ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಳಿಕ ಮಹೇಶ್ ಬಾಬು ಮುಂದಿನ ಪ್ರಾಜೆಕ್ಟ್ ಯಾವುದು? ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ಹೆಸರುಗಳ ನಡುವೆ ಹಾಲಿವುಡ್ ಸಿನಿಮಾದ ಬಗ್ಗೆಯೂ ಚರ್ಚೆ ಶುರುವಾಗಿದೆ.
ಟಾಲಿವುಡ್ನ ಸೂಪರ್ಸ್ಟಾರ್ ಮಹೇಶ್ ಬಾಬು ಸದ್ಯ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಕೇವಲ 10 ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ ಎನ್ನಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಇದೇ ಸಂದರ್ಭದಲ್ಲಿ ‘ವಾರಣಾಸಿ’ ಬಳಿಕ ಮಹೇಶ್ ಬಾಬು ಕೈಗೆತ್ತಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಚಿತ್ರರಂಗದಲ್ಲಿ ಜೋರಾಗಿದೆ.
‘ವಾರಣಾಸಿ’ ಶೂಟಿಂಗ್ಗೆ ಶೀಘ್ರದಲ್ಲೇ ಕುಂಬಳಕಾಯಿ?
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ವಾರಣಾಸಿ’ ಪ್ಯಾನ್ ವರ್ಲ್ಡ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಗ್ಲೋಬಲ್ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಈ ಚಿತ್ರವನ್ನು ಅದ್ಧೂರಿ ಆ್ಯಕ್ಷನ್ ಅಡ್ವೆಂಚರ್ ಆಗಿ ರೂಪಿಸಲಾಗುತ್ತಿದೆ. ಈ ಸಿನಿಮಾಗಾಗಿ ಮಹೇಶ್ ಬಾಬು ಸುಮಾರು ಎರಡು ವರ್ಷಗಳ ಸಮಯ ಮೀಸಲಿಟ್ಟಿದ್ದಾರೆ.
ಸದ್ಯ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಕೇವಲ 10 ದಿನಗಳ ಕೆಲಸವಷ್ಟೇ ಬಾಕಿ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಕೆಲಸ ಪೂರ್ಣಗೊಂಡರೆ ಚಿತ್ರದ ಶೂಟಿಂಗ್ಗೆ ತೆರೆ ಬೀಳಲಿದೆ. ಹೀಗಿರುವಾಗ ರಾಜಮೌಳಿ ಸಿನಿಮಾದ ನಂತರ ಮಹೇಶ್ ಬಾಬು ಯಾವ ನಿರ್ದೇಶಕರ ಜೊತೆ ಕೈಜೋಡಿಸಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಮಹೇಶ್ ಮುಂದಿನ ಸಿನಿಮಾಗೆ ಸ್ಟಾರ್ ನಿರ್ದೇಶಕರ ಪೈಪೋಟಿ?
ಸಾಮಾನ್ಯವಾಗಿ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ ಬಳಿಕ ಯಾವುದೇ ನಾಯಕನ ಮುಂದಿನ ಚಿತ್ರದ ಆಯ್ಕೆ ಸಾಕಷ್ಟು ಸವಾಲಿನದ್ದಾಗಿರುತ್ತದೆ. ಅದರಲ್ಲೂ ‘ವಾರಣಾಸಿ’ಯಂತಹ ಗ್ಲೋಬಲ್ ಪ್ರಾಜೆಕ್ಟ್ ಬಳಿಕ ಮಹೇಶ್ ಬಾಬು ಯಾವ ರೀತಿಯ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ನಡುವೆ ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ಹಾಗೂ ಬುಚ್ಚಿಬಾಬು ಅವರ ಹೆಸರುಗಳು ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ನಿರ್ದೇಶಕರ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಈ ಪೈಕಿ ಕೆಲವರು ಈಗಾಗಲೇ ಮಹೇಶ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಚರ್ಚೆಯೂ ಚಿತ್ರರಂಗದಲ್ಲಿ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಹೇಶ್ ಬಾಬು ಕೂಡ ಸದ್ಯದವರೆಗೆ ಯಾವ ಹೊಸ ಸಿನಿಮಾವನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಹಾಲಿವುಡ್ ಸಿನಿಮಾದತ್ತಲೂ ಮಹೇಶ್ ಚಿತ್ತ?
‘ವಾರಣಾಸಿ’ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲು ಚಿತ್ರತಂಡ ಯೋಜಿಸಿದೆ. ಹೀಗಾಗಿ ಸಿನಿಮಾ ಬಿಡುಗಡೆಯಾದ ಬಳಿಕ ಸಿಗುವ ಪ್ರತಿಕ್ರಿಯೆ ಮಹೇಶ್ ಬಾಬು ಅವರ ಮುಂದಿನ ಹೆಜ್ಜೆಗೆ ನಿರ್ಣಾಯಕವಾಗಬಹುದು ಎನ್ನಲಾಗುತ್ತಿದೆ. ಚಿತ್ರದ ಗ್ಲೋಬಲ್ ರೆಸ್ಪಾನ್ಸ್ ಆಧರಿಸಿ ಮುಂದಿನ ಸಿನಿಮಾದ ಕಥೆ, ಜಾನರ್ ಹಾಗೂ ಬಜೆಟ್ನ ಪ್ರಮಾಣವನ್ನು ನಿರ್ಧರಿಸುವ ಆಲೋಚನೆಯಲ್ಲಿ ಮಹೇಶ್ ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಇದರ ನಡುವೆ ಮಹೇಶ್ ಬಾಬು ನೇರವಾಗಿ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ನಟಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಆದರೆ ಸದ್ಯ ಇವೆಲ್ಲವೂ ಊಹಾಪೋಹಗಳ ಹಂತದಲ್ಲಿವೆ. ‘ವಾರಣಾಸಿ’ ಬಳಿಕ ಮಹೇಶ್ ಬಾಬು ಯಾವ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ? ಟಾಲಿವುಡ್ನಲ್ಲೇ ಮುಂದುವರಿಯುತ್ತಾರಾ ಅಥವಾ ಹಾಲಿವುಡ್ನತ್ತ ಹೆಜ್ಜೆ ಇಡುತ್ತಾರಾ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.






