ಯಶ್ ಎಂದರೆ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಸರು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಅವರ ಖ್ಯಾತಿ ದೇಶದ ಗಡಿ ದಾಟಿದ್ದು, ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಎಂದರೆ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಸರು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಅವರ ಖ್ಯಾತಿ ದೇಶದ ಗಡಿ ದಾಟಿದ್ದು, ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಇಷ್ಟೊಂದು ಎತ್ತರಕ್ಕೇರಿದರೂ, ಯಶ್ ಅವರ ಮನಸ್ಸಿಗೆ ಹತ್ತಿರವಾಗಿರುವ ವ್ಯಕ್ತಿಗಳು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇದೆ. ಇದೀಗ ತಮ್ಮ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಯಶ್ ನೀಡಿರುವ ಉತ್ತರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಆ ವ್ಯಕ್ತಿ ಯಾವುದೇ ಸಿನಿಮಾ ಸ್ಟಾರ್ ಅಥವಾ ಗಣ್ಯ ವ್ಯಕ್ತಿಯಲ್ಲ. ಯಶ್ ಅವರ ಸ್ವಂತ ತಂಗಿ ನಂದಿನಿ!
‘ನನ್ನ ತಂಗಿಯ ಹೆಸರೂ ನಂದಿನಿ!’
ಖ್ಯಾತ ನಿರೂಪಕ ರಜತ್ ಶರ್ಮಾ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ‘ಆಪ್ ಕಿ ಅದಾಲತ್’ನಲ್ಲಿ ಯಶ್ ಭಾಗವಹಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳಿಂದ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಎದುರಿಸಿದ್ದರು. ಈ ವೇಳೆ ನಂದಿನಿ ಎಂಬ ವೀಕ್ಷಕರೊಬ್ಬರು, “ನೀವು ಇಷ್ಟು ದೊಡ್ಡ ಸ್ಟಾರ್ ಆಗಿದ್ದೀರಿ. ನಿಮ್ಮ ಕಾಲೇಜು ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮ ಯಶಸ್ಸನ್ನು ನೋಡಿ ಏನು ಹೇಳುತ್ತಾರೆ?” ಎಂಬ ಅರ್ಥದಲ್ಲಿ ಪ್ರಶ್ನೆ ಕೇಳಿದ್ದಾರೆ. ಆದರೆ ಪ್ರಶ್ನೆ ಕೇಳಿದವರ ಹೆಸರು ‘ನಂದಿನಿ’ ಎಂದು ತಿಳಿಯುತ್ತಿದ್ದಂತೆ ಯಶ್ ಮುಖದಲ್ಲಿ ವಿಶೇಷ ನಗು ಮೂಡಿದೆ. ಕೂಡಲೇ, “ನಿಮ್ಮ ಹೆಸರು ನಂದಿನಿ ಅಲ್ವಾ? ನನ್ನ ತಂಗಿಯ ಹೆಸರು ಕೂಡ ನಂದಿನಿ,” ಎಂದು ಹೇಳಿ ತಮ್ಮ ತಂಗಿಯನ್ನು ನೆನಪಿಸಿಕೊಂಡಿದ್ದಾರೆ.
‘ನನ್ನ ಮೋಸ್ಟ್ ಫೇವರಿಟ್ ಪರ್ಸನ್ ನನ್ನ ತಂಗಿ’
ತಮ್ಮ ತಂಗಿ ನಂದಿನಿ ಬಗ್ಗೆ ಮಾತನಾಡಿದ ಯಶ್, ತಮ್ಮ ಮನಸ್ಸಿಗೆ ಆಕೆ ಎಷ್ಟು ಹತ್ತಿರ ಎಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದಾರೆ. “ನನ್ನ ಮೋಸ್ಟ್ ಫೇವರಿಟ್ ಪರ್ಸನ್ ಇನ್ ದ ವರ್ಲ್ಡ್ ನನ್ನ ತಂಗಿ ನಂದಿನಿ,” ಎಂದು ಯಶ್ ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದವರ ಮುಖದಲ್ಲೂ ಸಂತಸ ಮೂಡಿದೆ. ಸಿನಿಮಾ ಜಗತ್ತಿನಲ್ಲಿ ಯಶಸ್ಸು, ಜನಪ್ರಿಯತೆ ಮತ್ತು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಯಶ್, ತಮ್ಮ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿಯಾಗಿ ತಂಗಿಯ ಹೆಸರನ್ನು ಹೇಳಿರುವುದು ಅಭಿಮಾನಿಗಳಿಗೂ ವಿಶೇಷವಾಗಿ ಇಷ್ಟವಾಗಿದೆ.
ಸ್ಟಾರ್‌ಡಮ್‌ಗಿಂತ ಕುಟುಂಬವೇ ಮುಖ್ಯ!
ಯಶ್ ಅವರ ಈ ಮಾತು ಮತ್ತೊಮ್ಮೆ ಅವರ ಕುಟುಂಬದ ಮೇಲಿನ ಪ್ರೀತಿ ಮತ್ತು ಬಾಂಧವ್ಯವನ್ನು ತೋರಿಸಿದೆ. ಪರದೆಯ ಮೇಲೆ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುವ ರಾಕಿಂಗ್ ಸ್ಟಾರ್, ವೈಯಕ್ತಿಕ ಬದುಕಿನಲ್ಲಿ ಕುಟುಂಬಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದಕ್ಕೆ ಈ ಮಾತು ಸಾಕ್ಷಿಯಾಗಿದೆ. ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟನಾಗಿರುವ ಯಶ್‌ಗೆ ಜಗತ್ತಿನಲ್ಲೇ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಬಂದ ಉತ್ತರ ಮಾತ್ರ ತುಂಬಾ ಸರಳ-ಅವರ ಪ್ರೀತಿಯ ತಂಗಿ ನಂದಿನಿ.


