ಕನ್ನಡದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಾನ್ಯ ನಾಯ್ಡು ಅವರ ನಿಜ ಜೀವನದ ಕಥೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ನಂತರ ಉನ್ನತ ವ್ಯಾಸಂಗಕ್ಕಾಗಿ ಸಿನಿಮಾ ರಂಗವನ್ನು ತೊರೆದರು.
ಬೆಂಗಳೂರು (ಅ.31): ಬೆಳ್ಳಿಪರದೆಯ ಮೇಲೆ ಸುಂದರ ನಗೆಯಿಂದ ಲಕ್ಷಾಂತರ ರಸಿಕರ ಮನಗೆದ್ದ ಈ ನಟಿಯ ನಿಜ ಜೀವನದ ಕಥೆ ಯಾವುದೇ ಸಿನಿಮಾ ಚಿತ್ರಕಥೆಗಿಂತ ಕಡಿಮೆ ಇಲ್ಲ. ಚಂದನವನದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜೊತೆ 'ವರ್ಷ', ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಶಾಸ್ತ್ರಿ' ಹಾಗೂ ಶ್ರೀಮುರಳಿ ನಟನೆಯ 'ಶಂಭು' ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಮಾನ್ಯ ನಾಯ್ಡು (Mrunal / Manya Naidu), ಬದುಕಿನಲ್ಲಿ ಎದುರಾದ ಕಠಿಣ ಸವಾಲುಗಳು, ಮಿದುಳಿನ ಕ್ಯಾನ್ಸರ್ ಹಾಗೂ ತಾಯ್ತನದ ಕಷ್ಟದ ಹಾದಿಯನ್ನು ಗೆದ್ದು ಇಡೀ ಸಮಾಜಕ್ಕೆ ದೊಡ್ಡ ಸ್ಪೂರ್ತಿಯಾಗಿ ಹೊರಹೊಮ್ಮಿದ್ದಾರೆ!
ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ನಟಿ ಮಾನ್ಯ ನಾಯ್ಡು ಅವರು ಪ್ರಸ್ತುತ ಬಣ್ಣದ ಲೋಕದಿಂದ ದೂರವಾಗಿ ಅಮೆರಿಕದ ಐಷಾರಾಮಿ ನ್ಯೂಯಾರ್ಕ್ ನಗರದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ತೆಲುಗಿನ ಹಿರಿಯ ಪತ್ರಕರ್ತೆ ಪ್ರೇಮಾ ಅವರು ನ್ಯೂಯಾರ್ಕ್ನಲ್ಲಿರುವ ಮಾನ್ಯ ಅವರ ಮನೆಯಲ್ಲೇ ನಡೆಸಿದ ವಿಶೇಷ ಸಂದರ್ಶನದಲ್ಲಿ, ನಟಿ ತಮ್ಮ ವೈಯಕ್ತಿಕ ಜೀವನದ ಕಣ್ಣೀರಿನ ಕಥೆ, ಬದುಕಿನ ಹೋರಾಟವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
14ನೇ ವಯಸ್ಸಿಗೆ ತಂದೆಯ ಸಾವು – 16ನೇ ವಯಸ್ಸಿಗೆ ನಟನೆಗೆ ಎಂಟ್ರಿ
ಮಾನ್ಯ ನಾಯ್ಡು ಅವರ ತಂದೆ ಲಂಡನ್ನಲ್ಲಿ ಪ್ರಸಿದ್ಧ ಕಾರ್ಡಿಯಾಕ್ (ಹೃದಯರೋಗ) ವೈದ್ಯರಾಗಿದ್ದರು. ಅವರ ಕುಟುಂಬಕ್ಕೆ ಕರ್ನಾಟಕದ ಬಳ್ಳಾರಿಯಲ್ಲಿ ಮೈನ್ಸ್ ಬ್ಯುಸಿನೆಸ್ ಇದ್ದಿದ್ದರಿಂದ ಹಳ್ಳಿಯ ಜನರಿಗೆ ಆಸ್ಪತ್ರೆ ಕಟ್ಟಿಸಬೇಕು ಎಂಬ ಆಸೆಯಿಂದ ಲಂಡನ್ ತೊರೆದು ಭಾರತಕ್ಕೆ ಬಂದಿದ್ದರು. ಆದರೆ, ವೈದ್ಯರಾಗಿದ್ದರೂ ಅತಿಯಾಗಿ ಸಿಗರೇಟ್ ಸೇವಿಸುವ ಅಭ್ಯಾಸವಿದ್ದ ಕಾರಣ, 42ನೇ ವಯಸ್ಸಿಗೆ ತಂದೆ ದಿಢೀರ್ ಹೃದಯಾಘಾತದಿಂದ ನಿಧನರಾದರು. ಆ ವೇಳೆ ಮಾನ್ಯ ಅವರಿಗೆ ಕೇವಲ 14 ವರ್ಷ.
