ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಆ್ಯಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಜೊತೆ ನಟಿಸಿರುವ ಮಮಿತಾ ಬೈಜು, ತಮ್ಮ ಬಾಲ್ಯದ ಕ್ರಶ್ ಜೊತೆ ನಟಿಸಿದ್ದು ಕನಸು ನನಸಾದ ಹಾಗೆ ಇದೆ ಎಂದಿದ್ದಾರೆ. ಈ ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ.

ನಟ ಸೂರ್ಯ ನಾಯಕರಾಗಿರುವ ಮತ್ತು ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಆ್ಯಂಡ್ ಸನ್ಸ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಮಮಿತಾ ಬೈಜು ಅವರು ಸೂರ್ಯಗೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 14 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಇದೀಗ, ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಮಿತಾ ಬೈಜು ಅವರು ಸೂರ್ಯ ಬಗ್ಗೆ ಆಡಿದ ಮಾತುಗಳು ಭಾರೀ ಚರ್ಚೆಯಾಗುತ್ತಿವೆ. ತಾನು ಸಾವಿರಾರು ಹುಡುಗಿಯರ ಕನಸಿನಲ್ಲಿ ಬದುಕುತ್ತಿದ್ದೇನೆ ಮತ್ತು ಚಿಕ್ಕಂದಿನಿಂದಲೂ ಸೂರ್ಯ ತನ್ನ ಕ್ರಶ್ ಆಗಿದ್ದರು ಎಂದು ಮಮಿತಾ ಹೇಳಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಮಿತಾ, "ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಸಾವಿರಾರು ಹುಡುಗಿಯರ ಕನಸಲ್ಲಿ ನಾನೀಗ ಬದುಕ್ತಿದ್ದೀನಿ. ಸೂರ್ಯ ಸರ್ ನನ್ನ ಬಾಲ್ಯದ ಕ್ರಶ್. 'ಗಜನಿ' ಸಿನಿಮಾ ನೋಡಿದಾಗಿನಿಂದ ಅವರ ಮೇಲಿನ ಅಭಿಮಾನ ಶುರುವಾಗಿದ್ದು. ಇದಕ್ಕೂ ಮುನ್ನ ನಾವಿಬ್ಬರೂ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದೆ. ಅವರಿಂದ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರ ಶಿಸ್ತು, ಒಂದು ದೃಶ್ಯವನ್ನು ಅವರು ನೋಡುವ ರೀತಿ, ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್‌ನಲ್ಲಿ ಅವರ ನಡವಳಿಕೆ... ಎಲ್ಲವೂ ನನಗೆ ದೊಡ್ಡ ಸ್ಫೂರ್ತಿ," ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಫಾರ್ಚೂನ್ ಫೋರ್ ಸಿನಿಮಾಸ್ ಸಹಯೋಗದೊಂದಿಗೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗ ವಂಶಿ ಮತ್ತು ಸಾಯಿ ಸೌಜನ್ಯ ಅವರು 'ವಿಶ್ವನಾಥ್ ಆ್ಯಂಡ್ ಸನ್ಸ್' ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಕರ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಜಿ.ವಿ. ಪ್ರಕಾಶ್ ಕುಮಾರ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ 'ಪಟ್ಟಾಂಪೂಚಿ' ಎಂಬ ಮೊದಲ ಹಾಡು ಸೂಪರ್ ಹಿಟ್ ಆಗಿದೆ. ಈ ಚಿತ್ರವು ಬಿಡುಗಡೆಗೂ ಮುನ್ನವೇ 300 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿ ದಾಖಲೆ ಬರೆದಿದೆ. ಇದು ಸೂರ್ಯ ಅವರ ವೃತ್ತಿಜೀವನದಲ್ಲಿಯೇ ಅತಿ ದೊಡ್ಡ ಪ್ರೀ-ರಿಲೀಸ್ ಬಿಸಿನೆಸ್ ಆಗಿದೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್

ಈ ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಪಡೆದುಕೊಂಡಿದೆ. ಸುಮಾರು 85 ಕೋಟಿ ರೂಪಾಯಿಗಳಿಗೆ ನೆಟ್‌ಫ್ಲಿಕ್ಸ್ ಒಟಿಟಿ ಹಕ್ಕನ್ನು ಖರೀದಿಸಿದೆ. ಸೂರ್ಯ ಅವರ 46ನೇ ಚಿತ್ರವಾಗಿರುವ 'ವಿಶ್ವನಾಥ್ ಆ್ಯಂಡ್ ಸನ್ಸ್', ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಲಕ್ಕಿ ಭಾಸ್ಕರ್' ನಂತರ ವೆಂಕಿ ಅಟ್ಲೂರಿ ನಿರ್ದೇಶಿಸುತ್ತಿರುವ ಸಿನಿಮಾವಾಗಿದೆ. ಸ್ವತಃ ನಿರ್ದೇಶಕ ವೆಂಕಿ ಅಟ್ಲೂರಿ ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರವೀನಾ ಟಂಡನ್, ರಾಧಿಕಾ ಶರತ್‌ಕುಮಾರ್, ಭವಾನಿ ಶ್ರೀ ಚಿತ್ರದ ಇತರ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎನ್ನುವ ಸೂಚನೆಯನ್ನು ನೀಡಿವೆ.