ಅಡಿಕೆ ಟೀ ಸಂಶೋಧಕ, ಮೆಲೆನಾಡಿನ ಯುವ ಸಾಧಕ, ಯುವ ವಿಜ್ಞಾನಿ ನಿವೇದನ್ ಅವರದ್ದು ಸರಳ ಸುಂದರ ಜೀವನ. ಎಷ್ಟೇ ಸಂಪಾದಿಸಿದರೂ ಐಶ್ವರ್ಯಕ್ಕಿಂತ ಜನರ ಪ್ರೀತಿ ಹಾಗೂ ತನ್ನ ಹುಟ್ಟೂರಾದ ಮಂಡಗದ್ದೆ ಮೇಲಿರುವ ಗೌರವವೇ ಅವರನ್ನು ಡೌನ್‌ ಟು ಅರ್ತ್ ವ್ಯಕ್ತಿಯನ್ನಾಗಿಸಿದೆ. 

ಮಲೆನಾಡಲ್ಲಿ ಮಂಗನಕಾಯಿಲೆಯ ಅಟ್ಟಹಾಸ ಜೋರಾಗಿ, ಮಲೆನಾಡೇ ಮರುಗಿತ್ತು. ಆಗ ಡಿಎಂಪಿ ಎಣ್ಣೆಯಿಂದ ತಯಾರಾದ ನಾಟಿ ಔಷಧಿ ಕೆಎಫ್‌ಡಿಆರ್ ಜೆಲ್‌‌ ಸಂಶೋಧಿಸಿದರು. ಇದಕ್ಕೆ  ಇಡೀ ದೇಶವೇ ಭೇಷ್ ಎಂದು ಹೇಳಿತು. ಇಂಥ ಅಗತ್ಯ ಔಷಧಿಯನ್ನು ಕಂಡು  ಹಿಡಿದ ಸಾಧಕನನ್ನು ವೀಕೆಂಡ್ ವಿತ್ ರಮೇಶ್‌ ಪರಿಚಯಿಸುತ್ತಿದೆ. ಗ್ರ್ಯಾಂಡ್‌ ಫಿನಾಲೆ ವಿಭಿನ್ನವಾಗಿರಬೇಕೆಂಬ ಶ್ರೀಸಾಮಾನ್ಯನ ಸಾಧನೆಯನ್ನು ತೆರೆದಿಡುತ್ತಿದೆ ಈ ಕಾರ್ಯಕ್ರಮ. ಇದರಲ್ಲಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಿವೇದನ್‌ ನೆಂಪೆಯೂ ಭಾಗಿಯಾಗಿದ್ದಾರೆ. ಒಂದು ಹೊತ್ತು ಊಟಕ್ಕೂ ಯೋಚಿಸಿ ದುಡ್ಡು ಕರ್ಚು ಮಾಡುವಂಥ ಪರಿಸ್ಥಿತಿಯಲ್ಲಿ ಬೆಳೆದು, ಆಕಾಶ ಮುಟ್ಟವಷ್ಟು ದೊಡ್ಡ ಕನಸು ಹೊತ್ತ ನಿವೇದನ್‌ ಸುವರ್ಣ ನ್ಯೂಸ್.ಕಾಂಗೆ Exclusive ಸಂದರ್ಶನ ನೀಡಿದ್ದಾರೆ. ಅವರು ಹೇಳಿದ್ದಿಷ್ಟು...

ನಿವೇದನ್ ಲೈಫ್‌ ಜರ್ನಿ ಹೇಗಿತ್ತು? 

10ನೇ ವಯಸ್ಸಲ್ಲಿ ತಂದೆಯನ್ನು ಕಳೆದುಕೊಂಡೆ. ಒಂದು ಹೊತ್ತು ಊಟಕ್ಕೂ ಇಲ್ಲದಂತೆ ಬೆಳೆದವರು.  ಯಾರೊಂದಿಗೆ ಮಾತನಾಡಿದರೂ ಇವರು ಸಹಾಯಕ್ಕೇ ಬರುತ್ತಾರೆನ್ನುವಂತೆಯೇ ನೋಡುತ್ತಿದ್ದರು.  ಆಗಲೇ ನಾನು ಸ್ವತಂತ್ರ ವ್ಯಕ್ತಿಯಾಗಿ ಬೆಳೆಯಬೇಕೆಂಬ ಕನಸು ಕಂಡೆ. ಆ ಕನಸನ್ನು ಸಾಕಾರಗೊಳಿಸಲು ಏನು ಬೇಕೋ ಅದನ್ನು ಮನದಲ್ಲಿಯೇ ತಯಾರಿ ಮಾಡಿಕೊಂಡಿದ್ದೆ.

