ನಟ ವಿನೋದ್ ರಾಜ್ ಅವರು ಸಿನಿಮಾದಿಂದ ದೂರ ಸರಿದು ಕೃಷಿ ಮಾಡಿಕೊಂಡಿದ್ದಾರೆ, ಸಮಾಜಸೇವೆಯಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡಿದ್ದಾರೆ. ಅಗಾಗ ಸಂದರ್ಶನಗಳಲ್ಲಿ ಭಾಗಿಯಾಗಿ ತಮ್ಮ ಅನುಭವ-ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಇನ್ನು ನಟಿ ಸುಧಾರಾಣಿ ಅವರು ಈಗ ಸೀರಿಯಲ್‌ನಲ್ಲಿ ಸಕ್ರಿಯರಾಗಿದ್ದಾರೆ.

ನಟಿ ಸುಧಾರಾಣಿ (Sudharani) ತಮ್ಮ ಪ್ರೇಮಿ ಎಲ್ಲಿ ಅಂತ ಹುಡುಕ್ತಾ ಇದಾರೆ.. ಆದರೆ ವಿನೋದ್‌ ರಾಜ್ (Vinod Raj) ಅವರಿಗೆ ತಮ್ಮ ಪ್ರೇಯಸಿ ತನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂಬುದು ಪಕ್ಕಾ ಗೊತ್ತು. ಆ ಕಾರಣಕ್ಕೆ ಅವರು ಖುಷಿಯಿಂದ ಬಂಡೆಗಲ್ಲಿನ ಮೇಲೆ ಕುಣಿಯುತ್ತಿದ್ದಾರೆ. ಶಿವನು ಪಾರ್ವತಿಗಾಗಿ ತಾಂಡವ ನೃತ್ಯ ಮಾಡಿದಂತೆ, ವಿನೋದ್‌ ರಾಜ್ ಅವರು ಸುಧಾರಾಣಿ ಬಂದಿರುವುದನ್ನು ಅರಿತು ಬೆಟ್ಟದಲ್ಲಿ ಬಂಡೆಗಲ್ಲಿನ ಮೇಲೆ ಡಾನ್ಸ್ ಮಾಡುತ್ತಿದ್ದಾರೆ. 'ಮಿಂಚಂತೆ ಬಂದೆ, ಮನದಲ್ಲಿ ನಿಂದೆ.. ಹೊಸಭಾವವೊಂದು ತಂದೆ.. ರಾಧಾssssss..' ಎಂದು ಹಾಡಿ ನಲಿಯುತ್ತಾರೆ. ಅವರ ಧ್ವನಿ ಮಾಧುರ್ಯ, ನೃತ್ಯಕ್ಕೆ ಮನಸೋತ ಸುಧಾರಾಣಿ ನಿಂತಲ್ಲೇ ನರ್ತಿಸುತ್ತಾರೆ, ಸಂತೋಷದಿಂದ ಮುಖದಲ್ಲಿ ಮಂದಹಾಸ ಮೂಡುತ್ತದೆ.

ಇದು 1988ರಲ್ಲಿ ತೆರೆಗೆ ಬಂದಿರುವ 'ಕೃಷ್ಣಾ ನೀ ಕುಣಿದಾಗ' ಚಿತ್ರದ ವೈರಲ್ ವಿಡಿಯೋ ಸಾಂಗ್‌. ಸುಧಾರಾಣಿ ಹಾಗೂ ವಿನೋದ್ ರಾಜ್ ನಟನೆಯ ಈ ಚಿತ್ರವು ತೆರೆ ಕಂಡಾಗ ಈ ಚಿತ್ರವು ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಮುಖ್ಯವಾಗಿ 'ಮಿಂಚಂತೆ ಬಂದೆ, ಮನದಲ್ಲಿ ನಿಂದೆ..' ಹಾಡು ಅಂದು ಮನೆಮಾತಾಗಿತ್ತು. ಈ ಹಾಡು ಅದೆಷ್ಟು ಜನಮೆಚ್ಚುಗೆ ಗಳಿಸಿತ್ತು ಎಂದರೆ, ಆ ಹಾಡನ್ನು ಅಂದಿನ ಸ್ಕೂಲು, ಕಾಲೇಜು ಹಾಗೂ ಸಮಾರಂಭಗಳಲ್ಲಿ ಹಾಡಲಾಗುತ್ತಿತ್ತು. ಈ ಹಾಡಿಗೆ ವೇದಿಕೆಗಳಲ್ಲಿ ಡಾನ್ಸ್ ಮಾಡಲಾಗುತ್ತಿತ್ತು. ಈ ಚಿತ್ರದ ಮೂಲಕ ನಟ ವಿನೋದ್ ರಾಜ್ ಹಾಗೂ ನಟಿ ಸುಧಾರಾಣಿ ಜೋಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಹಿಂದೆ ತೆರೆಕಂಡಿದ್ದ ಈ ಚಿತ್ರದಲ್ಲಿ ನಟಿ ಸುಧಾರಾಣಿ ಹಾಗೂ ನಟ ವಿನೋದ್‌ ರಾಜ್ ಅವರಿಬ್ಬರೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಹಾಡುಗಳು, ಅವರಿಬ್ಬರ ಜೋಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಅಚ್ಚರಿ ಎಂಬಂತೆ ಮತ್ತೆ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಸಾಧ್ಯವೇ ಆಗಲಿಲ್ಲ. ಇದು ಕನ್ನಡ ಚಿತ್ರಪ್ರೇಮಿಗಳಿಗೆ ನಿರಾಸೆ ತಂದಿರುವ ವಿಷಯ ಎನ್ನಬಹುದು. ನಟ ವಿನೋದ್‌ ರಾಜ್ ಅವರು ಆಮೇಲೆ ಅಷ್ಟಾಗಿ ಸಿನಿಮಾದಲ್ಲಿ ನಟಿಸಲೇ ಇಲ್ಲ ಎನ್ನಬಹುದು.