ತಂದೆಯ ಅಗಲಿಕೆಯ ಬೆನ್ನಲ್ಲೇ ಸಂಬಂಧಿಕರು ಆಸ್ತಿಯನ್ನೆಲ್ಲಾ ಕಬಳಿಸಿದ್ದರಿಂದ, ಕೇವಲ 10ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆ ಮಾನ್ಯಗೆ ಎದುರಾಯಿತು. ತಮ್ಮ ತಾಯಿಯನ್ನು ನೋಡಿಕೊಳ್ಳಲು ಹಾಗೂ ತಮಗಿಂತ 2 ವರ್ಷ ಚಿಕ್ಕವಳಾಗಿದ್ದ ತಂಗಿಯ ಓದಿನ ವೆಚ್ಚ ಭರಿಸಲು ತಮ್ಮ 16ನೇ ವಯಸ್ಸಿಗೆ ತೆಲುಗಿನ 'ಸೀತಾರಾಮರಾಜು' (ಅಕ್ಕಿನೇನಿ ನಾಗಾರ್ಜುನ್ ಅಭಿನಯದ) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗು ಭಾಷಿಕರಾಗಿದ್ದರೂ ಅಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ ಎಂಬ ಬೇಸರ ಇಂದಿಗೂ ಅವರಿಗಿದೆ. ಆದರೆ ಕನ್ನಡ ಮತ್ತು ಮಲಯಾಳಂ ರಂಗದಲ್ಲಿ ಅವರು ಸೂಪರ್ ಸ್ಟಾರ್ ಆಗಿ ಬೆಳೆದರು.
41 ಸಿನಿಮಾಗಳ ನಂತರ ವಿದ್ಯಾಭ್ಯಾಸ ಪುನರಾರಂಭ – ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಓದು
ಸಿನಿಮಾ ರಂಗದಲ್ಲಿ ಅವಕಾಶಗಳು ಶಾಶ್ವತವಲ್ಲ ಎಂಬುದನ್ನು ಬೇಗನೇ ಅರಿತುಕೊಂಡ ಮಾನ್ಯ, ತಮ್ಮ 20ನೇ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಗಳಿಸಿದ ಹಣವನ್ನೆಲ್ಲಾ ತಾಯಿ-ತಂಗಿಗೆ ನೀಡಿ ತಮ್ಮ ಬದುಕನ್ನು ಹೊಸದಾಗಿ ಆರಂಭಿಸಲು ಲಂಡನ್ಗೆ ತೆರಳಿದರು. 10ನೇ ತರಗತಿಗೆ ನಿಂತುಹೋಗಿದ್ದ ಓದನ್ನು 41 ಸಿನಿಮಾಗಳ ಯಶಸ್ಸಿನ ಬಳಿಕ ಕಷ್ಟಪಟ್ಟು ಮುಂದುವರಿಸಿದರು. ಗಣಿತ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಛಲದಿಂದ ಓದಿ, ಅಮೆರಿಕದ ಪ್ರಸಿದ್ಧ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ (Columbia University) ಸ್ಕಾಲರ್ಶಿಪ್ ಪಡೆದು ಉನ್ನತ ಶಿಕ್ಷಣ ಪೂರ್ಣಗೊಳಿಸಿದರು.
ಐವಿಎಫ್ ಯಾತನೆ ಮತ್ತು 3ನೇ ಹಂತದ ಮಿದುಳಿನ ಕ್ಯಾನ್ಸರ್ ಜಯ
2013ರಲ್ಲಿ ಕಾಲೇಜು ದಿನಗಳ ಗೆಳೆಯ ವಿಕಾಸ್ ಬಾಜಪೈ ಅವರನ್ನು ಪ್ರೀತಿಸಿ ಮದುವೆಯಾದ ಮಾನ್ಯ ಅವರ ತಾಯ್ತನದ ಹಾದಿ ಸುಲಭವಾಗಿರಲಿಲ್ಲ. ಹಾರ್ಮೋನ್ ಅಸಮತೋಲನದಿಂದ ಭಾರಿ ಯಾತನೆ ಅನುಭವಿಸಿದ ಅವರಿಗೆ ಸತತ 5 ಬಾರಿ ಗರ್ಭಪಾತವಾಗಿತ್ತು. ಕೊನೆಗೆ ಭರವಸೆ ಕಳೆದುಕೊಳ್ಳದೆ ಐವಿಎಫ್ (IVF) ಚಿಕಿತ್ಸೆಯ ಮೂಲಕ 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪ್ರಸ್ತುತ ಮಗಳು ಒಮಿಷ್ಕಾಗೆ 10 ವರ್ಷ.
