಿಗೆ ತೆರಳಿ ನಮಾಜ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಇದು..?
ಬೆಂಗಳೂರು (ಜ. 04): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೀದಿಗೆ ತೆರಳಿ ನಮಾಜ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮುಸ್ಲಿಂ ಟೋಪಿ ಧರಿಸಿ ಕೇಜ್ರಿವಾಲ್ ಅವರು ನಮಾಜ್ ಮಾಡುತ್ತಿರುವ ಫೋಟೋವನ್ನು ಬಳಿಸಿಕೊಂಡು, ‘ಜಮಾ ಮಸೀದಿಯಲ್ಲಿ ಜನವರಿ 1, 2021ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಮಾಜ್ ಮಾಡಿ ದೇಶ ಮತ್ತು ದೆಹಲಿಗಾಗಿ ಪ್ರಾರ್ಥನೆ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇದೀಗ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Fact Check : ಕೇರಳದಲ್ಲಿ ಜಿಯೋ ಸೇವೆಯನ್ನು ನಿಷೇಧಿಸಲಾಗಿದೆಯಂತೆ!
ಆದರೆ ವೈರಲ್ ಫೋಟೋ ಇತ್ತೀಚಿನದ್ದೇ ಎಂದು ಪರಿಶೀಲಿಸಿದಾಗ ಹಳೆಯ ಫೋಟೋವನ್ನೇ ಬಳಸಿ ಸದ್ಯ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಜು.4, 2016 ದೆಹಲಿ ಸಿಎಂ ಕೇಜ್ರಿವಾಲ್ ಅವರು ಸಂಗ್ರೂರ್‌ನ ಮಸೀದಿಗೆ ಭೇಟಿ ನೀಡಿ ನಮಾಜ್ ಮಾಡಿದ್ದಾಗಿ ವರದಿಯಾಗಿದೆ. ಅಲ್ಲದೆ ಜು.7, 2016ರಂದು ಆಮ್ ಆದ್ಮಿ ಪಾರ್ಟಿ ಇದೇ ಫೋಟೋವನ್ನು ಟ್ವೀಟ್ ಮಾಡಿ ‘ಈದ್ ಹಬ್ಬದ ಶುಭಾಶಯಗಳು’ ಎಂದು ಹೇಳಿರುವುದು ಲಭ್ಯವಾಗಿದೆ. ಬೇರೆ ಬೇರೆ ಮೂಲಗಳಿಂದ ಪರಿಶೀಲಿಸಿದಾಗಲೂ ವೈರಲ್ ಫೋಟೋ 2016ರದ್ದೇ ಎಂಬುದು ಖಚಿತವಾಗಿದೆ. ಹಾಗಾಗಿ ಹೊಸ ವರ್ಷದಂದು ಕೇಜ್ರಿವಾಲ್ ನಮಾಜ್ ಮಾಡಿದ್ದರು ಎಂದು ಹೇಳಲಾದ ಸುದ್ದಿ ಸುಳ್ಳು.
- ವೈರಲ್ ಚೆಕ್