ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ಯಶ್‌ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಪ್ರಿಯರಲ್ಲೂ ಟ್ರೇಲರ್‌ ಭಾರೀ ಕುತೂಹಲ ಮೂಡಿಸಿದೆ.

ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್‌ ಸಾರಥ್ಯದ ಈ ಗ್ಯಾಂಗ್‌ಸ್ಟರ್‌ ಡ್ರಾಮಾದ ಟ್ರೇಲರ್‌ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಯಶ್‌ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಪ್ರಿಯರಲ್ಲೂ ಭಾರೀ ಕುತೂಹಲ ಮೂಡಿಸಿದೆ. ಅಧಿಕಾರ, ಪ್ರೀತಿ, ದ್ರೋಹ ಹಾಗೂ ಅಪರಾಧದ ಜಗತ್ತನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಟಾಕ್ಸಿಕ್‌’ನ ಟ್ರೇಲರ್‌ ಆರಂಭದಿಂದ ಕೊನೆಯವರೆಗೂ ಡಾರ್ಕ್‌ ಹಾಗೂ ಅಬ್ಬರದ ವಾತಾವರಣವನ್ನು ಕಟ್ಟಿಕೊಡುತ್ತದೆ. ಸ್ಟೈಲಿಶ್‌ ಆ್ಯಕ್ಷನ್‌ ದೃಶ್ಯಗಳು, ಡಾರ್ಕ್‌ ರೊಮ್ಯಾನ್ಸ್‌ ಮತ್ತು ಕ್ಷಣಕ್ಷಣಕ್ಕೂ ಬದಲಾಗುವ ಪಾತ್ರಗಳು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿವೆ.

‘ಟಾಕ್ಸಿಕ್‌’ನಲ್ಲಿ ಎಲ್ಲವೂ ಅಂದುಕೊಂಡಂತೆ ಇಲ್ಲ!

ಟ್ರೇಲರ್‌ನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ನಿಗೂಢವಾಗಿಯೇ ಉಳಿದಿದೆ. ನಯನತಾರಾ ‘ಗಂಗಾ’, ಕಿಯಾರಾ ಅಡ್ವಾಣಿ ‘ನಾಡಿಯಾ’, ಹುಮಾ ಖುರೇಷಿ ‘ಎಲಿಜಬೆತ್‌’, ರುಕ್ಮಿಣಿ ವಸಂತ್‌ ‘ಮೆಲಿಸ್ಸಾ’ ಹಾಗೂ ತಾರಾ ಸುತಾರಿಯಾ ‘ರೆಬೆಕ್ಕಾ’ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಪಾತ್ರಗಳು ಸಾಮಾನ್ಯ ನಾಯಕಿಯರಂತೆ ಕಾಣಿಸುವುದಿಲ್ಲ. ಅವರ ನಡೆ, ವರ್ತನೆ ಹಾಗೂ ಯಶ್‌ ಪಾತ್ರದೊಂದಿಗಿನ ಸಂಬಂಧಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ. ಟ್ರೇಲರ್‌ ಮುಂದುವರಿದಂತೆ ಪ್ರತಿಯೊಬ್ಬ ಪಾತ್ರವೂ ತನ್ನದೇ ಆದ ರಹಸ್ಯವನ್ನು ಹೊತ್ತುಕೊಂಡಿರುವಂತೆ ಭಾಸವಾಗುತ್ತದೆ.

ಯಶ್‌ ದ್ವಿಪಾತ್ರ; ‘ರಾಯ’ನಾ? ‘ರುಮಿ’ನಾ?

