ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಕಾಣಿಸಿಕೊಂಡ ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್, ಬೋಲ್ಡ್ ದೃಶ್ಯಗಳಿಂದಾಗಿ ಭಾರೀ ಸದ್ದು ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಅವರ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಬೆಂಗಳೂರು (ಜ.9): ರಾಕಿಂಗ್ ಸ್ಟಾರ್ ಜನ್ಮದಿನದಂದು ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಯಾರ ಬಗ್ಗೆ ಹೆಚ್ಚಿನ ಚರ್ಚೆ ಆಗಿದ್ಯೋ ಇಲ್ಲವೋ ಗೊತ್ತಿಲ್ಲ. ಆದರೆ, ಉಕ್ರೇನಿಯನ್ ಮೂಲದ ನಟಿ ನಟಾಲಿ ಬರ್ನ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಟೀಸರ್‌ನಲ್ಲಿ ಯಶ್ ಜೊತೆ ಕಾರ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ ನಟಾಲಿ ಬರ್ನ್. ಟೀಸರ್ ರಿಲೀಸ್ ಆದ ಕೆಲವೇ ಕ್ಷಣದಲ್ಲಿ ಆ ನಟಿ ಯಾರು ಅನ್ನೋದರ ಬಗ್ಗೆ ಹುಡುಕಾಟ ಶುರುವಾಗಿ ಒಂದು ಗಂಟೆಯ ಒಳಗಾಗಿ ಆಕೆಯ ಕುಲ-ಗೋತ್ರ ಎಲ್ಲಾ ನೆಟ್ಟಿಗರು ಜಾಲಾಡಿದ್ದರು. ಇದರ ಪರಿಣಾಮ ಆಕೆಯ ಇನ್ಸ್‌ಟಾಗ್ರಾಮ್ ಮೇಲೆ ಆಗಿದೆ. ಟೀಸರ್ ರಿಲೀಸ್ ಆಗುವ ಮುನ್ನ 1.90ದ ಆಸುಪಾಸಿನಲ್ಲಿದ್ದ ಆಕೆಯ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಟೀಸರ್ ರಿಲೀಸ್ ಆದ ಒಂದೇ ದಿನದಲ್ಲಿ 2.20 ಲಕ್ಷಕ್ಕ ಏರಿದೆ. ಅಂದರೆ ಒಂದೇ ದಿನದಲ್ಲಿ 30 ಸಾವಿರ ಫಾಲೋವರ್ಸ್ ಆಕೆಯ ಪೇಜ್‌ಅನ್ನು ಲೈಕ್ ಮಾಡಿದ್ದಾರೆ.
ಗೀತು ಮೋಹನ್ ದಾಸ್ ಅವರ ಟಾಕ್ಸಿಕ್ ಚಿತ್ರದ ಟೀಸರ್ ಸಾಕಷ್ಟು ವಿವಾದ ಮತ್ತು ಚರ್ಚೆಗಳನ್ನು ಸೃಷ್ಟಿಸಿದೆ. ಯಶ್ ಟೀಸರ್‌ನಲ್ಲಿ ಕಾಣಿಸಿಕೊಂಡ ನಟಿ ಯಾರು ಅನ್ನೋದರ ಬಗ್ಗೆ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದರು. ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್ ಟೀಸರ್ ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಾಲಿ ಬರ್ನ್ ಕೇವಲ ನಟಿ ಮಾತ್ರವಲ್ಲ, ಮಾಡೆಲ್, ಚಿತ್ರಕಥೆಗಾರ್ತಿ ಮತ್ತು ನಿರ್ಮಾಪಕಿ ಕೂಡ. ನಟಾಲಿ ಟಾಕ್ಸಿಕ್ ಜೊತೆಗೆ ಗೂಗಲ್ ಟ್ರೆಂಡಿಂಗ್ ಪಟ್ಟಿಯಲ್ಲಿದ್ದಾರೆ. ಟಾಕ್ಸಿಕ್ ನಟಾಲಿ ಅವರ ಮೊಟ್ಟಮೊದಲ ಭಾರತೀಯ ಚಿತ್ರ.
