ನಟಿ ಕೃಷಿ ತಾಪಾಂಡ ಅವರ ಆಪ್ತ ಸ್ನೇಹಿತ ವೈಶಾಕ್ ಉಪಾಧ್ಯಾಯ (45) ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಮೇಘಾ ನೀಡಿದ ದೂರಿನಲ್ಲಿ ನಟಿಯ ಹೆಸರನ್ನು ಉಲ್ಲೇಖಿಸಿದ್ದು, ಅಂತ್ಯಕ್ರಿಯೆ ವೇಳೆ ನಟಿಗೆ ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಕೃಷಿ ತಾಪಾಂಡ (ಕ್ರಿಷಿ ತಾಪಾಂಡ) ಅವರ ಆಪ್ತ ಸ್ನೇಹಿತ ವೈಶಾಕ್ ಉಪಾಧ್ಯಾಯ (45) ಅವರ ಧೀಢೀರ್ ಆತ್ಮ*ತ್ಯೆ ಪ್ರಕರಣ ಶಾಕ್ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಾಗಿದ್ದು, ಮೃತರ ಪತ್ನಿ ಮೇಘಾ ನೀಡಿದ ದೂರಿನಲ್ಲಿ ನಟಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಮೃತರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕುಟುಂಬಸ್ಥರು ವೈಶಾಕ್ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ: ನಟಿಗೆ ಮೃತದೇಹ ವೀಕ್ಷಣೆಗೂ ಸಿಗದ ಅವಕಾಶ
ವೈಶಾಕ್ ಅವರ ನಿಗೂಢ ಸಾವಿನ ಬಳಿಕ ಕುಟುಂಬಸ್ಥರು ಬೆಂಗಳೂರಿನ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ಪೂರೈಸಿದರು. ಗೆಳೆಯನ ಅಂತಿಮ ದರ್ಶನ ಪಡೆಯಲು ನಟಿ ಕೃಷಿ ತಾಪಾಂಡ ಅವರು ಸ್ಮಶಾನಕ್ಕೆ ಆಗಮಿಸಿದ್ದರು. ಆದರೆ ವೈಶಾಕ್ ಅವರ ಕುಟುಂಬಸ್ಥರು ನಟಿ ಬಂದು ಅಂತಿಮ ದರ್ಶನ ಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮೃತದೇಹದ ವೀಕ್ಷಣೆಗೂ ಅವಕಾಶ ನೀಡಲಿಲ್ಲ.
ಈ ಸಂದರ್ಭದಲ್ಲಿ ವೈಶಾಕ್ ಅವರ ಮಾವ "ನೀನು ಇಲ್ಲಿಗೆ ಬರಬೇಡ" ಎಂದು ನಟಿಗೆ ನೇರವಾಗಿಯೇ ಹೇಳಿ ಅಲ್ಲಿಂದ ಕಳುಹಿಸಿದರು. ಇದರಿಂದ ತೀವ್ರ ಭಾವುಕರಾದ ಕೃಷಿ ತಾಪಾಂಡ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕಣ್ಣೀರು ಹಾಕುತ್ತಲೇ ಸ್ಥಳದಿಂದ ನಿರ್ಗಮಿಸಿದರು.
ಪತ್ನಿ ಮೇಘಾ ನೀಡಿದ ದೂರಿನಲ್ಲಿ ನಟಿ ಕೃಷಿ ಜೊತೆಗಿನ ನಂಟು!
