ತುಳುನಾಡ ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು, ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು 'ಕಾಂತಾರ' ಚಿತ್ರದ ಮೂಲಕ ದೈವಾರಾಧನೆಯನ್ನು ವ್ಯಾಪಾರೀಕರಣ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಡಿ.9): ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು ಇಬ್ಬರೂ ಕೂಡ ವ್ಯಾಪಾರಿಗಳು. ಕಾಂತಾರದ ಮೂಲದ ದೈವಾರಾಧನೆಯನ್ನು ವ್ಯಾಪಾರಕ್ಕೆ ಹಾಕಿದ್ದಾರೆ ಎಂದು ತುಳುನಾಡ ದೈವಾರಾಧಕ ತಮ್ಮಣ್ಣ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ದೈವಾರಾಧನೆಯ ಬಗ್ಗೆ ರಿಷಬ್ ಶೆಟ್ಟಿ ನನ್ನಲ್ಲೂ ಕೆಲವು ವಿಚಾರಗಳನ್ನು ಕೇಳಿದ್ದರು. ಆದರೆ, ನಾನು ಹೇಳಲು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ತುಳುನಾಡ ದೈವಾರಾಧಕ ತಮ್ಮಣ್ಣ ಶೆಟ್ಟಿ. 'ರಿಷಬ್ ಶೆಟ್ಟಿ ನನ್ನಲ್ಲೂ ಕೆಲ ದೈವಾರಾಧನೆಯ ವಿಷಯಗಳನ್ನು ಕೇಳಿದ್ದಾಗ ಹೇಳಲು ನಿರಾಕರಿಸಿದ್ದೆ. ರಿಷಬ್ ಶೆಟ್ಟಿಯನ್ನ ತೃಪ್ತಿ ಪಡಿಸಲು ಇವರ ಸ್ವಾರ್ಥಕ್ಕಾಗಿ ದೈವಾರಾಧನೆಯನ್ನು ಮಾರಿಕೊಂಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೆಕೆ ಕೋಲ, ಎಣ್ಣೆಬೂಳ್ಯ ಸಂಪ್ರದಾಯ ದೈವಾರಾಧನೆಗೆ ತದ್ವಿರುದ್ದವಾಗಿ ನಡೆದಿದೆ. ದೈವಾರಾಧನೆಯಲ್ಲಿ ಹಿರಿಯರ ಕಾಲದಿಂದಲೂ ಹರಕೆಯ ನೇಮ ಅಂತ ಕೊಡಲ್ಲ, ಅದು ಕುಟುಂಬದಲ್ಲಿ ಮಾತ್ರ ಮಾಡಲಾಗುತ್ತದೆ. ಇದು ರಿಷಬ್ ಶೆಟ್ಟಿಯವರಲ್ಲಿ ಇವರು ಹೇಳಿಸಿ ರಾಯಭಾರಿಯನ್ನಾಗಿ ಮಾಡಿಸಿ ಕ್ಷೇತ್ರಕ್ಕೆ ಜನ ತರಿಸಲು ದುರುದ್ದೇಶದಿಂದ ಆಗಿರೋದು ಎಂದಿದ್ದಾರೆ.