ಹಣ ಇಲ್ಲದ ಕಾರಣ ಸರಕಾರಿ ಶಾಲೆಯಲ್ಲೇ ಓದಿದೆ. ಏನೂ ಸೌಲಭ್ಯ ಇಲ್ಲದಿದ್ದರೂ ಸರಕಾರಿ ಕಾಲೇಜಿಗೆ ಸೇರಿಕೊಳ್ಳಬೇಕಾಗಿತ್ತು ಫಾರ್ಮಸಿಯಲ್ಲಿ ಪದವಿ ಪಡೆದೆ. ಊಟ ಮಾಡಿದರೆ 6 ರೂ. 1 ರೂ.ಗೆ ಟೀ ಬರುತ್ತದೆ ಎಂದು ಎಷ್ಟೋ ದಿನ ಟೀ ಕುಡಿದೇ ಹೊತ್ತು ತಳ್ಳುತ್ತಿದ್ದೆ. 

ಫಾರಿನ್‌ಗೆ ಹೋಗೋ ಅವಕಾಶ ಸಿಕ್ಕಿದ್ದು ಹೇಗೆ?

ಕೆಲವೊಂದು ಕಾಯಿಲೆಗಳಿಗೆ ನಾಟಿ ಔಷಧಿ ಮಾತ್ರ ಕೆಲಸಕ್ಕೆ ಬರುವುದೆಂದು ಔಷಧಿಗಳನ್ನು ಕಂಡು ಹಿಡಿಯುವುದು ಹೇಗೆ, ಏನು ಮಾಡಬಹುದು ಎಂಬ ಬಗ್ಗೆ ರಿಸರ್ಜ್‌ ಮಾಡಿ ಸುಪ್ರೀಂ ಕೋರ್ಟ್‌ಗೆ ಅಧ್ಯಯನದ ವರದಿ ಸಲ್ಲಿಸಿದೆ. ಆಗಲೇ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಇನ್ ಮ್ಯಾನುಫ್ಯಾಕ್ಚರ್ ಆ್ಯಂಡ್ ಮ್ಯಾನೆಜ್‌ಮೆಂಟ್ ಟೆಕ್ನಾಲಜಿ ಡಿಗ್ರಿ ಮಾಡುವ ಅವಕಾಶ ಸಿಕ್ಕಿತು. ಕೆಳ ವರ್ಗದ, ಹಳ್ಳಿ ಹುಡುಗನೊಬ್ಬನಿಗೆ ಸಹಕರಿಸಲು ಯಾರೂ ಮುಂದಾಗಿರಲಿಲ್ಲ. ಶಿಕ್ಷಣ ಸಾಲ 3 ಲಕ್ಷ ರೂ. ಸಾಲ ಪಡೆಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಸರಕಾರಿ ಸ್ಕಾಲರ್‌ಶಿಪ್‌ನೊಂದಿಗೆ ಫಾರಿನ್‌ಗೆ ಓದಲು ಹೋದೆ. 

ಅಲ್ಲಿ ವಾಸ ಮಾಡಲು ಮನೆ, ಕಾಲೇಜ್ ಫೀಸ್ ಹಣ ಹೊಂದಿಸಲು ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದೆ.  ನಂತರ Consultant ಬ್ಯುಸಿನೆಸ್ ಡೆವಲಪರ್ ಆಗಿ 6 ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಕೈಗೆ ದುಡ್ಡೇನೋ ಬಂತು. ಆದರೂ, ಏನೋ ಕೊರತೆ ನನ್ನನ್ನು ಕಾಡಲು ಆರಂಭಿಸಿತು.  ಆಗ ಸ್ವದೇಶಕ್ಕೆ, ಅದರಲ್ಲಿಯೂ ನನ್ನ ಹಳ್ಳಿಗೆ ಮರಳಲು ನಿರ್ಧರಿಸಿದೆ. ತವರು ನನ್ನನ್ನು ವಿಪರೀತ ಸೆಳೆಯಿತು.

ಫಾರಿನ್ ಬಿಟ್ಟು ಹಳ್ಳಿಗೆ ಬಂದು ಮಾಡಿದ್ದೇನು? 

