Asianet Suvarna News Asianet Suvarna News

ಜೋಗಿ ಪ್ರಕಾರ KGF ನೋಡಲು 10 ಕಾರಣಗಳು...

ಈಗ ಎಲ್ಲೆಡೆ ಕೆಜಿಎಫ್‌ನದ್ದೇ ಹವಾ. ಎಲ್ಲರ ಬಾಯಲ್ಲೂ ರಾಕಿಂಗ್ ಸ್ಟಾರ್ ಯಶ್ ಚಿತ್ರದ ಮಾತು. ಅಷ್ಟಕ್ಕೂ KGF ಚಿತ್ರವನ್ನು ಏಕೆ ನೋಡಬೇಕು. ಕನ್ನಡದ ಹೆಸರಾಂತ ಲೇಖಕ ಜೋಗಿ ನೀಡುವ ಕಾರಣಗಳಿವು...

Top 10 reasons to watch Yash Kannada movie KGF
Author
Bengaluru, First Published Dec 24, 2018, 6:31 PM IST

- ಜೋಗಿ

ನಿನ್ನೆ ಮಗಳು ಮನೆ ತುಂಬ ಈಫ್ ಯೂ ಆರ್ ಬ್ಯಾಡ್, ಐ ಯಾಮ್ ಯುವರ್ ಡ್ಯಾಡ್ ಅಂತ ಹೇಳಿಕೊಂಡು ಸಂಭ್ರಮದಿಂದ ಓಡಾಡುವುದ ಕಂಡಾಗ ಸಂತೋಷವಾಯಿತು. ಅವಳಿಗೀಗ ಹದಿಮೂರು. ಅವಳ ವಯಸ್ಸಿನಲ್ಲಿ ನಾನು ವಿಷ್ಣುವರ್ಧನ್ ಸಿನಿಮಾಗಳ ಡೈಲಾಗು ಹೇಳಿಕೊಂಡು ಓಡಾಡುತ್ತಿದ್ದೆ. ಆ ವಯಸ್ಸಲ್ಲಿ ಮಕ್ಕಳು ಇರಬೇಕಾದದ್ದು ಹಾಗೆಯೇ. ಅವರು ಭಯಂಕರ ಬುದ್ಧಿವಂತರಂತೆ ವರ್ತಿಸಿದರೆ ಗಾಬರಿಯಾಗುತ್ತದೆ. ಮಗಳು ಮತ್ತು ಅವಳ ಗೆಳತಿ ಕೆಜಿಎಫ್ ಸಿನಿಮಾ ನೋಡಿ ಇಡೀ ದಿನ ಖುಷಿ ಖುಷಿಯಾಗಿದ್ದರು. ನಾನು ಕೂಡ ಅಂಥದ್ದೇ ಖುಷಿಯಲ್ಲಿದ್ದೆ.

ಹೇಳಿ ಕೇಳಿ ನಾನೇನೂ ಅಂಥ ಬುದ್ಧಿವಂತನಲ್ಲವೇ ಅಲ್ಲ. ಅದರಲ್ಲೂ ಸಿನಿಮಾಗಳ ಮಾತು ಬಂದಾಗ ನನ್ನ ಫೇವರಿಟ್ ಅಂದರೆ ಜೇಮ್ಸ್ ಬಾಂಡ್. ಹಾಗೆಯೇ ಮೆಕೆನ್ನಾಸ್ ಗೋಲ್ಡ್, ರೈಡರ್ಸ್ ಆಫ್ ದಿ ಲಾಸ್ಟ್ ಆರ್ಕ್, ಈಗಲ್ ಹ್ಯಾಸ್ ಲ್ಯಾಂಡೆಡ್ ಹೀಗೆ ಒಂದು ಕಾಲದಲ್ಲಿ ನೋಡಿ ಮರುಳಾದ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಸಿನಿಮಾ ಮೈಮರೆಸಬೇಕು ಅನ್ನುವುದೇ ನನ್ನಾಸೆ.  ಇದನ್ನು ಒಪ್ಪದವರ ಜೊತೆ ನನ್ನ ತಕರಾರು, ವಾದ, ಜಗಳ ಇಲ್ಲವೇ ಇಲ್ಲ. ಅದು ಅವರವರ ಇಷ್ಟ. ನನ್ನಂತೆಯೇ ಸಿನಿಮಾ ನೋಡುವ ಹುಲುಮಾನವರಿಗಾಗಿ ಈ ಟಿಪ್ಪಣಿ. 

