ಭಾರತದಲ್ಲಿ ಕೊರೋನಾ ವೈರಸ್‌ ವೇಗಗತಿಯಲ್ಲಿ ಹಬ್ಬುತ್ತಿರುವ ಪರಿಣಾಮ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ, ದುಡಿಮೆ ಇಲ್ಲದೆ ದಿನಗೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ವೇಳೆ ದಂಪತಿ ಮತ್ತು ಮಗು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಫೋಟೋವನ್ನು ಪೋಸ್ಟ್‌ ಮಾಡಿ, ದೇಶವ್ಯಾಪಿ ಕೊರೋನಾ ಲಾಕ್‌ಡೌನ್‌ ಪರಿಣಾಮ ತಿನ್ನಲು ಅನ್ನವೂ ಇಲ್ಲದೆ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜೊತೆಗೆ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಈ ಕುಟುಂಬವು ಗುಜರಾತಿನ ಸೂರತ್‌ ತಲುಪಲು ನಡೆದೇ ಸಾಗಿತ್ತು. ಆದರೆ ಅನ್ನ ಆಹಾರ ಲಭ್ಯವಾಗದೆ ನೊಂದು ಆತ್ಮಹತ್ಯೆಗೆ ಶರಣಾಗಿದೆ ಎಂದು ಹೇಳಲಾಗಿದೆ. ಅಲೋಕ್‌ ಎಂಬ ಹೆಸರಿನ ಟ್ವೀಟರ್‌ ಖಾತೆಯಲ್ಲಿ ಈ ಪೋಸ್ಟ್‌ ಮೊದಲಿಗೆ ಕಂಡುಬಂದಿದ್ದು, ಅದೀಗ ವೈರಲ್‌ ಆಗುತ್ತಿದೆ.

Fact Check: ಕೊರೋನಾ ಮಾರಿಗೆ ಚೀನಾದಲ್ಲಿ ಬಲಿಯಾದವರ ಅಸಲಿ ಲೆಕ್ಕ , ಸಾವಿರದಲ್ಲಿಲ್ಲ!

ಆದರೆ ಲಾಕ್‌ಡೌನ್‌ ಸಮಯದಲ್ಲಿ ಈ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದು ನಿಜವೇ ಎಂದು ಪರಿಶೀಲಿಸಿದಾಗ ಹಳೆಯ ಫೋಟೋವನ್ನು ಈಗ ಪೋಸ್ಟ್‌ ಮಾಡಿ ಕೊರೋನಾ ಲಾಕ್‌ಡೌನ್‌ಗೆ ಸಂಬಂಧ ಕಲ್ಪಿಸಲಾಗಿದೆ ಎನ್ನುವ ವಾಸ್ತವ ತಿಳಿದುಬಂದಿದೆ.

2018 ರಲ್ಲಿ ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ರೈತರೊಬ್ಬರು ಸಾಲ ಮರುಪಾವತಿಸಲು ಸಾಧ್ಯವಾಗದೆ ಹೆಂಡತಿ ಮಗು ಸಮೇತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಅದೇ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್