ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಎಲ್ಲಾ ಪಕ್ಷಗಳು ಭರದಿಂದ ಪ್ರಚಾರ ಕಾರ‍್ಯದಲ್ಲಿ ತೊಡಗಿಸಿಕೊಂಡಿವೆ. ಶುಕ್ರವಾರದಿಂದ ಪ್ರಧಾನಿ ನರೇಂದ್ರ ಮೋದಿಯೂ ಅಖಾಡಕ್ಕಿಳಿದು ಎನ್‌ಡಿಎ ಪರ ಪ್ರಚಾರ ಮಾಡಿದ್ದಾರೆ. ಈ ನಡುವೆ ಬಿಹಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ‘ಗೋ ಬ್ಯಾಕ್‌ ಮೋದಿ’ ಎಂಬ ಘೋಷಣೆಗಳು ಮೊಳಗಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ರಸ್ತೆ ಮೇಲೆ ಗೋ ಬ್ಯಾಕ್‌ ಮೋದಿ ಎಂದು ಬರೆದ ಫೋಟೋಗಳನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

Fact Check : ತೆಲುಗು ಅಮೆರಿಕಾದ ಅಧಿಕೃತ ಭಾಷೆ!

ಆದರೆ ನಿಜಕ್ಕೂ ಪ್ರಧಾನಿ ಆಗಮನದ ವಿರುದ್ಧ ಬಿಹಾರದಲ್ಲಿ ಈ ರೀತಿ ಘೋಷಣೆಗಳು ಮೊಳಗಿದ್ದವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಬಿಹಾರದಲ್ಲಿ ಈಗ ಇಂಥ ಸನ್ನಿವೇಶಗಳು ನಡೆದೇ ಇಲ್ಲ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಪ್ರಸಕ್ತ ವರ್ಷ ಜನವರಿಯಲ್ಲೂ ಇದೇ ರೀತಿಯ ಫೋಟೋ ಜಾಲತಾಣಗಳಲ್ಲಿ ಹರಿದಾಡಿದ್ದು ಪತ್ತೆಯಾಗಿದೆ.

 

ಅವುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ನಡೆದ ಪ್ರತಿಭಟನೆ ಎಂಬ ವಿವರ ಇದೆ. ಅಲ್ಲದೆ ಇದೇ ಫೋಟೋವನ್ನು ಪೋಸ್ಟ್‌ ಮಾಡಿ, ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿರುವುದು ಕಂಡುಬಂದಿದೆ. ಜೊತೆಗೆ ಈ ಬಗ್ಗೆ ಸುದ್ದಿ ಮಾಧ್ಯಮಗಳ ವರದಿಗಳು ಲಭ್ಯವಾಗಿದ್ದು, ಕಳೆದ ಜನವರಿ 11ರಂದು ಕೋಲ್ಕತ್ತಕ್ಕೆ ಪ್ರಧಾನಿ ಭೇಟಿಗೂ ಮುನ್ನ ಪ್ರಮುಖ ರಸ್ತೆಯಲ್ಲಿ ಕಂಡುಬಂದ ದೃಶ್ಯ ಎಂಬ ವಿವರ ಇದೆ. ಹಾಗಾಗಿ ವೈರಲ್‌ ಚಿತ್ರ ಬಿಹಾರದ್ದಲ್ಲ, ಪಶ್ಚಿಮ ಬಂಗಾಳದ್ದು ಎಂಬುದು ಸ್ಪಷ್ಟ.

- ವೈರಲ್ ಚೆಕ್