'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!
ಸರಿಗಮಪ 16 ವೇದಿಕೆಯಲ್ಲಿ ಮುದ್ದು ಮುದ್ದು ತುಂಟಾಟಗಳಿಂದ, ಹಾಡಿನಿಂದ ಗಮನ ಸೆಳೆದ ಪುಟಾಣಿ ಮೂಡುವಡೆ ವರ್ಷದ ಜ್ಞಾನ. ಮೈಕ್ ಹಿಡಿದು ವೇದಿಕೆಯಲ್ಲಿ ನಿಂತರೆ ಸಾಕು ಭಯ ಎನ್ನುವುದು ಈ ಪುಟಾಣಿ ಹತ್ತಿರವೇ ಸುಳಿಯುವುದಿಲ್ಲ. ಕಷ್ಟದ ಹಾಡುಗಳನ್ನು ಲೀಲಾಜಾಲವಾಗಿ ಹಾಡುವ ಪ್ರತಿಭಾನ್ವಿತೆ. ಯಾರು ಈ ಮೂಡುವಡೆ ವರ್ಷದ ಜ್ಞಾನ? ಈಕೆಗೆ ಎಲ್ಲಿಂದ ಬಂತು ಈ ಪರಿಯ ಜ್ಞಾನ? ಇಲ್ಲಿದೆ ಆಕೆಯ ಕಿರುಪರಿಚಯ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮುತ್ತುಗಳ ಊರು ಎಂದೇ ಸುಪ್ರಸಿದ್ಧ, ಝೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಮಿಂಚುತ್ತಿರುವ ಪುಟಾಣಿ ಕಿನ್ನರಿ ಜ್ಞಾನ ಕೂಡ ಮೂಲತಃ ಪುತ್ತೂರಿನವರೇ. ಚಿಕ್ಕಂದಿನಿಂದಲು ಬೆಳೆದಿದ್ದು ಬೆಂಗಳೂರಿನಲ್ಲಿಯೇ ಆದರೂ ಜ್ಞಾನ ತನ್ನನ್ನು ಪರಿಚುಸಿಕೊಳ್ಳುವುದು ಪುತ್ತೂರಿನ ಹುಡುಗಿಯೆಂದು!
ತೆರೆಮರೆಯ ಗಾಯನ ಪ್ರತಿಭೆಗಳನ್ನು ಕನ್ನಡ ಜನತೆಗೆ ಪರಿಚಯ ಮಾಡಿಕೊಡುತ್ತಿರುವ ರಿಯಾಲಿಟಿ ಶೋ ಸರಿಗಮಪದ 16ನೇ ಸೀಸನ್‌ನ ವಿಶೇಷ ಸ್ಪರ್ಧಿ ಜ್ಞಾನ. ಮೂರುವರೆ ವರ್ಷದ ಈ ಪುಟ್ಟ ಗಾಯಕಿ, ತನ್ನ ಕಂಠ ಸಿರಿಯಿಂದ ಕನ್ನಡದ ಮನೆಮಗಳಾಗಿ ಗುರುತಿಸಿಕೊಂಡಿದ್ದಾಳೆ.
'ಮಿಥುನ ರಾಶಿ'ಯ ಯಂಗ್ ಮಮ್ಮಿ ಹರಿಣಿ ಶ್ರೀಕಾಂತ್ ಫೋಟೋಗಳಿವು!
ಪ್ರಸ್ತುತ ಬೆಂಗಳುರಿನಲ್ಲಿ ನೆಲೆಸಿರುವ ಜ್ಞಾನ ತಂದೆ ಗುರುರಾಜ್ ಎನ್. ವೃತ್ತಿಪರ ಗಾಯಕರಾಗಿ ಗುರುತಿಸಿಕೊಂಡವರು. ತಾಯಿ ರೇಖಾ ಕುಮಾರಿ ಕೆ.ಎನ್ ಬೆಂಗಳುರಿನ ಮಾಯಗನಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕಿ. ಜ್ಞಾನಳ ಅಜ್ಜಿ ಅಂದರೆ ತಾಯಿಯ ತಾಯಿಯೂ ಸಂಗೀತ ಕ್ಷೇತ್ರಕ್ಕೆ ಸೇರಿದವರೇ, ಜ್ಞಾನ ದೊಡ್ಡಮ್ಮ ದಿವಂಗತ ಜ್ಯೋತಿ ಅವರು ಪುತ್ತೂರಿನಲ್ಲಿ ಸಂಗೀತಗಾರ್ತಿಯಾಗಿ ಹೆಸರು ಮಾಡಿದ್ದವರು.