ಆ ಕಾಲದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ಜೋಡಿ ತೆರೆಯ ಮೇಲೆ ಅತ್ಯುತ್ತಮ ಜೋಡಿ ಎನ್ನಿಸಿತ್ತು. ಈ ಇಬ್ಬರೂ ಬೇರೆಬೇರೆ ನಟ-ನಟಿಯರ ಜೊತೆ ತೆರೆ ಹಂಚಿಕೊಂಡಿದ್ದರೂ ಕೂಡ, ಶಿವಣ್ಣ-ಸುಧಾರಾಣಿ ಜೋಡಿ ಭಾರೀ ಜನಮೆಚ್ಚುಗೆ ಪಡೆದಿತ್ತು. ಡಾ ರಾಜ್‌ಕುಮಾರ್-ಭಾರತಿ, ವಿಷ್ಣುವರ್ಧನ್-ಸುಹಾಸಿನಿ, ಅನಂತ್‌ ನಾಗ್-ಲಕ್ಷ್ಮೀ, ಅಂಬರೀಷ್-ಅಂಬಿಕಾ ಹೀಗೆ ಹಲವು ಜೋಡಿಗಳು ತೆರೆಯ ಮೇಲೆ ಖ್ಯಾತಿ ಪಡೆದಿದ್ದರು. 'ಕೃಷ್ಣಾ ನೀ ಕುಣಿದಾಗ' ಚಿತ್ರದಲ್ಲಿ ನಟ ವಿನೋದ್ ರಾಜ್ ಅವರು ನಟ ಶಿವಣ್ಣ (Shivarajkumar) ಅವರಂತೆಯೇ ತುಂಬಾ ಎನರ್ಜಿಟಿಕ್ ಅಗಿ ನೃತ್ಯ ಮಾಡಿದ್ದಾರೆ ಎಂಬ ಅಭಿಪ್ರಾಯ ಅಂದು ವ್ಯಕ್ತವಾಗಿತ್ತು.

ಇಂದು ನಟ ವಿನೋದ್ ರಾಜ್ ಅವರು ಸಿನಿಮಾದಿಂದ ದೂರ ಸರಿದು ಕೃಷಿ ಮಾಡಿಕೊಂಡಿದ್ದಾರೆ, ಸಮಾಜಸೇವೆಯಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡಿದ್ದಾರೆ. ಅಗಾಗ ಸಂದರ್ಶನಗಳಲ್ಲಿ ಭಾಗಿಯಾಗಿ ತಮ್ಮ ಅನುಭವ-ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಇನ್ನು ನಟಿ ಸುಧಾರಾಣಿ ಅವರು ಈಗ ಸಿನಿಮಾದಿಂದ ದೂರ ಸರಿದಿಲ್ಲವಾದರೂ ಅಪರೂಪ ಎಂಬಂತೆ ಸಿನಿಮಾದಲ್ಲಿ ನಟನೆ ಮಾಡುತ್ತಾರೆ. ಆದರೆ, ಸೀರಿಯಲ್‌ನಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಟಿ ಸುಧಾರಾಣಿಯವರು ತಮ್ಮದೇ 'ಯೂಟ್ಯೂಬ್ ಚಾನೆಲ್' ಓಪನ್ ಮಾಡಿದ್ದಾರೆ.