Top 10 reasons to watch Yash Kannada movie KGF

1. ನಿರ್ದೇಶಕ ಪ್ರಶಾಂತ್ ನೀಲ್ ನನ್ನನ್ನು ಈ ಜಗತ್ತು ಮರೆಯುವಂತೆ ಮಾಡಿ, ಮತ್ತೊಂದು ನಿಗೂಢ ಲೋಕಕ್ಕೆ ಕರೆದೊಯ್ದರು. ಅಲ್ಲಿನ ಕಳ್ಳರು, ಕೊಲೆಗಡುಕರು, ಕಡಲ್ಗಳ್ಳರಂಥವರನ್ನೆಲ್ಲ ಕಂಡು ಖುಷಿಯಾಯಿತು. ಗಣಿಯಲ್ಲಿ ದುಡಿಯುವವರ ಜಗತ್ತು ನೋಡಿ ಮನಸ್ಸಿಗೆ ಹಿಂಸೆಯಾಯಿತು. ಅದನ್ನು ಪ್ರತಿಭಟಿಸುವವನು ಹುಟ್ಟಿದಾಗ ರೋಮಾಂಚನವಾಯಿತು.

2. ಪ್ರಶಾಂತ್ ನೀಲ್ ಅವರು ಕೆಜಿಎಫ್ ಕಥೆಯನ್ನು ಯಾವುದೇ ಅವಸರವಿಲ್ಲದೇ ಕತೆ ಹೇಳುತ್ತಾರೆ. ನನ್ನನ್ನು ಒಪ್ಪಿಸಬೇಕು, ಬೇಗ ಬೇಗ ಹೇಳಿ ಮುಗಿಸಬೇಕು ಅನ್ನುವ ಯಾವ ಆತುರವೂ ಅವರಿಗಿಲ್ಲ. ಕತೆ ಹೇಳಲು ಅವರು ಬಳಸಿಕೊಂಡಿರುವ ತಂತ್ರವೂ ಸೊಗಸಾಗಿದೆ.

3. ಒಂದು ಕವನ, ಒಬ್ಬ ಹುಚ್ಚನ ಸ್ವಗತ, ಮತ್ಯಾವುದೋ ಪುಸ್ತಕದ ಒಂದು ಸಾಲು, ಹಿನ್ನೆಲೆಯಲ್ಲಿ ಕತೆ ಹೇಳುವ ಸೂತ್ರಧಾರ- ಹೀಗೆ ಕತೆ ಹೇಳಲು ಎಲ್ಲಾ ಮಾಧ್ಯಮಗಳನ್ನೂ ಯಾವ ಹಿಂಜರಿಕೆಯೂ ಇಲ್ಲದೇ ಬಳಸಿಕೊಳ್ಳುತ್ತಾರೆ.

4. ಪ್ರಶಾಂತ್ ನೀಲ್ ಕತೆ ಹೇಳುವುದಿಲ್ಲ, ಕತೆಯನ್ನು ಅನುಭವಿಸಲು ಬಿಡುತ್ತಾರೆ. ಯಾವುದನ್ನೂ ಅತಿಯಾಗಿ ವಿವರಿಸುವುದಿಲ್ಲ. ಅಲ್ಲಿ ಬರುವ ನೂರಾರು ಪಾತ್ರಗಳು ನಮ್ಮೆದುರಿಗೆ ಬಂದು ಮಾತಾಡಿ, ಇದ್ದು ಹೋಗುತ್ತವೆ. ಅವುಗಳನ್ನು ನಾವೇ ಅರ್ಥಮಾಡಿಕೊಳ್ಳಬೇಕು. ಅದೊಂದು ಜಗತ್ತು.  ಆ ಜಗತ್ತಿನೊಳಗೆ ಬದುಕಿದರಷ್ಟೇ ಚಿತ್ರ ಆಪ್ತವಾಗುತ್ತದೆ.

ಬಾಲಿವುಡ್ ಹುಡುಗಿಯೂ ಕೆಜಿಎಫ್‌ಗೆ ಫಿದಾ

5. ಹಿರಿಯ ಪತ್ರಕರ್ತ ಆನಂದ್ ಹೇಳುವ ಕತೆ ಕೇಳುತ್ತಾ ಕೇಳುತ್ತಾ, ಕಾಫಿ ಕೊಡುವ ಅಟೆಂಡರ್ ಇದ್ದಕ್ಕಿದ್ದಂತೆ ಎಕ್ಸೈಟ್ ಆಗುತ್ತಾನೆ. ಅವನು ಕಾಮನ್ ಆಡಿಯೆನ್ಸ್. ಆ ಅಟೆಂಡರ್ ಥರ ಎಕ್ಸೈಟ್ ಆಗದೇ, ಪತ್ರಕರ್ತೆಯ ಥರ ತರ್ಕಬದ್ಧವಾಗಿ ಪ್ರಶ್ನೆ ಕೇಳುತ್ತಾ ಕೂರಬೇಡಿ ಅನ್ನುವ ಸೂಚನೆ ಅಲ್ಲೇ ಇದೆ.

