ಸೂಪರ್ ಹಿಟ್ ನಿರ್ದೇಶಕ Anil Ravipudi ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಒಟ್ಟಿಗೆ ನಟಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದೊಂದು ಪಕ್ಕಾ ಹಬ್ಬದ ಮನರಂಜನೆಯ ಸಿನಿಮಾವಾಗಲಿದೆ.
ಟಾಲಿವುಡ್‌ನ ಇಬ್ಬರು ಸ್ಟಾರ್ ನಟರಾದ ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಸೂಪರ್ ಹಿಟ್ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಇದೊಂದು ಪಕ್ಕಾ ಹಬ್ಬದ ಮನರಂಜನೆಯ ಸಿನಿಮಾ ಆಗಿರಲಿದೆ ಎಂದು ಚಿತ್ರತಂಡ ಹೇಳಿದೆ. ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗಾರಪತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸುರೇಶ್ ಪ್ರೊಡಕ್ಷನ್ಸ್, ಶ್ರೀಮತಿ ಅರ್ಚನಾ ಮತ್ತು ಜೀ ಸ್ಟುಡಿಯೋಸ್ ಅರ್ಪಿಸುತ್ತಿವೆ.
ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದು, 2027ರ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಚಿತ್ರತಂಡದ ಜೊತೆಗೆ ಹಲವು ವಿಶೇಷ ಅತಿಥಿಗಳು ಆಗಮಿಸಿ ಶುಭ ಹಾರೈಸಿದರು. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರಿಷಾ ಅವರು ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಿರ್ಮಾಪಕ ಸಾಹು ಗಾರಪತಿಗೆ ಹಸ್ತಾಂತರಿಸಿದರು. ಮುಹೂರ್ತದ ಮೊದಲ ದೃಶ್ಯಕ್ಕೆ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರೆ, ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಸಂಕ್ರಾಂತಿ ಎಂಟರ್‌ಟೈನರ್
ಈ ದೃಶ್ಯದಲ್ಲಿ ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಭಾಗವಹಿಸಿದ್ದರು. ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಮೊದಲ ಶಾಟ್‌ಗೆ ಗೌರವ ನಿರ್ದೇಶನ ಮಾಡಿದ್ದು ವಿಶೇಷವಾಗಿತ್ತು. ಸದ್ಯಕ್ಕೆ #VenkyAnil5 ಮತ್ತು #NkrAR2 ಎಂಬ ತಾತ್ಕಾಲಿಕ ಹೆಸರುಗಳಿಂದ ಈ ಚಿತ್ರವನ್ನು ಕರೆಯಲಾಗುತ್ತಿದೆ. ಇದು ಅನಿಲ್ ರವಿಪುಡಿ ಶೈಲಿಯ ಪಕ್ಕಾ ಸಂಕ್ರಾಂತಿ ಎಂಟರ್‌ಟೈನರ್ ಆಗಿರಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಸಿನಿಮಾದ ಆರಂಭದಿಂದ ಕೊನೆಯವರೆಗೂ ನಗು ಮತ್ತು ಮನರಂಜನೆಗೆ ಯಾವುದೇ ಕೊರತೆ ಇರುವುದಿಲ್ಲವಂತೆ. ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ಅವರ ಈ ಹೊಸ ಕಾಂಬಿನೇಷನ್, ತೆಲುಗು ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.
ಅನಿಲ್ ರವಿಪುಡಿ ಅವರ ಹಿಟ್ ಸಿನಿಮಾಗಳ ಟ್ರ್ಯಾಕ್ ರೆಕಾರ್ಡ್, ಈ ಸ್ಟಾರ್ ಜೋಡಿ ಮತ್ತು ದೊಡ್ಡ ನಿರ್ಮಾಣ ಸಂಸ್ಥೆಗಳ ಸಹಯೋಗದಿಂದಾಗಿ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸಮೀರ್ ರೆಡ್ಡಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರತಂಡ ಸದ್ಯದಲ್ಲೇ ರೆಗ್ಯುಲರ್ ಶೂಟಿಂಗ್ ಆರಂಭಿಸಲು ಸಿದ್ಧತೆ ನಡೆಸಿದೆ.


