ಯೋಗಾತ್ಸವ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್ ಸಂಸ್ಕೃತದಲ್ಲಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಯೋಗದ ಮಹತ್ವದ ಬಗ್ಗೆ ಮಾತನಾಡುತ್ತಾ, ನಿರರ್ಗಳವಾಗಿ ಸಂಸ್ಕೃತದಲ್ಲಿ ಭಾಷಣ ಮಾಡಿದ್ದು, ಸಭಿಕರಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ.

ಬಾಲಿವುಡ್‌ನ ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಯೋಗಾತ್ಸವ ಕಾರ್ಯಕ್ರಮವೊಂದರಲ್ಲಿ ಅವರು ನಿರರ್ಗಳವಾಗಿ ಸಂಸ್ಕೃತದಲ್ಲಿ ಭಾಷಣ ಮಾಡಿ ಎಲ್ಲರನ್ನೂ ದಂಗುಬಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರ್ಯಕ್ರಮದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಲು ವೇದಿಕೆ ಏರಿದ್ದ ವಿದ್ಯುತ್, ಹಿಂದಿಯಲ್ಲಿ ಮಾತು ಆರಂಭಿಸಿದ್ರು. ಆದರೆ, ಕೆಲವೇ ಕ್ಷಣಗಳಲ್ಲಿ ಸಂಸ್ಕೃತಕ್ಕೆ ಹೊರಳಿದ ಅವರ ಭಾಷಣ ಕೇಳಿ ಅಲ್ಲಿದ್ದ ಗಣ್ಯರು ಹಾಗೂ ಸಭಿಕರು ಅಕ್ಷರಶಃ ಅಚ್ಚರಿಪಟ್ಟರು. ಅವರ ಭಾಷಣಕ್ಕೆ ಭಾರಿ ಚಪ್ಪಾಳೆ ವ್ಯಕ್ತವಾಯಿತು. ಈ ಕಾರ್ಯಕ್ರಮದ ಹೈಲೈಟ್ ಕೂಡಾ ವಿದ್ಯುತ್ ಅವರ ಸಂಸ್ಕೃತ ಭಾಷಣವೇ ಆಗಿತ್ತು.

ವಿದ್ಯುತ್ ಜಮ್ವಾಲ್ ತಮ್ಮ ಫಿಟ್ನೆಸ್ ಹಾಗೂ ಲುಕ್‌ನಿಂದಲೇ ಹೆಚ್ಚು ಗಮನ ಸೆಳೆದ ನಟ. ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಇವರು, ಆರಂಭದಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚಿದ್ರು. ನಂತರ 'ಕಮಾಂಡೋ' ಚಿತ್ರದ ಮೂಲಕ ಹೀರೋ ಆದರು. 'ಬಿಲ್ಲಾ 2', 'ಅಂಜಾನ್', 'ತುಪ್ಪಾಕಿ'ಯಂತಹ ಸಿನಿಮಾಗಳ ಮೂಲಕ ದಕ್ಷಿಣ ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ವಿದ್ಯುತ್ ಕೇವಲ ನಟ ಮಾತ್ರವಲ್ಲ, ಸಮರ ಕಲೆ ಕಲಾವಿದರೂ ಹೌದು. ಬಾಲಿವುಡ್‌ನ ಫಿಟ್ ಆ್ಯಕ್ಷನ್ ಹೀರೋ ಎಂಬ ಖ್ಯಾತಿ ಇವರಿಗಿದೆ.

View post on Instagram

ನಿಜಕ್ಕೂ ಶ್ಲಾಘನೀಯ

ಈ ಭಾಷಣದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯುತ್ ಜಮ್ವಾಲ್‌ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. 'ತಮ್ಮ ಮಾತೃಭಾಷೆಯನ್ನೇ ಸರಿಯಾಗಿ ಮಾತನಾಡಲು ಕಷ್ಟಪಡುವ ಈ ಕಾಲದಲ್ಲಿ, ವಿದ್ಯುತ್ ಸಂಸ್ಕೃತದಲ್ಲಿ ಮಾತನಾಡಿದ್ದು ನಿಜಕ್ಕೂ ಶ್ಲಾಘನೀಯ' ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಅವರು ನೀಡುವ ಗೌರವವನ್ನು ತೋರಿಸುತ್ತದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ವಿದ್ಯುತ್, ಸಂಪೂರ್ಣ ಬೆತ್ತಲಾಗಿ ಮರ ಹತ್ತುವುದು ಮತ್ತು ಮಂಜಿನಲ್ಲಿ ಮಲಗಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದು ತಮ್ಮ ಕಳರಿಪಯಟ್ಟು ಅಭ್ಯಾಸದ ಭಾಗವಾಗಿದ್ದು, ಪ್ರಕೃತಿಯೊಂದಿಗೆ ಆಳವಾದ ಸಂಪರ್ಕ ಸಾಧಿಸಲು ವರ್ಷಕ್ಕೊಮ್ಮೆ ಹೀಗೆ ಮಾಡುವುದಾಗಿ ಹೇಳಿಕೊಂಡಿದ್ದರು.