‘ಟಾಕ್ಸಿಕ್‌’ನಲ್ಲಿ ಯಶ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಟ್ರೇಲರ್‌ನ ಮತ್ತೊಂದು ಪ್ರಮುಖ ಅಂಶ. ರಾಯ ಮತ್ತು ರುಮಿ ಅಲಿಯಾಸ್‌ ‘ಟಿಕೆಟ್‌’ ಎಂಬ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಪದೇಪದೆ ಬಾಲಕನೊಬ್ಬನ ದೃಶ್ಯಗಳು ಕಾಣಿಸುತ್ತವೆ. ಆ ಬಾಲಕನಿಗೂ ಯಶ್‌ ಪಾತ್ರಗಳಿಗೂ ಏನು ಸಂಬಂಧ? ಆ ಬಾಲ್ಯದ ನೆನಪುಗಳು ಮುಂದೆ ನಡೆಯುವ ಕಥೆಯೊಂದಿಗೆ ಹೇಗೆ ಬೆಸೆದುಕೊಳ್ಳುತ್ತವೆ? ಎಂಬ ಪ್ರಶ್ನೆಗಳಿಗೆ ಟ್ರೇಲರ್‌ ನೇರ ಉತ್ತರ ನೀಡಿಲ್ಲ. ಆದರೆ ಈ ಎಲ್ಲ ದೃಶ್ಯಗಳ ನಡುವೆ ‘ಟಾಕ್ಸಿಕ್‌’ ಒಂದು ಸಾಮಾನ್ಯ ಗ್ಯಾಂಗ್‌ಸ್ಟರ್‌ ಕಥೆಯಲ್ಲ ಎಂಬ ಸುಳಿವು ಮಾತ್ರ ಸ್ಪಷ್ಟವಾಗಿ ಸಿಗುತ್ತದೆ.

ಅಧಿಕಾರ, ಪ್ರೀತಿ ಮತ್ತು ದ್ರೋಹದ ಆಟ!

‘ಟಾಕ್ಸಿಕ್‌’ನ ಕಥೆ ಅಧಿಕಾರ, ಪ್ರೀತಿ ಮತ್ತು ದ್ರೋಹದ ಸುತ್ತ ಸುತ್ತುತ್ತದೆ ಎಂಬುದನ್ನು ಟ್ರೇಲರ್‌ ಸೂಚಿಸುತ್ತದೆ. ಅಪರಾಧದ ಕರಾಳ ಜಗತ್ತಿನಲ್ಲಿ ರಾಯನ ಸಂಬಂಧಗಳು ಯಾವ ತಿರುವು ಪಡೆಯುತ್ತವೆ ಎಂಬುದು ಚಿತ್ರದ ಪ್ರಮುಖ ಕುತೂಹಲವಾಗಿದೆ. ವಿಶೇಷವಾಗಿ ‘ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಎಂಬ ಟ್ಯಾಗ್‌ಲೈನ್‌ಗೆ ತಕ್ಕಂತೆ, ಇಲ್ಲಿ ಎಲ್ಲವೂ ಕಾಲ್ಪನಿಕ ಕಥೆಯಂತೆ ಕಾಣಿಸಿದರೂ ಅದರೊಳಗೆ ಹಿಂಸೆ, ಅಧಿಕಾರದ ಹೋರಾಟ ಮತ್ತು ಸಂಕೀರ್ಣ ಸಂಬಂಧಗಳ ಕರಾಳ ಮುಖವಿದೆ. ಟ್ರೇಲರ್‌ನಲ್ಲಿ ಕಥೆಯ ಪ್ರಮುಖ ಅಂಶಗಳನ್ನು ಬಹಿರಂಗಪಡಿಸದೇ ಕುತೂಹಲವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ರಾಯನ ಜೀವನದಲ್ಲಿ ಕಾಣಿಸಿಕೊಳ್ಳುವ ‘ಲೇಡೀಸ್‌’ ಜೊತೆಗಿನ ಆತನ ಸಂಬಂಧಗಳ ಬಗ್ಗೆ ಮಾತ್ರ ಹಲವು ಸುಳಿವುಗಳನ್ನು ನೀಡಲಾಗಿದೆ.

ಆ್ಯಕ್ಷನ್‌ ಜೊತೆ ರಕ್ತಪಾತವೂ ಜೋರು!