ಮಾರ್ಷಲ್ ಆರ್ಟ್ಸ್‌ನಲ್ಲೂ ಫೇಮಸ್
ನಟಾಲಿ 2006 ರಿಂದ ಚಲನಚಿತ್ರೋದ್ಯಮ ಮತ್ತು ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಾಡೆಲಿಂಗ್ ಮೂಲಕ ಹಾಲಿವುಡ್‌ಗೆ ಪ್ರವೇಶಿಸಿದರು. ನಟಾಲಿ 'ದಿ ಎಕ್ಸ್‌ಪೆಂಡಬಲ್ಸ್ 3', 'ದಿ ಕಮ್‌ಬ್ಯಾಕ್ ಟ್ರಯಲ್', 'ಟಿಲ್ ಡೆತ್ ಡು ಅಸ್ ಪಾರ್ಟ್', 'ದಿ ಲಾಸ್ಟ್ ರಿಡೆಂಪ್ಶನ್', ಮತ್ತು 'ಐಸ್ ಇನ್ ದಿ ಟ್ರೀಸ್' ಸೇರಿದಂತೆ ಹಲವು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 7 ಹೆವೆನ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಕಂಪನಿಯನ್ನು ಸಹ ಹೊಂದಿದ್ದಾರೆ. ಮಾಡೆಲಿಂಗ್ ಜೊತೆಗೆ, ನಟಾಲಿ ವೃತ್ತಿಪರ ಬ್ಯಾಲೆ ನರ್ತಕಿ. ಅವರು ಸಮರ ಕಲೆಗಳಲ್ಲಿಯೂ ಪ್ರವೀಣರು. ಆಕ್ಷನ್ ಥ್ರಿಲ್ಲರ್ ಚಿತ್ರಗಳ ಭಾಗವಾಗಿರುವ ನಟಾಲಿ ಅವರ ಪಾತ್ರವರ್ಗವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
ಟಾಕ್ಸಿಕ್ ಚಿತ್ರದ ನಿರ್ಮಾಪಕರು, ಯಶ್ ಜನ್ಮದಿನದ ಸಂಭ್ರಮಕ್ಕೆ ಟೀಸರ್ ಬಿಡುಗಡೆ ಮಾಡಿದರು. ಈ ಟೀಸರ್ ಆಕ್ಷನ್-ಪ್ಯಾಕ್ಡ್ ದೃಶ್ಯಗಳು ಮತ್ತು ಹಾಟ್ ದೃಶ್ಯಗಳನ್ನು ಒಳಗೊಂಡಿದೆ. ಸ್ಮಶಾನದ ಮೌನದಿಂದ ಪ್ರಾರಂಭವಾಗುವ ಟೀಸರ್, ಶೂಟಿಂಗ್ ಮತ್ತು ದಾಳಿಗಳ ಮೂಲಕ ವೇಗವಾಗಿ ಚಲಿಸುತ್ತದೆ. ಟೀಸರ್ ತುಂಬಾ ಬೋಲ್ಡ್ ದೃಶ್ಯಗಳನ್ನು ಸಹ ಒಳಗೊಂಡಿದೆ. ಈ ದೃಶ್ಯಗಳಲ್ಲಿ ನಟಾಲಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ, ಈ ದೃಶ್ಯಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಗೀತು ಮೋಹನ್‌ದಾಸ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.
ಮಾರ್ಚ್ 19ಕ್ಕೆ ಟಾಕ್ಸಿಕ್ ರಿಲೀಸ್
ಕೆಜಿಎಫ್ 2 ರ ಬ್ಲಾಕ್ಬಸ್ಟರ್ ಯಶಸ್ಸಿನ ನಾಲ್ಕು ವರ್ಷಗಳ ನಂತರ ಯಶ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 'ಮೂಥೋನ್' ಚಿತ್ರದ ನಂತರ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿರುವ ಸಿನಿಮಾ ಟಾಕ್ಸಿಕ್. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಇತರರು ಸಹ ಚಿತ್ರದಲ್ಲಿದ್ದಾರೆ. ಈ ಚಿತ್ರ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಚಿತ್ರಕಥೆಯನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಬರೆದಿದ್ದಾರೆ. ಛಾಯಾಗ್ರಹಣ ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಅವರದ್ದಾಗಿದೆ.



