ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮಮಂದಿರಕ್ಕೆ ಬಳಕೆ ಆಗುವ ಬೃಹತ್‌ ಗಂಟೆ ಈಗಾಗಲೇ ಸಿದ್ಧವಾಗಿದೆಯೇ? ರಾಮಮಂದಿರಕ್ಕಾಗಿ ಸಿದ್ಧಪಡಿಸಿಲಾಗಿದ್ದು ಎಂದು ಹೇಳಲಾದ ಗಂಟೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಷ್ಟಧಾತುವಿನಿಂದ ಮಾಡಿರುವ ಈ ಗಂಟೆ 6 ಅಡಿ ಎತ್ತರ ಮತ್ತು 5 ಅಡಿ ಅಗಲವಿದ್ದು, 1200 ಕೆ.ಜಿ.ಯಷ್ಟುತೂಕವಿದೆ. ಈ ಗಂಟೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ತಯಾರಿಸಲಾಗಿದೆ. ಇದನ್ನು ಬಾರಿಸಿದರೆ 15 ಕಿ.ಮೀ. ದೂರದವರೆಗೂ ಕೇಳುತ್ತದೆ. ಅಯೋಧ್ಯೆಯ ರಾಮಮಂದಿರದ ಸಭಾಂಗಣದಲ್ಲಿ ಈ ಗಂಟೆ ಇರಿಸಲಾಗುತ್ತದೆ ಎಂದು ವೈರಲ್‌ ಆಗಿರುವ ಸಂದೇಶದಲ್ಲಿ ತಿಳಿಸಲಾಗಿದೆ. ಹಿಂದುಸ್ತಾನಿ ಲಡ್ಕಾ ಎಂಬ ಹೆಸರಿನ ಟ್ವೀಟರ್‌ ಖಾತೆಯ ಮೂಲಕ ಈ ಸಂದೇಶ ಹರಿಬಿಡಿಸಲಾಗಿದೆ. 30 ಸೆಕೆಂಡ್‌ನ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗಂಟೆಯ ಶಬ್ದವನ್ನು ತಪಾಸಣೆ ಮಾಡುತ್ತಿರುವುದನ್ನು ಕಾಣಬಹುದು.

Fact Check: ಭೂಗತ ಪಾತಕಿ ದಾವೂದ್ ಜತೆ ಅಮಿತಾಬ್ ಕಾಣಿಸಿಕೊಂಡಿದ್ದು ನಿಜನಾ?

ಆದರೆ, ವಾಸ್ತವ ಸಂಗತಿಯೇನೆಂದರೆ ಉತ್ತರ ಪ್ರದೇಶದ ಶಿಲ್ಪಿ ಇಕ್ಬಾಲ್‌ ಮಿಸ್ತಿ್ರ ಎನ್ನುವವರು ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಬೃಹತ್‌ ಗಂಟೆಯೊಂದನ್ನು ನಿರ್ಮಿಸಿಕೊಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದರ ಚಿತ್ರಗಳು ಅಧಿಕೃತವಾಗಿ ಬಿಡುಗಡೆ ಆಗಿಲ್ಲ. ವೈರಲ್‌ ಆಗಿರುವ ಗಂಟೆಯನ್ನು ತಮಿಳುನಾಡಿನಲ್ಲಿ ಸಿದ್ಧಪಡಿಸಲಾಗಿದ್ದು, 600 ಕೆ.ಜಿ. ತೂಕ ಇದೆ. ಅದರ ಮೇಲೆ ತಮಿಳು ಅಕ್ಷರಗಳಿವೆ. ಹೀಗಾಗಿ ಅಯೋಧ್ಯೆಯಲ್ಲಿ ಬಳಕೆ ಆಗಲಿರುವ ಪ್ರಧಾನ ಗಂಟೆ ಇದಲ್ಲ.