ದೈವ ಯಾವತ್ತೂ ತೊಡೆಯ ಮೇಲೆ ಮಲಗೋದಿಲ್ಲ
ಕಡ್ಸಲೆ(ಕತ್ತಿ) ತಲೆಗೆ ಬಡಿಯೋದು, ಬಟ್ಟಲನ್ನು ತಲೆಗೆ ಬಡಿಯೋದಾಗಲಿ ದೈವಾರಾಧನೆಯ ನಿಯಮದಲ್ಲಿ ಇಲ್ಲ, ನಾವು ಸಾರ್ವಜನಿಕ ಚರ್ಚೆಗೆ ಸಿದ್ದ. ದೈವ ಯಾವತ್ತೂ ಅಂಗಿ ಹಾಕಿದವನನ್ನು ಮುಟ್ಟೋದಿಲ್ಲ, ದೈವ ಯಾವತ್ತೂ ತೊಡೆಯಲ್ಲಿ ಮಲಗೋದು ಮಾಡುವ ನಿಯಮ ಇಲ್ಲ. ರಿಷಬ್ ಶೆಟ್ಟಿಯನ್ನ ತೃಪ್ತಿ ಪಡಿಸಲು ಇವರ ಸ್ವಾರ್ಥಕ್ಕಾಗಿ ದೈವಾರಾಧನೆಯನ್ನು ಮಾರಿಕೊಂಡಿದ್ದಾರೆ ಅಂತ ಕಾಣುತ್ತಿದೆ. ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು ಇಬ್ಬರೂ ಕೂಡ ವ್ಯಾಪಾರಿಗಳು. ದೈವಾರಾಧನೆಯನ್ನು ವ್ಯಾಪಾರಕ್ಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ದೈವಾರಾಧನೆಯ ಮಾಹಿತಿ ನಾನು ಕೊಟ್ಟಿಲ್ಲ
ಇಲ್ಲಿ ಎಲ್ಲದಕ್ಕೂ ಶಿಕ್ಷೆ ಆಗಿಯೇ ಆಗುತ್ತದೆ, ಈ ನಿಯಮಕ್ಕೆ ಬ್ರಿಟಿಷರಿಂದಲೂ ಅನ್ಯಧರ್ಮಿಯರಿಂದಲೂ ಅಪಚಾರ ಆಗಿಲ್ಲ. ಅಪಚಾರ ಆಗಿದ್ದರೆ ಕೆಲ ವ್ಯಾಪಾರಿ ಮನೋಭಾವದ ದೈವ ನರ್ತಕರಿಂದ ಆಗಿರೋದು. ಮೊದಲು ದೈವ ಭಕ್ತನಾಗಿ ಬರಬೇಕು, ರಿಷಬ್ ಶೆಟ್ಟಿಯ ಮಡಿಲಲ್ಲಿ ಮಲಗೋದು ಸರಿಯಲ್ಲ. ದೈವಾರಾಧನೆಯ ಅಸ್ಮಿತೆ ಉಳಿಯಬೇಕಿದ್ದರೆ ಅವನು ದೈವಾರಧನೆಯ ರಹಸ್ಯಗಳನ್ನು ರಿಷಬ್ ಶೆಟ್ಟಿಗೆ ಬಿಟ್ಟು ಕೊಡ್ತಾನಾ? ರಿಷಬ್ ಶೆಟ್ಟಿ ನನ್ನಲ್ಲೂ ಕೆಲ ದೈವಾರಾಧನೆಯ ವಿಷಯಗಳನ್ನು ಹೇಳುವಂತೆ ಕೇಳಿದ್ದರು. ವೈಯಕ್ತಿಕವಾಗಿ ಅವರ ಜನರನ್ನು ಕಳುಹಿಸಿ ಫ್ಲಾಟ್‌ಗೆ ಕರೆದು ವಿಷಯ ಹೇಳಿ ಅಂದಿದ್ದರು. ಆಗ ನಾನು ಸ್ಪಷ್ಟವಾಗಿ ಅವರಿಗೆ ಹೇಳಿದ್ದೆ, ನನ್ನಿಂದ ದೈವಾರಾಧನೆ ಸರಿ ತಪ್ಪುಗಳ ಬಗ್ಗೆ ಮಾಹಿತಿ ಕೊಡಲ್ಲ ಅಂತ. ಎಂಟು ಸಿನಿಮಾದವರು ನನ್ನನ್ನ ಈ ಮೊದಲೇ ಸಂಪರ್ಕಿಸಿದರೂ ನಾನು ಅವರಿಗೆ ಮಾಹಿತಿ ಕೊಟ್ಟಿಲ್ಲ ಎಂದಿದ್ದಾರೆ.
ದೈವಾರಾಧನೆಯನ್ನು ನಾನು ವ್ಯಾಪಾರಿ ದೃಷ್ಟಿಕೋನದಲ್ಲಿ ನೋಡಿಲ್ಲ, ಅದು ನನ್ನ ನಂಬಿಕೆ ಮತ್ತು ಆರಾಧನೆಯ ಸ್ವತ್ತು. ಮೊನ್ನೆ ಹರಕೆ ಕೋಲದಲ್ಲಿ ನಡೆದ ಘಟನೆ ಬಗ್ಗೆ ಎಲ್ಲರಿಗೂ ಒಂದು ಬೇಜಾರಿದೆ ಎಂದು ಹೇಳಿದ್ದಾರೆ.



