ಅಮಿತಾಭ್‌ ಬಚ್ಚನ್‌ ಭೂಗತ ಪಾತಕಿ ದಾವುದ್‌ ಇಬ್ರಾಹಿಂ ಜೊತೆಗಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೋಟು ಧರಿಸಿರುವ ವ್ಯಕ್ತಿಯನ್ನು ಅಮಿತಾಭ್‌ ಆತ್ಮೀಯತೆಯಿಂದ ಮಾತನಾಡಿಸುತ್ತಿರುವಂತೆ ಕಾಣುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಅಮಿತಾಭ್‌ ಪತ್ನಿ, ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್‌ ‘ಕೆಲವರು ಬಾಲಿವುಡ್‌ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಕೈ ತುತ್ತು ತಿಂದ ಕೈಯನ್ನೇ ಕಚ್ಚುತ್ತಿದ್ದಾರೆ’ ಎಂದು ಕಂಗನಾ ರಾಣಾವತ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಕೆಲವರು ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಮಿ.ಅಮಿತಾಭ್‌ ಅವರ ಜೊತೆಗೆ ಇರುವ ವ್ಯಕ್ತಿ ಯಾರು?, ಈತ ದಾವುದ್‌ ಇಬ್ರಾಹಿಂ ಅಲ್ಲ ಎನ್ನುವವರು ಗೂಗಲ್‌ನಲ್ಲಿ ಮತ್ತೊಮ್ಮೆ ಪರಿಶೀಲಿಸಲಿ’ ಎಂದು ಬರೆದುಕೊಂಡಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

Fact Check: ಗುಡ್‌ ನ್ಯೂಸ್! ಅ. 1 ರಿಂದ ಸಿನಿಮಾ ಥಿಯೇಟರ್‌ಗಳು ಓಪನ್?

ಆದರೆ ನಿಜಕ್ಕೂ ಅಮಿತಾಭ್‌ ಬಚ್ಚನ್‌ ಅವರು ಅಷ್ಟೊಂದು ಆತ್ಮೀಯವಾಗಿ ಮಾತನಾಡಿಸುತ್ತಿರುವುದು ದಾವುದ್‌ ಇಬ್ರಾಹಿಂ ಅನ್ನೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ 2010ರಲ್ಲಿ ಸುದ್ದಿಸಂಸ್ಥೆಯೊಂದು ಇದೇ ಫೋಟೋವನ್ನು ಬಳಸಿ ವರದಿ ಮಾಡಿರುವುದು ಕಂಡುಬಂದಿದೆ. ಅದರಲ್ಲಿ ಅಮಿತಾಭ್‌ ಜೊತೆ ನಿಂತಿರುವುದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅಶೋಕ್‌ ಚೌಹಾಣ್‌ ಎಂದಿದೆ. ಹಲವು ಸುದ್ದಿಸಂಸ್ಥೆಗಳ ವರದಿಯಲ್ಲಿ ಈ ಫೋಟೋ ಪತ್ತೆಯಾಗಿದೆ. ಹಾಗಾಗಿ ಪಾತಕಿ ಇಬ್ರಾಹಿಂಗೂ ಅಮಿತಾಭ್‌ಗೂ ನಂಟಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು.

- ವೈರಲ್ ಚೆಕ್