ಕೇವಲ 27ರ ಹರೆಯದ ನಿರ್ದೇಶಕ ಕಾಪಿ ಸ್ಕ್ವಾಡ್ ವೆಬ್ ಸಿರೀಸ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ಆದರೆ ವೆಬ್ ಸೀರಿಸ್ ಪ್ರೀಮಿಯರ್ ಆದ ಎರಡೇ ದಿನಕ್ಕೆ 27ರ ಹರೆಯದ ನಿರ್ದೇಶಕ ಶವವಾಗಿ ಪತ್ತೆಯಾಗಿದ್ದಾರೆ. ಮದುವೆಯಾಗಿ ಕೇವಲ ಒಂದು ತಿಂಗಳಾಗಿದೆ ಅಷ್ಟೆ.

ಕೊಚ್ಚಿ (ಅ.17) ಕಾಪಿ ಸ್ಕ್ವಾಡ್ ವೆಬ್ ಸಿರೀಸ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆದ ಎರಡೇ ದಿನಕ್ಕೆ ಯುವ ನಿರ್ದೇಶಕ ಬೆಲ್ರಾಜ್ ಕಳರಿಕ್ಕಲ್ ಹೊಟೆಲ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 27ರ ಹರೆಯದ ಯುವ ನಿರ್ದೇಶಕ ಮಳೆಯಾಳಂ ಸಿನಿಮಾ ಇಂಡಸ್ಟ್ರೀಯ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಕೊಚ್ಚಿಯ ಹೊಟೆಲ್ ರೂಂನಲ್ಲಿ ಬೆಲ್ರಾಜ್ ಕಳರಿಕ್ಕಲ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಅಕ್ಟೋಬರ್ 15ಕ್ಕೆ ಕಾಪಿ ಸ್ಕ್ವಾಡ್ ಪ್ರೀಮಿಯರ್

ಅಕ್ಟೋಬರ್ 15ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬೆಲ್ರಾಜ್ ಕಳರಿಕ್ಕಲ್ ನಿರ್ದೇಶನದ ಕಾಪಿ ಸ್ಕ್ವಾಡ್ ವೆಬ್ ಸಿರೀಸ್ ಪ್ರೀಮಿಯರ್ ಆಗಿತ್ತು. ಪ್ರೀಮಿಯರ್ ಆದ ಎರಡೇ ದಿನಕ್ಕೆ ಬೆಲ್ರಾಜ್ ಮೃತಪಟ್ಟಿದ್ದಾರೆ. ಇದು ಕೇರಳ ಸಿನಿಮಾ ದಿಗ್ಗಜರು, ಸಿನಿಮಾ ಅಭಿಮಾನಿಗಳು ಸೇರಿದಂತೆ ಹಲವರನ್ನು ಆಘಾತಕ್ಕೀಡು ಮಾಡಿದೆ. ಸಿನಿಮಾ ಇಂಡಸ್ಟ್ರಿಯ ಹಲವು ದಿಗ್ಗಜರು ಬೆಲ್ರಾಜ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಯುವ ನಿರ್ದೇಶಕನ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಮದುವೆಯಾದ ಒಂದೇ ತಿಂಗಳಿಗೆ ದುರಂತ ಅಂತ್ಯ

ಬೆಲ್ರಾಜ್ ಕಳರಿಕ್ಕಲ್ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದ ಬಹುಕಾಲದ ಗೆಳತಿ ಆದಿರಾ ಬಿಂದು ಸಾಬು ಜೊತೆ ಮದುವೆಯಾಗಿದ್ದರು. ಈ ಜೋಡಿಯ ಮದುವೆ ಸೆಪ್ಟೆಂಬರ್ 11, 2026ರಂದು ನಡೆದಿತ್ತು. ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಬೆಲ್ರಾಜ್ ದುರಂತ ಅಂತ್ಯ ಕಂಡಿದ್ದಾರೆ. ಬೆಲ್ರಾಜ್ ಸಾವಿನ ಮಾಹಿತಿ ಸಿಗುತ್ತಿದ್ದಂತೆ ಕುಟಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಪತ್ನಿ ಆದಿರಾ ಬಿಂದು ಅಸ್ವಸ್ಥರಾಗಿದ್ದಾರೆ.

ಬೆಲ್ರಾಜ್ ಕಳರಿಕ್ಕಲ್ ವೆಬ್ ಸಿರೀಸ್, ಸಿನಿಮಾ ಸಂಬಂಧ ಕೊಚ್ಚಿ ಹೊಟೆಲ್‌ನಲ್ಲಿ ತಂಗಿದ್ದರು. ಮತ್ತೊರ್ವ ನಿರ್ದೇಶಕ ಶ್ರೀಕಾಂತ್ ಮೋಹನ್ ಜೊತೆ ಹೊಟೆಲ್‌ನಲ್ಲಿ ತಂಗಿದ್ದರು. ಕೆಲ ಹೊತ್ತಾದರೂ ಬೆಲ್ರಾಜ್ ಸುಳಿವೇ ಇಲ್ಲದ ಕಾರಣ ಬಾಗಿಲು ತಟ್ಟಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರೆ ಮಾಡಿದರೆ ಕೋಣೆಯೊಳಗೆ ಫೋನ್ ರಿಂಗ್ ಆಗುತ್ತಿದೆ, ಆದರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಶ್ರೀಕಾಂತ್ ಅನುಮಾನ ಹೆಚ್ಚಾಗಿದೆ. ಹೊಟೆಲ್ ಸಿಬ್ಬಂದಿಗಳಿಗೆ ಮಾಹಿತ ನೀಡಿದ್ದಾರೆ. ಸಿಬ್ಬಂದಿಗಳು ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಬೆಲ್ರಾಜ್ ಶಸವಾಗಿ ಪತ್ತೆಯಾಗಿದ್ದಾರೆ.

ಹೃದಯಾಘಾತದಿಂದ ಬೆಲ್ರಾಜ್ ಮೃತಪಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.