6. ಇಡೀ ಸಿನಿಮಾಗಳಲ್ಲಿ ಹೆಚ್ಚು ಮಾತುಗಳಿಲ್ಲ. ಎಲ್ಲವೂ ಮೌನದಲ್ಲಿಯೇ ನಡೆಯುತ್ತದೆ. ಸಂಭಾಷಣೆಗಳನ್ನು ಬರೆದರೆ ಐದಾರು ಪುಟಗಳಲ್ಲಿ ಮುಗಿದುಹೋದೀತು. ಮೌನ ಅರ್ಥವಾಗಬೇಕಾದರೆ ಅದರೊಳಗೆ ಬೆರೆಯಬೇಕು.

7. ಸಿನಿಮಾದಲ್ಲಿ ಹಿಂಸೆ ಇದೆ ನಿಜ. ಯಾಕೆಂದರೆ ಅವರು ಹೇಳಹೊರಟಿರುವುದೇ ಹಿಂಸೆಯ ಕತೆಯನ್ನು. ಉದಾಹರಣೆಗೆ, ಭಾರತದ ವಿಭಜನೆಯ ಕತೆ ಹೇಳುವಾಗ ಹಿಂಸೆ ತೋರಿಸಿದ್ದಾರೆ ಅನ್ನಲಾಗುತ್ತದೆಯಾ? ವಿಭಜನೆಯ ಸಮಯದಲ್ಲಿ ನಡೆದದ್ದು ಅದೇ ಅಲ್ಲವೇ.

8. ಪ್ರಶಾಂತ್ ನೀಲ್ ಎಲ್ಲಾ ಫಾರ್ಮುಲಾಗಳನ್ನೂ ಮುರಿದಿದ್ದಾರೆ. ಎರಡು ಹಾಡು, ಒಂದು ಪ್ರೇಮಗೀತೆ, ಒಂದು ಕಾಮಿಡಿ ಟ್ರ್ಯಾಕು- ಎನ್ನುವ ಸಿದ್ಧಸೂತ್ರ ಇಲ್ಲಿಲ್ಲ. ಸಿನಿಮಾ ಇಲ್ಲಿ ಅಪ್ಪಟ ಸಿನಿಮಾ ಆಗಿಯೇ ನಮ್ಮನ್ನು ಮುಟ್ಟುತ್ತದೆ. ಕತೆಗೆ ಅಗತ್ಯವಿಲ್ಲದ ಏನನ್ನೂ ಅವರು ಚಿತ್ರದೊಳಗೆ ತಂದಿಲ್ಲ. 

9. ಪ್ರಶಾಂತ್ ನೀಲ್ ನಮ್ಮ ಜಗತ್ತಿನ ಕತೆ ಹೇಳುತ್ತಿಲ್ಲ. ನಮಗೆ ಗೊತ್ತಿಲ್ಲದ ಕತೆಯೊಂದನ್ನು ಹೇಳುತ್ತಿದ್ದಾರೆ. ಆ ಕತೆ ನಿಜವೋ ಸುಳ್ಳೋ ಚರಿತ್ರೆಯೋ ಕಲ್ಪನೆಯೋ ಅನ್ನುವುದು ಪ್ರೇಕ್ಷಕನಾಗಿ ನನಗೆ ಮುಖ್ಯವಲ್ಲ.  ಆ ಕತೆಯನ್ನು  ನಾನು ನಂಬುವಂತೆ ಅವರು ಹೇಳಿದ್ದಾರಾ ಅನ್ನುವುದು ಮಾತ್ರ ಮುಖ್ಯ. 

10. ಚಿತ್ರದಲ್ಲಿ ವೈಭವೀಕರಣ ಇಲ್ಲ. ಇಡೀ ಕತೆಯನ್ನೇ ಅವರು ಉತ್ಪ್ರೇಕ್ಷಾಲಂಕಾರದಲ್ಲಿ ಹೇಳಲು ಹೊರಟಿದ್ದಾರೆ.  ಅದೊಂದು ಕಥನ ಶೈಲಿ ಮತ್ತು ತಂತ್ರ.  ಅದಕ್ಕೆ ಅವರು ಬಳಸಿರುವ ಕಲರ್ ಥೀಮ್, ಹಿನ್ನೆಲೆ ಸಂಗೀತ, ಛಾಯಾಗ್ರಾಹಕನ ಕಲ್ಪನೆ, ನಾಯಕ ಪಾತ್ರದ ವೈಭವೀಕರಣ ಎಲ್ಲವೂ ಪೂರಕ. ಕೆಜಿಎಫ್ ಬಹುಕಾಲ ನೆನಪಲ್ಲಿ ಉಳಿಯುವಂಥ ಸಿನಿಮಾ. ಅಂಥ ಸಿನಿಮಾವನ್ನು ಕೊಟ್ಟ ತಂಡಕ್ಕೆ ಅಭಿನಂದನೆ.

"

Follow Us:
Download App:
  • android
  • ios