ಮೃತ ವೈಶಾಕ್ ಪತ್ನಿ ಮೇಘಾ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದು, ತಮ್ಮ ಪತಿಯ ಸಾವಿನ ಬಗ್ಗೆ ಸದ್ಯಕ್ಕೆ ಯಾರ ಮೇಲೆಯೂ ಅನುಮಾನ ಇಲ್ಲ ಎಂದು ಹೇಳಿದ್ದಾರೆ. ಆದರೆ, ದೂರಿನಲ್ಲಿ ನಟಿ ಕೃಷಿ ತಾಪಾಂಡ ಅವರೊಂದಿಗಿನ ಸಂಬಂಧದ ಕುರಿತು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:
ನಟಿ ಕೃಷಿ ತಾಪಾಂಡ ಮತ್ತು ತನ್ನ ಪತಿ ವೈಶಾಕ್ ನಡುವೆ ಅನೈತಿಕ ಸಂಬಂಧ ಇರುವುದರ ಬಗ್ಗೆ ಯೂಟ್ಯೂಬ್ ವಾಹಿನಿಯೊಂದರಲ್ಲಿ ಬಂದ ವಿಡಿಯೋ ನೋಡಿ ತಮಗೆ ವಿಷಯ ತಿಳಿಯಿತು ಎಂದು ಪತ್ನಿ ಹೇಳಿದ್ದಾರೆ. ಈ ವಿಚಾರವಾಗಿ ಪತ್ನಿ ಮೇಘಾ ಹಲವು ಬಾರಿ ನಟಿಯ ಸಹವಾಸ ಬಿಡುವಂತೆ ವೈಶಾಕ್‌ಗೆ ತಿಳಿಹೇಳಿದ್ದರು. ಬಿಡುವುದಾಗಿ ಒಪ್ಪಿಕೊಂಡಿದ್ದ ವೈಶಾಕ್, ಆದರೆ ಕೃಷಿ ಜೊತೆಗಿನ ಸ್ನೇಹವನ್ನು ಮುಂದುವರಿಸಿದ್ದರು. ಇದೇ ತರಹದ ಕೌಟುಂಬಿಕ ಕಲಹಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ವೈಶಾಕ್ ಪತ್ನಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಏನೇ ಹೇಳಬೇಕಿದ್ದರೂ ಕೇವಲ ವಾಟ್ಸಾಪ್ ಮೂಲಕ ಮೆಸೇಜ್ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿಂದ ಅವರು ಮನೆಗೂ ಬರುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ರಾತ್ರಿ ಏನಾಯ್ತು?
ದೂರಿನ ಪ್ರಕಾರ, ಘಟನೆ ನಡೆದ ಹಿಂದಿನ ರಾತ್ರಿ ಕೂಡ ವೈಶಾಕ್ ತಮ್ಮ ಪತ್ನಿ ಮೇಘಾಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿ, "ಮಗ ಮನೆಗೆ ಬಂದನಾ?" ಎಂದು ವಿಚಾರಿಸಿದ್ದರು. ಅದಕ್ಕೆ ಪತ್ನಿ "ಬಂದಿದ್ದಾನೆ" ಎಂದು ಮರುಉತ್ತರ ನೀಡಿದ್ದರು. ಆದರೆ, ರಾತ್ರಿ ಸುಮಾರು 11:30ರ ವೇಳೆಗೆ ಆರ್.ಆರ್. ನಗರ ಪೊಲೀಸರು ವೈಶಾಕ್ ಅವರ ಮಾವನವರಿಗೆ (ಮೇಘಾ ಅವರ ತಂದೆ) ಕರೆ ಮಾಡಿ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ನೋಡಿದಾಗ, ವೈಶಾಕ್ ಅವರು ಬೆಡ್ ಮೇಲಿಂದ ಕೆಳಗೆ ಅಂಗಾತ ಬಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ವೇಳೆ ಘಟನಾ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸ್ವತಃ ನಟಿ ಕೃಷಿ ತಾಪಾಂಡ ಅವರೇ ಕುಟುಂಬಸ್ಥರಿಗೆ ಸಾವಿನ ವಿಚಾರವನ್ನು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ.
16 ವರ್ಷಗಳ ದಾಂಪತ್ಯ ಜೀವನಕ್ಕೆ ದುರಂತ ಅಂತ್ಯ
ಮೃತ ವೈಶಾಕ್ ಹಾಗೂ ಮೇಘಾ ಅವರಿಗೆ ಕಳೆದ 2010ರ ಅಕ್ಟೋಬರ್‌ನಲ್ಲಿ ವಿವಾಹವಾಗಿತ್ತು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಸುದೀರ್ಘ 16 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ವೈಶಾಕ್, ಕೇವಲ 45ನೇ ವಯಸ್ಸಿಗೆ ಈ ರೀತಿ ಆತ್ಮಹತ್ಯೆಯ ಹಾದಿ ಹಿಡಿದಿರುವುದು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಸದ್ಯಕ್ಕೆ ಸಾವಿನ ಹಿಂದೆ ಯಾವುದೇ ವ್ಯಕ್ತಿಯ ನೇರ ಕೈವಾಡದ ಬಗ್ಗೆ ಅನುಮಾನ ಇಲ್ಲ ಎಂದು ಪತ್ನಿ ದೂರಿನಲ್ಲಿ ಹೇಳಿದ್ದರೂ, ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ನಟಿ ಕೃಷಿ ತಾಪಾಂಡ ಹಾಗೂ ವೈಶಾಕ್ ನಡುವಿನ ನಂಟಿನ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.