ರೇಖಾ ದುಡಿಯುತ್ತಿದ್ದ ಶಾಲೆಗೂ ಮನೆಗೂ ಹೆಚ್ಚು ಅಂತರವಿದ್ದ ಕಾರಣದಿಂದಾಗಿ ಕೆಲವು ತಿಂಗಳುಗಳ ಲಿಟಲ್ ಜ್ಞಾನ ಅಮ್ಮನೊಂದಿಗೆ ತರಗತಿಗೆ ಹೋಗಬೇಕಾಗಿತ್ತು. ತಾಯಿ ಹೇಳಿಕೊಡುತ್ತಿದ್ದ ಸಂಗೀತವನ್ನು ಆಸಕ್ತಿಯಿಂದ ಕೇಳುತ್ತಿದ್ದ ಜ್ಞಾನ ಎರಡು ವರ್ಷ ಪ್ರಾಯದಿಂದಲೇ, ಉಳಿದ ಮಕ್ಕಳು ಹೇಳುತ್ತಿದ್ದ ಹಾಡುಗಳನ್ನು ತನ್ನದೇ ಭಾಷೆಯಲ್ಲಿ ಗುನುಗುವ ಅಭ್ಯಾಸ ಮಾಡಿಕೊಂಡಿದ್ದಳು.
ಇದನ್ನು ಗಮನಿಸಿದ ತಾಯಿ ರೇಖಾ, ಒಂದು ಮೊಬೈಲ್‌ನಲ್ಲಿ ಕೇವಲ ಪದ್ಯಗಳನ್ನು ಮಾತ್ರ ಹಾಕಿ ಮಗುವಿನ ಕೈಗೆ ಇಟ್ಟಿದ್ದರು. ಎರಡೂವರೆ ವರ್ಷದ ಜ್ಞಾನ ಆಡುವುದಕ್ಕಿಂತಲೂ ಹೆಚ್ಚಾಗಿ ಇಷ್ಟಪಡುತ್ತಿದ್ದುದು ಹಾಡು ಕೇಳುವುದನ್ನು. ದೊಡ್ಡವರಿಗೇ ಸ್ಪರ್ಧಿಸಲು ಕಷ್ಟವೆನಿಸಿಕೊಳ್ಳುವ 'ಐಗಿರಿ ನಂದಿನಿ' ಹಾಡನ್ನು ಕಂಠಪಾಠ ಮಾಡಿಕೊಂಡು ಹಾಡಲು ಆರಂಭಿಸಿದ್ದಳು ಜ್ಞಾನ.
ಜ್ಞಾನಳ ಪಾಲಿಗೆ ತಾಯಿಯೇ ಮೊದಲ ಗುರು ಎನ್ನುವ ಮಾತು ಅಕ್ಷರಶಃ ಸತ್ಯ. ಮಗಳ ಆಸಕ್ತಿಯನ್ನು ಗಮನಿಸಿದ ತಾಯಿ ರೇಖಾ ಹಂತ ಹಂತವಾಗಿ ಸಂಗೀತ ಪಾಠವನ್ನು ಮಾಡತೊಡಗಿದರು. ಮಗುವಿನ ಸಾಹಿತ್ಯ ಹಾಗೂ ಶೃತಿಯನ್ನು ತಿದ್ದತೊಡಗಿದರು. ಈ ಪ್ರತಿಭೆ ಮೊದಲು ಕಾಣಿಸಿಕೊಂಡಿದ್ದು ಮಾಜಾ ಟಾಕೀಸ್‌ನಲ್ಲಿ, ತಮ್ಮ ಗಾಯನ ಪ್ರತಿಭೆಯ ಮೂಲಕ ಸದ್ದು ಮಾಡಿದ್ದಳು ಜ್ಞಾನ.