ಬದುಕು ಸುಗಮವಾಯಿತು ಎನ್ನುವಷ್ಟರಲ್ಲಿ ಅವರಿಗೆ ಮತ್ತೊಂದು ಆಘಾತ ಎದುರಾಯಿತು. ಅತ್ತೆ-ಮಾವ ದುಬೈನಲ್ಲಿ ಇದ್ದಿದ್ದರಿಂದ ಪತಿ ವಿಕಾಸ್ ಕೆಲಸದ ನಿಮಿತ್ತ ದುಬೈನಲ್ಲಿದ್ದರೆ, ನ್ಯೂಯಾರ್ಕ್ನ ಮನೆಯಲ್ಲಿ ಮಾನ್ಯ ಹಾಗೂ 8 ವರ್ಷದ ಮಗಳು ಒಮಿಷ್ಕಾ ಮಾತ್ರ ಇರುತ್ತಿದ್ದರು. ಅದೊಂದು ದಿನ ಮಾನ್ಯ ಇದ್ದಕ್ಕಿದ್ದಂತೆ ಬಾತ್ರೂಮ್ನಲ್ಲಿ ಕುಸಿದುಬಿದ್ದರು. 8 ವರ್ಷದ ಪುಟ್ಟ ಮಗಳು ಒಮಿಷ್ಕಾ ತಕ್ಷಣವೇ ತಾಯಿಯ ಫೋನ್ನಿಂದ ಆಸ್ಪತ್ರೆಗೆ ಕರೆ ಮಾಡಿ ವಿಷಯ ತಿಳಿಸಿ ಪ್ರಾಣ ಉಳಿಸಿದಳು. ತಪಾಸಣೆಯ ವೇಳೆ ಮಾನ್ಯಗೆ ಮೂರನೇ ಹಂತದ ಮಿದುಳಿನ ಕ್ಯಾನ್ಸರ್ (Stage-3 Brain Cancer) ಇರುವುದು ಪತ್ತೆಯಾಯಿತು. ವೈದ್ಯರು ಆತಂಕ ವ್ಯಕ್ತಪಡಿಸಿದರೂ, ದೃಢವಿಶ್ವಾಸ, ಆಧ್ಯಾತ್ಮಿಕ ನಂಬಿಕೆ ಹಾಗೂ ಮಗಳ ಪ್ರೀತಿಯಿಂದ ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾದರು.
ನ್ಯೂಯಾರ್ಕ್ ಸಿಟಿ ಬ್ಯಾಂಕ್ ಸಿಇಒ: ₹6 ಕೋಟಿಗೂ ಅಧಿಕ ಸ್ಯಾಲರಿ!
ಸಿನಿಮಾ ರಂಗವನ್ನು ಸಂಪೂರ್ಣ ತೊರೆದು ಶೈಕ್ಷಣಿಕವಾಗಿ ಬೆಳೆದ ಮಾನ್ಯ ನಾಯ್ಡು, ಪ್ರಸ್ತುತ ಅಮೆರಿಕದ ನ್ಯೂಯಾರ್ಕ್ ಸೆಂಟ್ರಲ್ ಸಿಟಿಯಲ್ಲಿ ಸ್ವಂತ ಮನೆ ಹೊಂದಿದ್ದು, ಜಗತ್ತಿನ ಪ್ರಮುಖ ಹಣಕಾಸು ಸಂಸ್ಥೆಯಾದ 'ಸಿಟಿ ಬ್ಯಾಂಕ್'ನಲ್ಲಿ (Citi Bank) ದೊಡ್ಡ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪ್ರಸ್ತುತ ವಾರ್ಷಿಕ ಸಂಭಾವನೆಯು ನಟಿ ಅನುಷ್ಕಾ ಶೆಟ್ಟಿ ಅವರಂತಹ ಮುಂಚೂಣಿ ನಟಿಯರ ಸಂಭಾವನೆಗಿಂತಲೂ ಹೆಚ್ಚಿದ್ದು, ₹6 ಕೋಟಿಗೂ ಅಧಿಕವಾಗಿದೆ!
2005ರಲ್ಲಿ 'ಶಂಭು' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ನಟ ಶ್ರೀಮುರಳಿ ಹಾಗೂ ಮಾನ್ಯ ಕಳೆದ 21 ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದಾರೆ. "ನನ್ನ ಜೀವನದ ಪ್ರತಿಯೊಂದು ಏಳು-ಬೀಳುಗಳಲ್ಲೂ ಕನ್ನಡದ ನಟ ಶ್ರೀಮುರಳಿ ನನ್ನ ಜೊತೆಗಿದ್ದರು, ಅವರ ಕುಟುಂಬ ನನಗೆ ಅತ್ಯಂತ ಆಪ್ತ" ಎಂದು ಮಾನ್ಯ ಸ್ಮರಿಸಿದ್ದಾರೆ. ಮಹಿಳೆಯರು ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡಬಾರದು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿರುವ ಮಾನ್ಯ ನಾಯ್ಡು, ಪ್ರಸ್ತುತ ತಮ್ಮ ಆತ್ಮಕಥೆಯ ಪುಸ್ತಕ ಬರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಸ್ಪೂರ್ತಿದಾಯಕ ಬದುಕಿನ ಬಯೋಪಿಕ್ (Biopic) ಚಿತ್ರವನ್ನು ತಾವೇ ಸ್ವತಃ ನಿರ್ದೇಶನ ಮಾಡಿ ಸಿನಿಮಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.






