ವಿಭಿನ್ನ ಧಾರಾವಾಹಿಗಳು, ಸೂಪರ್‌ ಹಿಟ್‌ ರಿಯಾಲಿಟಿ ಶೋಗಳಿಂದ ಝೀ ಕನ್ನಡ ಇದೀಗ ನಂಬರ್‌ ವನ್‌ ಸ್ಥಾನವನ್ನು ಅಲಂಕರಿಸಿದೆ. ಇದೇ ಮೊದಲ ಬಾರಿಗೆ ನಂಬರ್‌ ವನ್‌ ಸ್ಥಾನಕ್ಕೆ ಬಂದಿರುವುದರಿಂದ ವಾಹಿನಿಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹೊತ್ತಿನಲ್ಲಿ ವಾಹಿನಿಗೆ 13 ತುಂಬಿದ್ದು, ಆ ಸಂಭ್ರಮ ದುಪ್ಪಟ್ಟಾಗಿದೆ. ಈ ಖುಷಿ ಹಂಚಿಕೊಳ್ಳಲು ಝೀ ವಾಹಿನಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರಮೇಶ್‌ ಅರವಿಂದ್‌, ವಿಜಯ್‌ ರಾಘವೇಂದ್ರ, ಹಂಸಲೇಖ, ಅರ್ಜುನ್‌ ಜನ್ಯಾ, ಜಗ್ಗೇಶ್‌, ಮುಖ್ಯಮಂತ್ರಿ ಚಂದ್ರು ಮುಂತಾದವರು ಹಾಜರಿದ್ದರು. ಅಲ್ಲದೇ ಇಡೀ ಝೀ ವಾಹಿನಿ ತಂಡ ಸಂಭ್ರಮದಲ್ಲಿ ಭಾಗಿಯಾಗಿತ್ತು.

ಝೀ ಕನ್ನಡ ವಾಹಿನಿ ಹದಿಮೂರು ವರ್ಷಗಳಿಂದ ನಿರಂತರವಾಗಿ ಕನ್ನಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ವಿಭಿನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳ ಮೂಲಕ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಾ ಬಂದಿದೆ. ಎರಡು ವರ್ಷಗಳ ಹಿಂದೆ ಜೀ ವಾಹಿನಿ ಕನ್ನಡದ ನಂಬರ್‌ ವನ್‌ ಮನರಂಜನಾ ಚಾನಲ್‌ ಆಗಬೇಕೆಂಬ ಸಂಕಲ್ಪ ಮಾಡಿದ್ದು, ಅದು ಈಗ ಈಡೇರಿದೆ. ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. - ರಾಘವೇಂದ್ರ ಹುಣಸೂರು , ಝೀ ಕನ್ನಡ ವಾಹಿನಿ ಮುಖ್ಯಸ್ಥ

ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಚಂದ್ರು, ‘ನಾನು ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದು ಕಡಿಮೆ. ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮಕ್ಕೆ ನಾನು ನಿರ್ಣಾಯಕನಾಗಿದ್ದು ಈ ಒಂದು ಶೋ ನನ್ನ ಎಲ್ಲಾ ಸಿನಿಮಾಗಳ ಜನಪ್ರೀಯತೆ ಮರೆಸುವಂತೆ ಜನಪ್ರೀಯತೆ ತಂದು ಕೊಟ್ಟಿದೆ’ ಎಂದರು.