ಸರಿಗಮಪ ಶೋನಲ್ಲಿ ಭಾಗವಹಿಸಲು ಸಿಕ್ಕ ಅವಕಾಶ ಜ್ಞಾನಳನ್ನು ಪ್ರಖ್ಯಾತಿಗೊಳಿಸಿತು. ಈಕೆ ಈ ಸೀಸನ್‌ನ ಅತ್ಯಂತ ಕಿರಿಯ ವಿಶೇಷ ಸ್ಪರ್ಧಿ. ತುಂಟತನ ಹಾಗೂ ಮೂರುವರೆ ವರ್ಷ ವಯಸ್ಸಿಗೆ ಅಪೂರ್ವವೆನಿಸುವ ಸಂಗೀತದ ಕುರಿತಾದ ಜ್ಞಾನ ಈಕೆಯನ್ನು ಮತ್ತಷ್ಟು ಮೆಚ್ಚಿಕೊಳ್ಳುವಂತೆ ಮಾಡುತ್ತದೆ.
WWR ಹಾಟ್ ಸೀಟ್‌ನಲ್ಲಿ ಅಸಾಮಾನ್ಯ ಶ್ರೀಸಾಮಾನ್ಯ ನಿವೇದನ್ ನೆಂಪೆ!
ವಾರದ ಆವೃತಿಗೆ ಆಯ್ಕೆ ಮಾಡಲಾದ ಹಾಡನ್ನು ಮಗಳು ಸದಾ ಕೇಳಿಸಿಕೊಳ್ಳುವಂತೆ ವ್ಯವಸ್ಥೆ ಮಾಡುತ್ತಾರೆ ತಾಯಿ ರೇಖ. ಟಿವಿಯಲ್ಲಿ ಆ ಹಾಡಿನ ಸಂಬಂಧಿ ವೀಡಿಯೋ ಹಾಕಿ ಬಿಡುತ್ತಾರೆ, ಆಡುತ್ತಾ, ಓಡಾಡುತ್ತಾ ಜ್ಞಾನ ಅದನ್ನು ಕೇಳಿಸಿಕೊಳ್ಳುತ್ತಾಳೆ. ಮಗಳಿಗೆ ಹೇಳಿಕೊಡುವ ಮುನ್ನ ತಾಯಿ ರೇಖ ಅದನ್ನು ತಾವು ಸರಿಯಾಗಿ ಕಲಿಯಬೇಕಾಗುತ್ತದೆ. ಆ ನಂತರ ಜ್ಞಾನ ಕಲಿತ ಸಾಹಿತ್ಯವನ್ನು ಹಾಗೂ ಶೃತಿಯನ್ನು ಸರಿಪಡಿಸುತ್ತಾರೆ. ಅವಳಿಗೆ ಅರ್ಥವಾಗದ ವಿಷಯಗಳನ್ನು ಬಿಡಿಸಿ ಹೇಳುತ್ತಾರೆ. ನಡೆದಾಡುವಾಗ, ಆಡುವಾಗ ಪ್ರತಿ ಸಂದರ್ಭದಲ್ಲಿಯೂ ಜ್ಞಾನಳಿಗೆ ಆ ಹಾಡಿನ ಕುರಿತಾಗಿಯೇ ಅಬ್ಯಾಸ ಮಾಡಿಸಲಾಗುತ್ತದೆ. ವಿಶೇಷವೆಂದರೆ, ಅಕಸ್ಮಾತ್ ತಂದೆ-ತಾಯಿ ಸಾಹಿತ್ಯವನ್ನು ಹೇಳಿಕೊಡುವಾಗ ಎಡವಿದರೆ, ಮಗಳು ಕೂಡಲೇ ಸರಿಪಡಿಸುತ್ತಾಳೆ!