‘ಟಾಕ್ಸಿಕ್‌’ ಟ್ರೇಲರ್‌ನಲ್ಲಿ ಹೈ-ಎಂಡ್‌ ಸ್ಟೈಲಿಶ್‌ ಆ್ಯಕ್ಷನ್‌ ದೃಶ್ಯಗಳು ಗಮನ ಸೆಳೆಯುತ್ತವೆ. ಕ್ರೈಮ್‌ ಜಗತ್ತಿನ ಹಿಂಸಾತ್ಮಕ ಮುಖವನ್ನು ತೋರಿಸುವ ಹಲವು ದೃಶ್ಯಗಳು ಟ್ರೇಲರ್‌ನಲ್ಲಿವೆ. ಕೆಲವು ದೃಶ್ಯಗಳು ರಕ್ತಪಾತದಿಂದ ಕೂಡಿದ್ದು, ಸಿನಿಮಾ ಎಷ್ಟು ಡಾರ್ಕ್‌ ಆಗಿರಲಿದೆ ಎಂಬುದಕ್ಕೆ ಟ್ರೇಲರ್‌ ಸುಳಿವು ನೀಡಿದೆ. ಯಶ್‌ ಅವರ ವಿಭಿನ್ನ ಲುಕ್‌ಗಳು ಹಾಗೂ ಪಾತ್ರದ ಬಾಡಿ ಲ್ಯಾಂಗ್ವೇಜ್‌ ಕೂಡ ಗಮನ ಸೆಳೆಯುತ್ತವೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ‘ಟಾಕ್ಸಿಕ್‌’

‘ಟಾಕ್ಸಿಕ್‌’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್‌ ಆಗಿ ಸಿನಿಮಾ ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಮಾನ್ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ವೆಂಕಟ್‌ ಕೆ. ನಾರಾಯಣ ಮತ್ತು ಯಶ್‌ ನಿರ್ಮಿಸಿದ್ದಾರೆ.

ಮೊದಲ ಲುಕ್‌ನಿಂದಲೇ ವಿವಾದ!

‘ಟಾಕ್ಸಿಕ್‌’ ಸಿನಿಮಾದ ಮೊದಲ ಲುಕ್‌ ವಿಡಿಯೋ ಯಶ್‌ ಅವರ ಹುಟ್ಟುಹಬ್ಬದಂದು ಜನವರಿ 8ರಂದು ಬಿಡುಗಡೆಯಾಗಿತ್ತು. ಆಕ್ಷನ್‌ ದೃಶ್ಯಗಳ ನಡುವೆ ಕಾರಿನೊಳಗಿನ ಬೋಲ್ಡ್‌ ಸನ್ನಿವೇಶ ಹಾಗೂ ಸ್ಮಶಾನದ ಹಿನ್ನೆಲೆಯಲ್ಲಿನ ಗುಂಡಿನ ದಾಳಿಯ ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಕ್ರೈಸ್ತ ಸಮುದಾಯದ ಸಂಘಟನೆ ಹಾಗೂ ರಾಜ್ಯ ಮಹಿಳಾ ಆಯೋಗದಿಂದಲೂ ದೂರುಗಳು ಬಂದಿದ್ದವು. ಚಿತ್ರತಂಡದ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು ಎನ್ನಲಾಗಿತ್ತು. ಇದೇ ವೇಳೆ ಅನುರಾಗ್‌ ಕಶ್ಯಪ್‌ ಹಾಗೂ ರಾಮ್‌ ಗೋಪಾಲ್‌ ವರ್ಮಾ ಸೇರಿದಂತೆ ಚಿತ್ರರಂಗದ ಕೆಲವರು ‘ಟಾಕ್ಸಿಕ್‌’ ತಂಡವನ್ನು ಬೆಂಬಲಿಸಿದ್ದರು.

ಆಗಸ್ಟ್‌ 26ಕ್ಕೆ ‘ಟಾಕ್ಸಿಕ್‌’ ರಿಲೀಸ್

ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ನಲ್ಲಿ ಯಶ್‌ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್‌ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಧಿಕಾರ, ಅಪರಾಧ, ಪ್ರೀತಿ ಮತ್ತು ದ್ರೋಹದ ಈ ಡಾರ್ಕ್‌ ಜಗತ್ತು ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದನ್ನು ತಿಳಿಯಲು ಆಗಸ್ಟ್‌ 26ರವರೆಗೆ ಕಾಯಬೇಕಿದೆ.