ನಟ ವರುಣ್ ತೇಜ್‌ಗೆ ಮೊಣಕಾಲು ಮುರಿತವಾಗಿತ್ತು. ಇದೀಗ ಸರ್ಜರಿ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. 'ಭಾರಿ' ಸಿನಿಮಾಕ್ಕಾಗಿ ಅಭ್ಯಾಸ ಮಾಡುವಾಗ ಈ ಗಾಯವಾಗಿತ್ತು ಎಂದು ಅವರ ಸಹೋದರಿ ನಿಹಾರಿಕಾ ಹೇಳಿದ್ದರು.

ಕೆಲ ದಿನಗಳ ಹಿಂದೆ ಮೊಣಕಾಲು ಮುರಿತಕ್ಕೆ ಸರ್ಜರಿ ಮಾಡಿಸಿಕೊಂಡಿದ್ದ ನಟ ವರುಣ್ ತೇಜ್, ಶನಿವಾರ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮತ್ತು ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗೆ ಮಾಹಿತಿ ನೀಡಿದ್ದಾರೆ. ತಮ್ಮ ಆರೋಗ್ಯ ವಿಚಾರಿಸಿದ ಎಲ್ಲರಿಗೂ ವರುಣ್ ಒಂದು ನೋಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸರ್ಜರಿ ಚೆನ್ನಾಗಿ ನಡೆದಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

"ಕಾಳಜಿಯಿಂದ ನನ್ನ ಆರೋಗ್ಯ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ನನಗೆ ಬಹಳ ಮುಖ್ಯ. ಸರ್ಜರಿ ಯಶಸ್ವಿಯಾಗಿದೆ, ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಸಂಪೂರ್ಣ ಶಕ್ತಿ ಮರಳಿ ಪಡೆಯುವತ್ತ ಗಮನ ಹರಿಸಿದ್ದೇನೆ. ಕಾಳಜಿ ವಹಿಸಿದ ವೈದ್ಯರಿಗೆ ನಾನು ಆಭಾರಿ. ಶೀಘ್ರದಲ್ಲೇ ಮತ್ತೆ ನಿಮ್ಮ ಮುಂದೆ ಬರುತ್ತೇನೆ... ಮೊದಲಿಗಿಂತಲೂ ಹೆಚ್ಚು ಸ್ಟ್ರಾಂಗ್ ಆಗಿ. ನಿಮ್ಮ ಪ್ರೀತಿಯ ವರುಣ್ ತೇಜ್," ಎಂದು ಅವರು ಬರೆದುಕೊಂಡಿದ್ದಾರೆ.

View post on Instagram

ವರುಣ್ ಈ ಪೋಸ್ಟ್ ಹಾಕಿದ ಕೂಡಲೇ, ಅಭಿಮಾನಿಗಳು ಕಾಮೆಂಟ್ ಸೆಕ್ಷನ್‌ನಲ್ಲಿ 'ಬೇಗ ಗುಣಮುಖರಾಗಿ' ಎಂದು ಹಾರೈಸಿದ್ದಾರೆ. "ಟೇಕ್ ಕೇರ್ ಅಣ್ಣಾ, ನೀವು ಬೇಗ ಚೇತರಿಸಿಕೊಳ್ಳಲಿ," ಎಂದು ಒಬ್ಬರು ಇನ್‌ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ವರುಣ್ ಅಣ್ಣಾ, ಬೇಗ ಹುಷಾರಾಗಿ," ಎಂದು ಇನ್ನೊಬ್ಬರು ಬರೆದಿದ್ದಾರೆ.

ವರುಣ್ ಗಾಯದ ಬಗ್ಗೆ ನಿಹಾರಿಕಾ ಕೊನಿಡೇಲಾ ಹೇಳಿದ್ದೇನು?

ಈ ವಾರದ ಆರಂಭದಲ್ಲಿ, ವರುಣ್ ಅವರ ಸಹೋದರಿ ನಿಹಾರಿಕಾ ಕೊನಿಡೇಲಾ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.ನ ವರುಣ್ ವೈದ್ಯರ ನಿಗಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಿಹಾರಿಕಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. "ನಮ್ಮ ಮುಂಬರುವ 'ಭಾರಿ' ಚಿತ್ರಕ್ಕಾಗಿ ವಾಲಿಬಾಲ್ ಅಭ್ಯಾಸ ಮಾಡುವಾಗ ನನ್ನ ಸಹೋದರನಿಗೆ ಮೊಣಕಾಲಿಗೆ ತೀವ್ರವಾದ ಗಾಯವಾಗಿತ್ತು. ಅವರಿಗೆ ಯಶಸ್ವಿಯಾಗಿ ಸರ್ಜರಿ ನಡೆದಿದೆ.

ಸದ್ಯ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ," ಎಂದು ನಿಹಾರಿಕಾ ಹೇಳಿದ್ದರು. "ಅವರು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗಿ, ಮತ್ತೆ ಆರೋಗ್ಯದಿಂದ ಇರುತ್ತಾರೆ ಎಂಬ ಭರವಸೆ ನಮಗಿದೆ. ಈ ಸಮಯದಲ್ಲಿ ಪ್ರೀತಿ, ಕಾಳಜಿ ಮತ್ತು ಬೆಂಬಲ ನೀಡಿದ ಎಲ್ಲರಿಗೂ ನಾವು ಧನ್ಯವಾದ ಹೇಳುತ್ತೇವೆ," ಎಂದು ಅವರ ಹೇಳಿಕೆ ತಿಳಿಸಿತ್ತು. ವರದಿಗಳ ಪ್ರಕಾರ, ವರುಣ್ ತಮ್ಮ ಮುಂಬರುವ 'ಭಾರಿ' ಚಿತ್ರದ ತಯಾರಿ ವೇಳೆ ಗಾಯಗೊಂಡಿದ್ದರು.