ಕೆಂಡಪ್ರದಿ

ಸರ್‌ ನಿಮ್ಮ ಹಿನ್ನೆಲೆ?

ನನ್ನೂರು ಕೊಪ್ಪಳ ಜಿಲ್ಲೆಯ, ಗಂಗಾವತಿ ಸಮೀಪದ ತಿಮ್ಮಾಪುರ. ಅಪ್ಪಟ ರೈತ ಕುಟುಂಬ. ಚಿಕ್ಕಂದಿನಲ್ಲಿಯೇ ನಾಟಕದ ಬಗ್ಗೆ ಆಸಕ್ತಿ ಬೆಳೆಯಿತು. ಇದಕ್ಕೆ ಕಾರಣ ನಮ್ಮ ಮಾವಂದಿರು, ಕುಟುಂಬಸ್ಥರು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರೇ ಆಗಿದ್ದರು. ಇದೆಲ್ಲವನ್ನೂ ನೋಡುತ್ತಾ ಬೆಳೆದ ನಾನು ನಿಧಾನಕ್ಕೆ ನಾಟಕ, ಸಾಹಿತ್ಯದ ಕಡೆ ಮುಖ ಮಾಡಿದ್ದೆ.

13ನೇ ವರ್ಷದ ಆ್ಯನಿವರ್ಸರಿ ಆಚರಿಸಿದ ಝೀ ಕನ್ನಡ!

ಡ್ರಾಮಾ ಜ್ಯೂನಿಯ​ರ್ಸ್ ಶುರುವಾಗಿದ್ದು ಹೇಗೆ?

ನಾನೂ ಮತ್ತು ರಾಘವೇಂದ್ರ ಹುಣಸೂರು ಸುಮಾರು ಹತ್ತು ವರ್ಷದ ಸ್ನೇಹಿತರು. ಝಿ ಕನ್ನಡದಲ್ಲಿ ಮಕ್ಕಳಿಗಾಗಿ ಏನಾದರೂ ಕಾರ್ಯಕ್ರಮ ಮಾಡಬೇಕು ಎಂದುಕೊಂಡಾಗ ಹುಟ್ಟಿದ್ದೇ ಈ ಕಾನ್ಸೆಪ್ಟ್‌. ಇದು ಆ ವೇಳೆಗಾಗಲೇ ಹಿಂದಿ ಸೇರಿದಂತೆ ವಿವಿಧ ಭಾಷೆಯಲ್ಲಿ ಬರುತ್ತಿದ್ದರೂ ಅಲ್ಲಿ ನಿರೀಕ್ಷಿತ ಮಟ್ಟದ ಯಶ ಕಂಡಿರಲಿಲ್ಲ. ಆದರೂ ನಾವು ಧೈರ್ಯ ಮಾಡಿ ಕಾರ್ಯಕ್ರಮ ಮಾಡಲು ಮುಂದಾದೆವು. ಈ ಹಿಂದೆ ಮಕ್ಕಳಿಗಾಗಿ ಹಾಡು, ಡ್ಯಾನ್ಸ್‌ಗಾಗಿ ಕಾರ್ಯಕ್ರಮಗಳು ಇದ್ದವು. ಹಾಗಾಗಿ ನಾವು ಭಿನ್ನವಾಗಿ ಇರಲಿ ಎಂದು ಈ ಕಾನ್ಸೆಪ್ಟ್‌ ಶುರು ಮಾಡಿದೆವು.

ಮಕ್ಕಳನ್ನೆಲ್ಲಾ ಹೇಗೆ ಕಲೆ ಹಾಕಿದಿರಿ?

ನಾವು ಈ ರೀತಿಯ ಕಾರ್ಯಕ್ರಮ ಮಾಡಬೇಕು ಎಂದುಕೊಂಡ ನಂತರ ಹುಟ್ಟಿಕೊಂಡ ಪ್ರಶ್ನೆಯೇ ಮಕ್ಕಳು ನಮ್ಮ ಅಭಿರುಚಿಗೆ ತಕ್ಕಂತೆ ಸಿಕ್ಕುತ್ತಾರಾ ಎನ್ನುವುದು. ಆಡಿಷನ್‌ಗೆ ಹೋದಾಗ ಒಂದೊಂದು ಕಡೆ ಹುಡುಗರೇ ಸಿಕ್ಕುತ್ತಿರಲಿಲ್ಲ. ಅಲ್ಲದೇ ಮಕ್ಕಳಿಗೆ ಇದೆಲ್ಲಾ ಹೊಸದಾಗಿದ್ದರಿಂದ ನಾವು ಅಂದುಕೊಂಡ ಹಾಗೆ ಮಕ್ಕಳನ್ನು ಹುಡುಕುವುದು ಸವಾಲಾಗಿತ್ತು. ಇಡೀ ಕರ್ನಾಟಕ ಸುತ್ತಾಡಿ 16 ಮಕ್ಕಳನ್ನು ಒಟ್ಟು ಸೇರಿಸಿದೆವು.

