ಒಂದು ಕಾಲದಲ್ಲಿ ದಕ್ಷಿಣ ಭಾರತದ ಖ್ಯಾತ ನಟರಾಗಿದ್ದ, ಕನ್ನಡದ ನಟಿ ಮಾಜಿ ಪತಿ ಇಂದು ಬದುಕಿನ ಇಳಿ ವಯಸ್ಸಿನಲ್ಲಿ ಅನಾಥಾಶ್ರಮ ಸೇರಿದ್ದಾರೆ. ವೈಯಕ್ತಿಕ ಜೀವನದ ಬಿರುಗಾಳಿ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಬೀದಿಗೆ ಬಂದ ಅವರು, ಇದೀಗ ತಮ್ಮ ಚಿಕಿತ್ಸೆಗಾಗಿ ಚಿತ್ರರಂಗದ ಸಹಾಯವನ್ನು ಕೋರುತ್ತಿದ್ದಾರೆ.
ಸಿನಿಮಾ ರಂಗದ ಬಣ್ಣದ ಪ್ರಪಂಚ ಮೇಲ್ನೋಟಕ್ಕೆ ಎಷ್ಟು ಭವ್ಯವಾಗಿ ಕಾಣಿಸುತ್ತದೆಯೋ, ಅದರ ಹಿಂದಿನ ಕತ್ತಲೆಯ ಹಾದಿ ಅಷ್ಟೇ ಭೀಕರವಾಗಿರುತ್ತದೆ. ಅಂದು ಕೋಟಿ ಕೋಟಿ ಆಸ್ತಿ, ಬಂಗಲೆ, ಖ್ಯಾತಿ ಹೊಂದಿದ್ದ ಹಿರಿಯ ನಟರೊಬ್ಬರು, ಇಂದು ಬದುಕಿನ ಇಳಿ ವಯಸ್ಸಿನಲ್ಲಿ ಆರೈಕೆ ಮಾಡುವವರಿಲ್ಲದೆ ಅನಾಥಾಶ್ರಮ ಸೇರಿರುವ ಕಣ್ಣೀರಿನ ಕಥೆಯೊಂದು ಬೆಳಕಿಗೆ ಬಂದಿದೆ. ಅವರೇ ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ಕನ್ನಡದ ಖ್ಯಾತ ನಟಿಯ ಲಕ್ಷ್ಮಿ ಅವರ ಮಾಜಿ ಪತಿ ಮೋಹನ್ ಶರ್ಮಾ.
ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಮೊದಲ ದಕ್ಷಿಣ ಭಾರತೀಯ!
ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದ ಮೋಹನ್ ಶರ್ಮಾ, ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಿಂದ ನಟನೆಯಲ್ಲಿ ಪದವಿ ಪಡೆದ ಮೊದಲ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ತಮ್ಮ ವೃತ್ತಿಜೀವನದಲ್ಲಿ ತಮಿಳು, ಮಲಯಾಳಂ, ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಮಿಳಿನಲ್ಲಿ ಜೈಶಂಕರ್, ಶಿವಾಜಿ ಗಣೇಶನ್, ಅಜಿತ್, ಪ್ರಶಾಂತ್, ದಳಪತಿ ವಿಜಯ್, ವಿಜಯಕಾಂತ್ ಮತ್ತು ಶರತ್‌ಕುಮಾರ್ ಅವರಂತಹ ದಿಗ್ಗಜ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಸೌಂಡ್ ಮಾಡಿದ್ದರು.
ಸಿನಿಮಾದಿಂದ ಕಿರುತೆರೆಗೆ ಪ್ರಯಾಣ!
ಸಿನಿಮಾಗಳಲ್ಲಿ ನಟನೆಯ ಜೊತೆಗೆ ಅವರು ನಿರ್ದೇಶನ ಹಾಗೂ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. 2012ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ್ದ 'ನಮ್ಮ ಗ್ರಾಮ್' ಸಿನಿಮಾ ತಮಿಳುನಾಡು ಹಾಗೂ ಕೇರಳ ರಾಜ್ಯ ಸರ್ಕಾರಗಳ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಜೊತೆಗೆ ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಾಗ ಕಿರುತೆರೆಗೆ ಕಾಲಿಟ್ಟ ಮೋಹನ್ ಶರ್ಮಾ, ಕೋಲಂಗಲ್, ವಾಣಿ ರಾಣಿ, ಥಲಟ್ಟು ನಂತಹ ಸೂಪರ್ ಹಿಟ್ ತಮಿಳು ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು.
