ನವದೆಹಲಿ (ನ. 28): ಕೊರೋನಾ ವೈರಸ್‌ ಹಾವಳಿಯಿಂದ ದೇಶದಲ್ಲಿ ಜನರು ತೀವ್ರ ಹಣಕಾಸು ಬಿಕ್ಕಟ್ಟು ಅನುಭವಿಸುತ್ತಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ದೇಶವಾಸಿಗಳಿಗಾಗಿ ಕೇಂದ್ರ ಸರ್ಕಾರ ನೆರವು ಘೋಷಿಸಿದೆ. 18 ವರ್ಷ ಮೇಲ್ಪಟ್ಟದೇಶದ ಪ್ರತಿಯೊಬ್ಬ ಪ್ರಜೆಗೂ 1.30 ಲಕ್ಷ ರು. ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಈ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಎಂದು ಲಿಂಕ್‌ವೊಂದನ್ನು ಲಗತ್ತಿಸಲಾಗಿದೆ. ಇದೀಗ ವಾಟ್ಸ್‌ಆ್ಯಪ್‌ ಸೇರಿದಂತೆ ಎಲ್ಲಾ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಇಂಥದ್ದೊಂದು ನೆರವನ್ನು ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿಯೇ ಈ ಬಗ್ಗೆ ಸ್ಪಷ್ಟನೆ ನೀಡಿ, ಕೇಂದ್ರ ಸರ್ಕಾರ ಇಂಥ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ, ಇದು ನಕಲಿ ಸುದ್ದಿ.

Fact Check : 2024 ರ ಚುನಾವಣೆಯಲ್ಲಿ ಮತ ಹಾಕದಿದ್ರೆ 350 ರೂ ದಂಡ?

ಇಲ್ಲಿ ನೀಡಲಾಗಿರುವ ವೆಬ್‌ಸೈಟ್‌ ವಿಳಾಸವೂ ನಕಲಿ ಎಂದು ಹೇಳಿದೆ. ಈ ಹಿಂದೆಯೂ ಸಹ ಕೇಂದ್ರ ಸರ್ಕಾರ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಫೋನ್‌ ನೀಡುತ್ತಿದೆ, ಉಚಿತ ಇಂಟರ್‌ನೆಟ್‌ ಒದಗಿಸಲು ಆದೇಶಿಸಿದೆ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೂ ಸಹ ಅಂಥದ್ದೇ ಸುಳ್ಳು ಸುದ್ದಿ.

- ವೈರಲ್ ಚೆಕ್