ಮಕ್ಕಳನ್ನು ತರಬೇತು ಮಾಡುವ ಸವಾಲಿನ ಹಾದಿ ಹೇಗಿತ್ತು?

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

ನನ್ನ ಪ್ರವೃತ್ತಿ ರಂಗಭೂಮಿ. ನನ್ನ ವೃತ್ತಿಯೂ ಇದೇ ಆಗಿದ್ದರಿಂದ ಎರಡು ಸೇರಿ ಮಕ್ಕಳನ್ನು ತಯಾರು ಮಾಡುವಲ್ಲಿ ಸಹಾಯ ಮಾಡಿದವು. ನನ್ನ ರಂಗಭೂಮಿ ಅನುಭವ, ಬಾಲ್ಯದ ಅನುಭವಗಳು ಈ ವೇಳೆ ನನ್ನ ನೆರವಿಗೆ ಬಂದವು. ಮೊದಲು ಮಕ್ಕಳನ್ನು ತಯಾರು ಮಾಡಲು ರಂಗಭೂಮಿ ಹಿನ್ನೆಲೆಯ ಮೆಂಟರ್‌ಗಳನ್ನು ನೇಮಕ ಮಾಡಲಾಯಿತು. ಆ ಮೆಂಟರ್‌ಗಳಿಗೆ ನಾವು ತರಬೇತಿ ನೀಡಿ ಮಕ್ಕಳನ್ನು ತಯಾರು ಮಾಡುವಲ್ಲಿ ಬಳಸಿಕೊಳ್ಳಲಾಯಿತು.

ಡ್ರಾಮಾ ಜ್ಯೂನಿಯರ್‌ನ ವಿಶೇಷತೆ ಏನು?

ಇದು ಒಂದು ರೀತಿಯಲ್ಲಿ ರಂಗಭೂಮಿಯೇ. ಆದರೂ ಇಲ್ಲಿ ಸಾಧ್ಯವಾದಷ್ಟುಹೊಸತವನ್ನು ಬಳಕೆ ಮಾಡಿಕೊಂಡೆವು. ಮಕ್ಕಳ ಪ್ರಾದೇಶಿಕ ಭಾಷೆ, ಅವರ ಗುಣ ಸ್ವಾಭಾವಗಳಿಗೆ ತಕ್ಕಂತೆ ಅವರಿಗೆ ಪಾತ್ರ ನೀಡುತ್ತಾ ಹೋದೆವು. ಇದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಆಟದ ಮೂಲಕವೇ ಎಲ್ಲವನ್ನೂ ಹೇಳುತ್ತಾ ಹೋದೆವು. ಇದು ನಮಗೆ ಮಕ್ಕಳನ್ನು ಬೇಗನೇ ಸಿದ್ಧ ಮಾಡಲು ಸಹಾಯವಾಯಿತು. ಈ ವೇಳೆ ನನಗೆ ನಿಜವಾಗಿಯೂ ಅನುಭವಕ್ಕೆ ಬಂದಿದ್ದು ಏನೆಂದರೆ, ಮಕ್ಕಳು ನಾವು ಹೇಳಿಕೊಟ್ಟಿದ್ದನ್ನು ಬೇಗನೇ ಗ್ರಹಿಸಿ, ಅದನ್ನು ಮಾಡಿ ತೋರಿಸುತ್ತವೆ.

ಇದರಿಂದ ಮಕ್ಕಳ ಓದಿಗೆ ಏನೂ ತೊಂದರೆ ಆಗಲಿಲ್ಲವೇ?