ವೈಯಕ್ತಿಕ ಜೀವನದ ಬಿರುಗಾಳಿ!
ಸಿನಿಮಾ ಜೀವನದಲ್ಲಿ ಯಶಸ್ಸು ಕಂಡರೂ, ಅವರ ವೈಯಕ್ತಿಕ ಜೀವನ ಮಾತ್ರ ನೆಮ್ಮದಿಯಿಂದ ಇರಲಿಲ್ಲ. ತಮ್ಮ ಮೊದಲ ಚಿತ್ರದ ನಾಯಕಿ, ಕನ್ನಡದ ಖ್ಯಾತ ನಟಿ ಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಮೋಹನ್, ಐದೇ ವರ್ಷಗಳಲ್ಲಿ ಅವರಿಂದ ವಿಚ್ಛೇದನ ಪಡೆದರು. ಬಳಿಕ ಶಾಂತಿ ಎಂಬುವವರನ್ನು ಎರಡನೇ ಮದುವೆಯಾದರು. ಆದರೆ, ಎರಡನೇ ಸಂಸಾರದಲ್ಲೂ ಅವರಿಗೆ ನೆಮ್ಮದಿ ಸಿಗಲಿಲ್ಲ. ಕೌಟುಂಬಿಕ ಕಲಹ, ಹೇಳಿಕೊಳ್ಳಲಾಗದ ದುಃಖ ಮತ್ತು ಆರ್ಥಿಕ ಸಂಕಷ್ಟಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದವು. ಪ್ರಮುಖ ಹಂತದಲ್ಲೇ ಅವರು ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿದ್ದ ತಮ್ಮ ಮನೆಯನ್ನು ಮಾರಾಟ ಮಾಡಬೇಕಾಯಿತು.
ಅನಾಥಾಶ್ರಮ ಸೇರಿದ್ದು ಹೇಗೆ?
ವೃದ್ಧಾಪ್ಯದ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರನ್ನು ನೋಡಿಕೊಳ್ಳಲು ಕುಟುಂಬಸ್ಥರಾಗಲಿ, ಬಂಧುಗಳಾಗಲಿ ಯಾರೂ ಮುಂದೆ ಬರಲಿಲ್ಲ. ಸಂಪೂರ್ಣವಾಗಿ ಒಂಟಿಯಾದಾಗ ರೋಟರಿ ಕ್ಲಬ್‌ನ ಕೆಲವು ಸದಸ್ಯರು ಅವರ ನೆರವಿಗೆ ಬಂದು, ತಮಿಳುನಾಡಿನ ಗುಮ್ಮಿಡಿಪೂಂಡಿಯಲ್ಲಿರುವ ಅನಾಥಾಶ್ರಮಕ್ಕೆ ಸೇರಿಸಿದರು. ಇಂದಿಗೂ ಆ ಅನಾಥಾಶ್ರಮದಲ್ಲೇ ಕಾಲ ಕಳೆಯುತ್ತಿರುವ ಮೋಹನ್ ಶರ್ಮಾಗೆ ಉಣ್ಣಲು ಅನ್ನ, ತಂಗಲು ಜಾಗ ಸಿಕ್ಕಿದೆಯಾದರೂ, ವೃದ್ಧಾಪ್ಯದ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳನ್ನು ಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಈ ವಿಷಯ ತಿಳಿದು 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದರು. ನನ್ನ ಬದುಕಿನ ಕೊನೆಯ ದಿನಗಳಲ್ಲಿ ಔಷಧ ಹಾಗೂ ಚಿಕಿತ್ಸೆಗೆ ನೆರವಾಗಲು ಚಿತ್ರರಂಗದ ದಾನಿಗಳು ಮುಂದೆ ಬರಬೇಕು ಎಂದು ಮೋಹನ್ ಶರ್ಮಾ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.