ಇತ್ತೀಚಿಗೆ ಸ್ನೇಹಿತರ ಮನೆಗೆ ಭೇಟಿ ಕೊಟ್ಟಿದ್ದಾಗ ಅಲ್ಲಿದ್ದ ಪಿಯಾನೋದಲ್ಲಿ ಆಡುತ್ತಾ ತನಗರಿವಿಲ್ಲದಂತೆಯೇ ಸ್ವರಗಳನ್ನು ಲಯಬದ್ದವಾಗಿ ನುಡಿಸುತ್ತಿದ್ದಳು ಎನ್ನುತ್ತಾರೆ ಆಕೆಯ ಹೆತ್ತವರು. ಸರಿಗಮಪ ಸೆಟ್‌ನಲ್ಲಿ ಉಳಿದ ಮಕ್ಕಳು ನೋಟ್ಸ್ ಮಾಡಿಕೊಂಡು ಅಭ್ಯಾಸ ಮಾಡುವುದನ್ನು ಗಮನಿಸುವ ಜ್ಞಾನ ವಿಡಿಯೋ ನೋಡಿ, ಹಾಡು ಕೇಳಿಕೊಂಡು ತಾನೂ ಕೂಡ ಸಾಹಿತ್ಯವನ್ನು ಬರೆದಿಡುತ್ತಾಳೆ. ಅವಳದೇ ಆದ ಲಿಪಿಯಲ್ಲಿ. ವೇದಿಕೆಯಲ್ಲಿ ನಿಂತು ಹಾಡುವುದಕ್ಕೂ ಮುನ್ನ ಅದನ್ನು ಓದಿಕೊಳ್ಳುತ್ತಾಳೆ.
ಅಂದಹಾಗೆ ಜ್ಞಾನಳಿಗೆ ಇನ್ನೂ ಅಕ್ಷರಾಭ್ಯಾಸ ಮಾಡಿಸಬೇಕಷ್ಟೆ!
ನಾದಬ್ರಹ್ಮ ಹಂಸಲೇಖ, ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯರ ಪ್ರೀತಿಗೆ ಪಾತ್ರಳಾದ ಜ್ಞಾನ, ನಿರೂಪಕಿ ಅನುಶ್ರೀ ಅವರ ಪುಟ್ಟ ಗೆಳತಿ. ಇವಳ ತುಂಟಾಟಗಳನ್ನು ಸಹಿಸಿಕೊಂಡು ಆನಂದಿಸುತ್ತಾರೆ. ಅಂದಹಾಗೆ ಜ್ಞಾನಳ ಅಚ್ಚುಕಟ್ಟಾದ ಗಾಯನ ವಿಂದೆ, ಝೀ ಕನ್ನಡ ಸರಿಗಮಪ ಶೋನ ಡಾ. ಸುಚೇತನ್ ರಂಗಸ್ವಾಮಿ, ಭಾಸ್ಕರ್, ಸಚಿನ್ ಪ್ರಕಾಶ್, ಅಭಿ ಹಾಗೂ ನಾಗೇಂದ್ರ ಅವರ ಪ್ರಯತ್ನವು ಬಹಳ್ಟದೆ.
ಹೇಳಿ ಕೊಟ್ಟದ್ದು ವೇಗವಾಗಿ ಕಲಿಯುವ ಪುಟಾಣಿ ಹುಡುಗಿ ಜ್ಞಾನಳಿಗೆ ಮೇಕಪ್ ಮಾಡುವುದೆಮದರೆ ಅಚ್ಚುಮೆಚ್ಚು. ಬಾಬಿ ಹಾಗೂ ಕಾರ್‌ಗಳ ಕುರಿತಾಗಿ ವಿಶೇಷ ಆಸಕ್ತಿ. ತಾವು ಸಾಧಿಸಲಾಗದ್ದನ್ನು ತಮ್ಮ ಮಗಳು ತನ್ನ ಕಿರಿಯ ವಯಸ್ಸಿನಲ್ಲಿ ಮಾಡುತ್ತಿದ್ದಾಳೆ. ಆಕೆ ಹೆಸರಾಂತ ಗಾಯಕಿಯಾಗಬೇಕೆಂಬುವುದು ಆಕೆಯ ಹೆತ್ತವರ ಆಸೆ. ಜ್ಞಾನಳಿಗೂ ಸಂಗೀತವೆಂದರೆ ಅದಮ್ಯ ಪ್ರೇಮ. ಸದಾ ಹಾಡು ಕೇಳುತ್ತಿರುವುದು ಆಕೆಯ ದಿನಚರಿ. "ಮಗಳಿಗೆ ದೈವದತ್ತವಾಗಿ ಸಂಗೀತ ಒಲಿದು ಬಂದಿದೆ. ಅವಳನ್ನು ಪಡೆದ ನಾವೇ ಧನ್ಯರು" ಎನ್ನುತ್ತಾರೆ ಜ್ಞಾನ ಹೆತ್ತವರು.
ಸೀಮಾ ಪೋನಡ್ಕ ,ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು