Fact Check: ಹೊಸ ರಫೇಲ್ ವಿಮಾನ ಪತನ, ಇಬ್ಬರು ಪೈಲಟ್ ಸಾವು?
ತರಬೇತಿ ವೇಳೆ ತಾಂತ್ರಿಕ ದೋಷದಿಂದ ರಫೇಲ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪೈಲಟ್‌ಗಳಿಬ್ಬರೂ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ಬೆಂಗಳೂರು (ಸೆ. 14): ಮೊನ್ನೆಯಷ್ಟೇ ಅಂಬಾಲಾ ವಾಯುನೆಲೆಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 5 ರಫೇಲ್ ಅತ್ಯಾಧುನಿಕ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ. ಇದರ ಬೆನ್ನಲ್ಲೇ ಈ ಯುದ್ಧವಿಮಾನಗಳಲ್ಲಿ ಒಂದು ತರಬೇತಿ ವೇಳೆ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಪೈಲಟ್‌ಗಳಿಬ್ಬರೂ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Fact Check : ಟಿಪ್ಪು ಜೀವನಾಧಾರಿತ ಸಿನಿಮಾಕ್ಕೆ ಶಾರೂಕ್ ಹೀರೋ ಆಗ್ತಿದ್ದಾರಾ?
ಟ್ವೀಟರ್, ಫೇಸ್‌ಬುಕ್ ಬಳಕೆದಾರರು ಭಾರತೀಯ ವಾಯುಪಡೆಯೇ ಈ ಸುದ್ದಿಯನ್ನು ದೃಢಪಡಿಸಿದೆ ಎಂದು ಐಎಎಫ್ ಟ್ವೀಟ್‌ನ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿ, ವಿಮಾನ ಅಪಘಾತಕ್ಕೀಡಾದ ಫೋಟೋಗಳನ್ನು ಬಳಸಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಇದೀಗ ಬಾರೀ ವೈರಲ್ ಆಗಿದೆ.
ಆದರೆ ರಫೇಲ್ ಯುದ್ಧವಿಮಾನ ದುರಂತಕ್ಕೀಡಾಗಿದ್ದು ನಿಜವೇ ಎಂದು ಪರಿಶೀಲಿಸಿದಾಗ ಐಎಎಫ್‌ನ ಹಳೆಯ ಟ್ವೀಟನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಸುಳ್ಳುಸುದ್ದಿ ಹರಡಲಾಗಿದೆ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ 2019 ರಲ್ಲಿ ಬೆಂಗಳೂರಿನಲ್ಲಿ ಮಿರಾಜ್ 2000 ವಿಮಾನ ಅಪಘಾತಕ್ಕೀಡಾದ ಸಂದರ್ಭದ ಫೋಟೋಗಳನ್ನು ಬಳಸಿ ಈ ಸುಳ್ಳುಸುದ್ದಿ ಬಿತ್ತರಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಅಲ್ಲದೆ ಐಎಎಫ್ ತನ್ನ ಅಧಿಕೃತ ಟ್ವೀಟ್ ಖಾತೆಯಿಂದ ಇಂಥ ಯಾವುದೇ ಸುದ್ದಿ ಪ್ರಕಟಿಸಿಲ್ಲ. ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆಯಾಗಿರುವ ಪಿಐಬಿ ಕೂಡ ‘ಇದು ಸುಳ್ಳುಸುದ್ದಿ, ರಫೇಲ್ ಬಗ್ಗೆ ತಪ್ಪು ಅಭಿಪ್ರಾಯ ಬಿತ್ತಲು ಮತ್ತು ಕಳವಳ ಸೃಷ್ಟಿಸಲು ಈ ರೀತಿಯ ಸುಳ್ಳುಸುದ್ದಿ ಹರಡಲಾಗುತ್ತಿದೆ’ ಎಂದು ಸ್ಪಷ್ಟೀಕರಣ ನೀಡಿದೆ.
- ವೈರಲ್ ಚೆಕ್