ಖಂಡಿತಾ ಇಲ್ಲ. ನಮ್ಮಲ್ಲಿ ಭಾಗವಹಿಸಿದ್ದ ಮಕ್ಕಳು ಶಾಲೆಯಲ್ಲಿಯೂ ಒಳ್ಳೆಯ ಮಾರ್ಕ್ಸ್‌ ತೆಗೆದಿದ್ದಾರೆ. ನಾವು ನಾಟಕದ ವೇಳೆ ಪಠ್ಯ, ಸಾಹಿತ್ಯ, ಜಾನಪದ, ಪೌರಾಣಿಕ, ಐತಿಹಾಸಿಕ ವಿಚಾರಗಳಿಗೆ ಮಹತ್ವ ನೀಡಿ ಅವುಗಳನ್ನೂ ಕಲಿಸಿದ್ದೆವು. ಇದು ಅವರಿಗೆ ಸಹಾಯವೇ ಆಗಿದೆ. ಹಾಗೆ ನೋಡಿದರೆ ಇದೂ ಕೂಡ ಅವರ ಕಲಿಕೆಯ ಮತ್ತೊಂದು ಭಾಗವೇ ಅಲ್ಲವೇ.

ಶೋ ನಲ್ಲಿ ಭಾಗವಹಿಸಿದ್ದ ಮಕ್ಕಳು ಈಗ ಏನೆಲ್ಲಾ ಮಾಡುತ್ತಿದ್ದಾರೆ?

ತುಂಬಾ ಮಕ್ಕಳು ಓದು, ರಂಗಭೂಮಿ, ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತುಷಾರ್‌ ಎನ್ನುವ ಹುಡುಗ ತನ್ನ ಊರಿನಲ್ಲಿಯೇ ಥಿಯೇಟರ್‌ ಓಪನ್‌ ಮಾಡಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸಿನಿಮಾದಲ್ಲಿಯೂ ಸಕ್ರಿಯವಾಗಿದ್ದಾನೆ.

ಅಖಿಲಾಂಡೇಶ್ವರಿ ಹತ್ಯೆಗೆ ಸಂಚು ರೂಪಿಸಲಾಯ್ತಾ?

ಇದರಿಂದ ಮಕ್ಕಳಿಗೆ ಆದ ಅನುಕೂಲವೇನು?

ಇಂದು ಮಕ್ಕಳು ಮೈದಾನಕ್ಕೆ ಹೋಗಿ ತಮ್ಮ ಮೈ ದಾನ ಮಾಡುತ್ತಿಲ್ಲ. ಇದರಿಂದ ಅವರ ಸರ್ವಾಂಗೀಣ ಬೆಳವಣಿಗೆ ಆಗುತ್ತಲೇ ಇಲ್ಲ. ಮೊಬೈಲ್‌, ಕಂಪ್ಯೂಟರ್‌ ಮುಂದೆ ಕುಳಿತು ಅವರ ಬೆರಳುಗಳು ಮಾತ್ರ ವ್ಯಾಯಾಮ ಮಾಡುತ್ತಿವೆ. ಇದು ಹೋಗಬೇಕು ಎಂದರೆ ರಂಗಭೂಮಿಯಂತ ಚಟುವಟಿಕೆಯುಕ್ತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇದು ಮಕ್ಕಳ ಪಾಲಿಗೆ ತುಂಬಾ ಸಹಾಯಕ. ಇದೇ ಕಾರ್ಯವನ್ನು ನಮ್ಮ ಶೋ ಮಾಡಿತ್ತು. ಅದೂ ಅಲ್ಲದೇ ಇದರಿಂದ ಮಕ್ಕಳ ಕನ್ನಡ ಶುದ್ಧವಾಯಿತು. ಎಷ್ಟೋ ಮಕ್ಕಳಿಗೆ ಕನ್ನಡ ಓದಲು ಬರುತ್ತಿರಲಿಲ್ಲ. ಈಗ ಚೆನ್ನಾಗಿ ಓದುತ್ತಾರೆ. ಎಲ್ಲಿ ಹೇಗೆ ಮಾತನಾಡಬೇಕು, ದನಿಯ ಏರಿಳಿತ, ಅವು ಹೊರಡಿಸುವ ಅರ್ಥ ಮೊದಲಾದವೆಲ್ಲಾ ಅವರಿಗೆ ಗೊತ್ತಾಗಿದೆ.

ಮೂರು ಸೀಸನ್‌ ಯಶ ಕಂಡಿವೆ, ನಾಲ್ಕನೆಯದ್ದು ಯಾವಾಗ?

ತಯಾರಿ ನಡೆಯುತ್ತಿದೆ. ಶೀಘ್ರದಲ್ಲಿಯೇ ರಾಜ್ಯಾದ್ಯಂತ ಆಡಿಷನ್‌ಗೆ ಹೊರಡುತ್ತೇವೆ. ನಮ್ಮ ಉದ್ದೇಶ ಹಳ್ಳಿಗಾಡಿನ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ನೈಜ ಪ್ರತಿಭೆಯನ್ನು ಹೊರತರುವುದೇ ಆಗಿದೆ.