ಯಶಸ್ಸು ನಂಗೇನೂ ತಕ್ಷಣವೇ ಸಿಗಲಿಲ್ಲ. ಸಾಕಷ್ಟು ಸಾರಿ ಹಿಡಿದ ಕೆಲಸದಲ್ಲಿ ಫೇಲ್ ಆಗಿದ್ದೇನೆ. ಪರ್ಫ್ಯೂಮ್ ಬ್ಲೆಂಡಿಂಗ್ ಮಾಡಿ ಫೈಲ್ಯೂರ್ ಆದೆ. ಅರೋಮಾ ಕ್ಯಾಂಡಲ್‌ ಟ್ರೈ ಮಾಡಿದೆ. ಅದೂ ಕೈ ಹಿಡೀಲಿಲ್ಲ. ದೇಶದಲ್ಲೇ ಮೊದಲೆಂದು ಪರ್ಫ್ಯೂಮ್ ವಿಸಿಟಿಂಗ್ ಕಾರ್ಡ್ ಎಂದು ಆರಂಭಿಸಿದೆ. ಅದು ನನ್ನ ಲೈಫಿನ ಟರ್ನಿಂಗ್ ಪಾಯಿಂಟ್. ಒಂದು ವಿಸಿಟಿಂಗ್ ಕಾರ್ಡನಲ್ಲಿರುವ ಪರ್ಫ್ಯೂಮ್ ಸುಮಾರು 2 ವರುಷ ಹಾಗೇ ಉಳಿಯುತ್ತದೆ. ಇಂಥ ಕಾರ್ಡ್ ಮಾಡಿಸಿಕೊಳ್ಳಲು ಮಂದಿ 2 ತಿಂಗಳ ಮಂಚೆಯೇ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಅಡಿಕೆ ಬ್ಯಾನ್ ಕೂಗಿಗೊಂದು ಫುಲ್ ಸ್ಟಾಪ್ ಇಡುವುದೂ ನನ್ನ ಕನಸಾಗಿತ್ತು. ಅಡಿಕೆಯ ಬದಲಿ ಬಳಕೆ ಬಗ್ಗೆ ಸಂಶೋಧನೆ ಮಾಡುವುದು ಅನಿವಾರ್ಯವಾಗಿತ್ತು. ಅಡಿಕೆ ಅನಾರೋಗ್ಯಕಾರಿಯಲ್ಲ. ಬದಲಿಗೆ ಇದರಲ್ಲೂ ಔಷಧೀಯ ಗುಣಗಳಿವೆ ಎಂಬುವುದನ್ನು ಜಗತ್ತಿಗೆ ತೋರಿಸಬೇಕಾಗಿತ್ತು ನಾನು. ಇದರಿಂದ ತಯಾರಿಸಿದ ಪದಾರ್ಥಗಳನ್ನು ಪರಿಚಯಿಸಿದೆ. ಟೀ ತಯಾರಿಸಿದೆ. ಮಂಗನಕಾಯಿಲೆಗೂ ಔಷಧಿ ಕಂಡು ಹಿಡಿದೆ. ಇದು ನನಗೆ ಒಳ್ಳೆ ಹೆಸರು ತಂದು ಕೊಟ್ಟವು. ರಾಷ್ಟ್ರೀಯ ಪುರಸ್ಕಾರಗಳು ನನ್ನನ್ನು ಆರಿಸಿ ಬಂದವು. 

ಕಾರಿನ ಮೇಲೆ ಹಾಕುವ ಸ್ಟಿಕ್ಕರ್ಸ್‌ ಅನ್ನು ರೀ ಸೈಕಲ್ ಮಾಡುತ್ತೇವೆ. ಅದು ವಿಶ್ವದಲ್ಲಿಯೇ ಹೆಚ್ಚು ಮಾರಾಟವಾಗುತ್ತಿದ್ದು, ಈ ಬ್ಯುಸಿನೆಸ್‌ನಲ್ಲಿ ನನ್ನ ಕಂಪನಿ ಎರಡನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ನಾನು ವಿದೇಶಿ ನಿಯೋಗವನ್ನು ಎಲ್ಲಿಯೋ ಹೋಗಿ ಮೀಟ್ ಆಗೋಲ್ಲ. ಬದಲಾಗಿ ಎಲ್ಲರನ್ನೂ ನಮ್ಮ ಹಳ್ಳಿಗೇ ಆಹ್ವಾನಿಸುತ್ತೇನೆ. ನಮ್ಮ ಹಳ್ಳಿಯ ಬಗ್ಗೆ ವಿದೇಶಿಯರು ಹೆಮ್ಮೆಯ ಮಾತನಾಡಿದಾಗ, ನನಗೂ ಏನೋ ಸಾಧಿಸದ ಖುಷಿ ಸಿಗುತ್ತದೆ.

ಸಧ್ಯಕ್ಕೆ ನನ್ನ ಕೋಡೆಡ್ ಪ್ರಾಜೆಕ್ಟ್‌ಗೆ ಜರ್ಮನ್‌ ಹಾಗೂ ಫ್ರಾನ್ಸ್‌ ಸರಕಾರ ಸಾಥ್ ನೀಡಲು ಮುಂದಾಗಿವೆ. ನನ್ನಂತೆ ಜೀವನದಲ್ಲಿ ಏನೋ ಮಾಡುವ ಕನಸು, ಪ್ರತಿಭೆ ಇದ್ದು, ಏನೂ ಮಾಡಲಾಗೋಲ್ಲ ಎನ್ನುವವರಿಗೆ ನಾನು ಯಾವ ರೀತಿಯ ಬೆಂಬಲ ನೀಡಲೂ ಸಿದ್ಧ.